×
Ad

ಬ್ಯಾಂಕ್ ಬಾಗಿಲಲ್ಲಿ ತಲ್ಲಣಿಸಿದ ಭಾರತ

Update: 2016-11-12 19:22 IST

ಹೊಸದಿಲ್ಲಿ, ನ.12: ಸತತ ಮೂರನೇ ದಿನವೂ ವೃದ್ಧರು, ಮಹಿಳೆಯರೆನ್ನದೆ ಸಾವಿರಾರು ಜನರು ತಮ್ಮಲ್ಲಿರುವ ನೋಟುಗಳ ಬದಲಾವಣೆಗೆ ಬ್ಯಾಂಕ್‌ಗಳ ಎದುರು ಮೈಲುಗಟ್ಟಲೆ ಸರದಿ ಸಾಲಿನಲ್ಲಿ ತಾಸುಗಟ್ಟಲೆ ನಿಂತು ಕಾಯುತ್ತಿದದ ದೃಶ್ಯ ದೇಶದೆಲ್ಲೆಡೆ ಸಾಮಾನ್ಯವಾಗಿದ್ದು ಆಕ್ರೋಶ ಮುಗಿಲು ಮುಟ್ಟಿದೆ. ಇದೇ ಸಂದರ್ಭದಲ್ಲಿ ಕಾರ್ಕಳದಲ್ಲಿ ಹಣ ಬದಲಾವಣೆಗೆ ಸಾಲಲ್ಲಿ ನಿಂತಿದ್ದ ವೃದ್ಧರೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ದೇಶದ ಹಲವೆಡೆ ಮಹಿಳೆಯರು, ವೃದ್ಧರು ಅಸ್ವಸ್ಥರಾಗಿದ್ದಾರೆ. ಮುಂಬೈಯಲ್ಲಿ ಆಕ್ರೋಶಗೊಂಡ ಶ್ರೀಸಾಮಾನ್ಯರು ಬ್ಯಾಂಕ್ ಬಾಗಿಲನ್ನು ಧ್ವಂಸಗೈದಿದ್ದಾರೆ. ಶುಕ್ರವಾರ ದೇಶದಾದ್ಯಂತ 2,02,000ದಷ್ಟು ಎಟಿಎಂಗಳು ಬಾಗಿಲು ಮುಚ್ಚಿದ್ದವು. 500, 100 ರೂ.ಗಳ ಕೊರತೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಇನ್ನು ಕೆಲವು ಎಟಿಎಂ ಕೇಂದ್ರಗಳು ಬೆಳಿಗ್ಗೆ ಸ್ವಲ್ಪ ಹೊತ್ತು ಕಾರ್ಯಾಚರಿಸಿದರೂ, ಕೆಲವೇ ಗಂಟೆಗಳಲ್ಲಿ ಹಣ ಮುಗಿಯಿತು ಎಂಬ ಕಾರಣ ನೀಡಿ ಬಾಗಿಲು ಮುಚ್ಚಿಕೊಂಡವು.

    ‘ಅವರು ಘೋರ ತಪ್ಪೆಸಗಿದ್ದಾರೆ...‘ ಇದು ದೇಶದ ಬಹುತೇಕ ಜನರ ಪ್ರತಿಕ್ರಿಯೆ. ಈ ಜನ ಟೀಕಿಸುತ್ತಿರುವುದು ಪ್ರಧಾನಿ ನರೇಂದ್ರ ಮೋದಿಯವರನ್ನು. ಅಧಿಕ ವೌಲ್ಯದ ನೋಟುಗಳ ಅಮಾನ್ಯ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ದೇಶದ ಮಂದಿ, ಈ ನಿರ್ಧಾರದ ಜಾರಿಯಲ್ಲಾದ ಎಡರು ತೊಡರು, ದೇಶದ ಶ್ರೀಸಾಮಾನ್ಯ ಅನುಭವಿಸುತ್ತಿರುವ ಮಾನಸಿಕ ಕಿರಿಕಿರಿ, ಮುಂಜಾನೆಯಿಂದ ಇಳಿ ಸಂಜೆಯವರೆಗೆ ಬ್ಯಾಂಕ್‌ನೆದುರು ನೋಟು ಬದಲಿಸಿಕೊಳ್ಳಲು ಕ್ಯೂ ನಿಲ್ಲುವ ದೈಹಿಕ ಶ್ರಮ, ಇದರಿಂದ ಸಂಭವಿಸಿದ ಸಾವು-ನೋವು ಮುಂತಾದ ಘಟನೆಗಳಿಂದ ರೋಸಿ ಹೋಗಿದ್ದಾರೆ. ಕೈಯಲ್ಲಿ ಹಣವಿದ್ದರೂ ಖರ್ಚು ಮಾಡಲಾಗದೆ ಹತಾಶರಾಗಿ ತಮ್ಮ ಆಕ್ರೋಶವನ್ನು ಈ ರೀತಿ ಹೊರಗೆಡವುತ್ತಿದ್ದಾರೆ. ನೋಟು ಬದಲಾವಣೆ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಬಹುದಿತ್ತು ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿ ಬರುತ್ತಿದೆ.
 ಇಲ್ಲಿ ನೋಟು ಬದಲಾವಣೆಗೆ ವೃದ್ಧರು, ಹಿರಿಯ ನಾಗರಿಕರು, ಮಹಿಳೆಯರು ಬ್ಯಾಂಕ್‌ನೆದುರು ಗಂಟೆಗಟ್ಟಲೆ ಉರಿಬಿಸಿಲಿನಲ್ಲಿ ಕಾದು ನಿಂತು ಸುಸ್ತಾದರೆ ಜಪಾನಿನಲ್ಲಿ ಪ್ರಧಾನಿ ಮೋದಿ ಬುಲೆಟ್ ಟ್ರೈನ್‌ನಲ್ಲಿ ತಿರುಗಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ ನೋಟು ಬದಲಾಯಿಸಿಕೊಳ್ಳಲು ಸರದಿ ಸಾಲಿನಲ್ಲಿ ಆರು ಗಂಟೆ ಕಾದು ನಿಂತು ಸುಸ್ತಾಗಿದ್ದ ಪ್ರಭಾತ್ ಕುಮಾರ್ ಎಂಬ ಕಾಲೇಜು ವಿದ್ಯಾರ್ಥಿ.
ಎಲ್ಲೆಡೆ ಗೊಂದಲ, ಅವ್ಯವಸ್ಥೆಯ ವಾತಾವರಣ ಇದೆ ಎಂದಿದ್ದಾರೆ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್. ದೇಶದ ಕಾರ್ಮಿಕ ವರ್ಗದ ಮತ್ತು ಜನಸಾಮಾನ್ಯರ ದೈನಂದಿನ ಜೀವನಕ್ರಮವನ್ನೇ ಮೋದಿ ಬುಡಮೇಲುಗೊಳಿಸಿದ್ದಾರೆ. ದಿನ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುತ್ತಿದ್ದ ಶ್ರೀಸಾಮಾನ್ಯ ಇಂದು ದಿನ ಬೆಳಿಗ್ಗೆದ್ದು ಬ್ಯಾಂಕ್‌ನೆದುರು ಸರದಿ ಸಾಲಿನಲ್ಲಿ ನಿಂತು ಬಸವಳಿಯುವಂತಾಗಿದೆ. ಶ್ರೀಮಂತರು ನೋಟು ಅಮಾನ್ಯ ನಿರ್ಧಾರದ ಪರಿಣಾಮದಿಂದ ಪಾರಾಗಲು ದಾರಿ ಕಂಡುಕೊಂಡಿದ್ದಾರೆ ಎಂದು ಕೇಜ್ರೀವಾಲ್ ಟೀಕಿಸಿದ್ದಾರೆ.

   
    ಮಾರುಕಟ್ಟೆ ಸ್ಥಗಿತ: 50 ರೂ. 100 ರೂ. ಮತ್ತು 500 ರೂ.ಮುಖಬೆಲೆಯ ನೋಟುಗಳ ಕೊರತೆಯ ಪರಿಣಾಮ ದಿಲ್ಲಿಯ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ಕುಸಿದಿದ್ದು ಮಾರುಕಟ್ಟೆಯಲ್ಲಿ ದಿನದ ವ್ಯವಹಾರ ಸ್ಥಗಿತಗೊಳಿಸಲು ವ್ಯಾಪಾರಿಗಳು ಮುಂದಾದರು. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ತರಕಾರಿ ಮಾರುಕಟ್ಟೆ ಬಂದ್ ಮಾಡುವ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಆಜಾದ್‌ಪರ ಹಣ್ಣು ಮತ್ತು ತರಕಾರಿ ವ್ಯಾಪಾರಿಗಳ ಮಂಡಳಿಯ ಅಧ್ಯಕ್ಷ ಮೆಥಾರಾಂ ಕೃಪಾಲಾನಿ ತಿಳಿಸಿದ್ದಾರೆ. ಮುಂಬೈಯಲ್ಲಿ ಉಪ್ಪಿಗೆ 10 ಪಟ್ಟು ಹೆಚ್ಚು ಬೆಲೆ ತೆತ್ತು ಖರೀದಿಸುವ ಗ್ರಾಹಕರಿಂದ ಮಾತ್ರ ಹಳೆಯ ನೋಟುಗಳನ್ನು ಸ್ವೀಕರಿಸುವುದಾಗಿ ವ್ಯಾಪಾರಿಗಳು ವಿಚಿತ್ರ ಶರತ್ತು ಮುಂದಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಕೆಲವು ಮಂದಿ ಒಂದೇ ಬಾರಿ ಪಾವತಿಸುವ ಇನ್ಷೂರೆನ್ಸ್ ಯೋಜನೆಯ ಸದಸ್ಯರಾಗುವ ಮೂಲಕ ಹಳೆಯ ನೋಟುಗಳನ್ನು ವಿಲೇವಾರಿ ಮಾಡಿಕೊಳ್ಳಲು ಉಪಾಯ ಕಂಡುಕೊಂಡಿದ್ದಾರೆ.
  

ದಿಲ್ಲಿಯ ಗ್ರಾಮೀಣ ಪ್ರದೇಶವಾಗಿರುವ ದುಡ್ಕೋ ಎಂಬ ಹಳ್ಳಿಯ ಜನರ ಬವಣೆ ಹೇಳತೀರದಾಗಿದೆ.ಹಣದ ಕೊರತೆಯ ಕಾರಣ ನ.9ರಿಂದ ಹೊಟ್ಟೆಗೆ ಆಹಾರವಿಲ್ಲದ ಪರಿಸ್ಥಿತಿ ತಮ್ಮದಾಗಿದೆ ಎಂದು ಇಲ್ಲಿಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಈ ತಿಂಗಳಲ್ಲಿ ಮಗಳ ಮದುವೆ ಸಮಾರಂಭವಿದೆ. ಚಿನ್ನ, ಬಟ್ಟೆ ಬರೆ ಕೊಳ್ಳಬೇಕಿದೆ. ಆದರೆ ಸೋಮವಾರದ ಬಳಿಕವಷ್ಟೇ ಹಣದ ವ್ಯವಸ್ಥೆ ಮಾಡಬಹುದು ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಕುಟುಂಬವೊಂದು ತಮ್ಮ ಸಮಸ್ಯೆ ಹೇಳಿಕೊಂಡಿದೆ.ದೇಶದ ಗ್ರಾಮೀಣ ಪ್ರದೇಶದ ಜನರು ಹೆಚ್ಚಾಗಿ ದುಡಿದು ತಿನ್ನುವವರು. ಅಂದಿನ ದುಡಿಮೆ ಅಂದಿನ ಖರ್ಚಿಗೆ ಎಂಬ ಪರಿಸ್ಥಿತಿಯಲ್ಲಿರುವವರು . ಬ್ಯಾಂಕ್‌ನಲ್ಲಿ ಖಾತೆ ಇದ್ದರೂ ಅದರಲ್ಲಿ ವ್ಯವಹಾರ ಮಾಡುವವರು ಕಡಿಮೆ. ಇಂತಹ ಜನರು ಈಗ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬ್ಯಾಂಕ್ ಬಾಗಿಲು ಪುಡಿಪುಡಿ
 ಕ್ಯೂನಲ್ಲಿ ನಿಂತು ಹತಾಶರಾದ ಜನರು ತಿರುವನಂತಪುರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೋರ್‌ನ ಶಾಖೆಯೊಂದರ ಗಾಜಿನ ಬಾಗಿಲನ್ನು ಪುಡಿ ಮಾಡಿದ ಘಟನೆ ನಡೆದಿದೆ.
ಬ್ಯಾಂಕ್‌ನ ವವ್ವಕ್ಕಂ ಶಾಖೆಯಲ್ಲಿ ಮುಂಜಾನೆಯಿಂದಲೇ ಜನರ ಭಾರೀ ಕ್ಯೂ ಇತ್ತು. ಹೊತ್ತೇರಿದಂತೆ ಕ್ಯೂ ಕೂಡಾ ಬೆಳೆಯುವ ಲಕ್ಷಣ ಕಂಡುಬಂದಾಗ ಬ್ಯಾಂಕ್‌ನ ಸಿಬ್ಬಂದಿ ಬ್ಯಾಂಕ್‌ನ ಶಟರ್ ಮುಚ್ಚಿದ್ದಾರೆ. ಈ ವೇಳೆಗೆ ಬ್ಯಾಂಕ್‌ನ ಒಳಗಡೆ ಸುಮಾರು 200ರಷ್ಟು ಗ್ರಾಹಕರಿದ್ದರು.
 ಇದರಿಂದ ಸರದಿ ಸಾಲಿನಲ್ಲಿ ನಿಂತಿದ್ದವರು ಆಕ್ರೋಶಗೊಂಡು ಬ್ಯಾಂಕಿನ ಗಾಜಿನ ಬಾಗಿಲನ್ನು ಪುಡಿ ಮಾಡಿದ್ದಾರೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಕೂಡಲೇ ಧಾವಿಸಿ ಬಂದ ಪೊಲೀಸರು ಜನರನ್ನು ನಿಯಂತ್ರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News