ದಿಲ್ಲಿ, ಉತ್ತರ ಪ್ರದೇಶಗಳಲ್ಲಿ ಉಪ್ಪಿನ ಬೆಲೆ ಕೆ.ಜಿ.ಗೆ 300 ರೂ.!

Update: 2016-11-12 14:27 GMT

ಹೊಸದಿಲ್ಲಿ, ನ.12: ದಿಲ್ಲಿ, ರಾಷ್ಟ್ರ ರಾಜಧಾನಿ ವಲಯ(ಎನ್‌ಸಿಆರ್) ಹಾಗೂ ಉತ್ತರ ಪ್ರದೇಶಗಳ ವಿವಿಧ ಭಾಗಗಳಲ್ಲಿ ಉಪ್ಪಿನ ಬೆಲೆ 300 ರೂ.ವನ್ನು ದಾಟಿದ್ದು, ದೇಶಾದ್ಯಂತ ಉಪ್ಪಿನ ಕುರಿತಂತೆ ತೀವ್ರ ವದಂತಿಗಳು ಹರಡುತ್ತಿವೆ. ಇದೇ ಸಂದರ್ಭದಲ್ಲಿ ಅಂತಹ ಯಾವುದೇ ಅಭಾವವಿಲ್ಲವೆಂದು ಕೇಂದ್ರ ಹಾಗೂ ದಿಲ್ಲಿ ಸರಕಾರಗಳು ಶುಕ್ರವಾರ ಸ್ಪಷ್ಟಪಡಿಸಿವೆ.
ಉಪ್ಪಿನ ಅಭಾವವಾಗಿಲ್ಲ. ನ್ಯಾಯೋಚಿತ ದರದಲ್ಲಿ ಉಪ್ಪು ಲಭಿಸುವಂತೆ ಖಚಿತಪಡಿಸುವ ಎಲ್ಲ ಅಧಿಕಾರ ರಾಜ್ಯ ಸರಕಾರಗಳಿಗಿದೆಯೆಂದು ಕೇಂದ್ರ ಸರಕಾರದ ವಕ್ತಾರರೊಬ್ಬರು ತಿಳಿಸಿದ್ದಾರೆ.

ದಿಲ್ಲಿ, ಎನ್‌ಆರ್‌ಸಿಗಳಲ್ಲಿ ಉಪ್ಪು ಕಿ.ಗ್ರಾಂಗೆ ರೂ. 250 ಹಾಗೂ ಉತ್ತರಪ್ರದೇಶದಲ್ಲಿ ರೂ.400ಕ್ಕೆ ತಲುಪಿದೆಯೆಂಬ ವದಂತಿ ಹರಡಿದ ಬಳಿಕ ಸರಕಾರದ ಈ ಸ್ಪಷ್ಟೀಕರಣ ಹೊರಟಿದೆ. ಈ ವದಂತಿ ನೊಯ್ಡೆ, ಲಕ್ಷ್ಮೀನಗರ್, ಚಾಂದನಿಚೌಕ್ ಹಾಗೂ ದಿಲ್ಲಿಯ ಕೆಲವು ಪ್ರದೇಶಗಳಲ್ಲಿ ಜನರನ್ನು ಕಂಗಾಲಾಗಿಸಿತ್ತು.
ಇಲಾಖೆಯು 22 ಅಗತ್ಯ ವಸ್ತುಗಳ ಬೆಲೆಯ ಮೇಲೆ ದಿನವಹಿ ನೆಲೆಯಲ್ಲಿ ನಿಗಾ ಇರಿಸುತ್ತದೆ. ಕೇಂದ್ರ ಸರಕಾರ ವರದಿ ಮಾಡಿರುವ ದೇಶಾದ್ಯಂತದ ಬೆಲೆಗಳನುಸಾರ, ಉಪ್ಪು ಅಥವಾ ಇತರ ವಸ್ತುಗಳ ಬೆಲೆಗಳಲ್ಲಿ ಯಾವುದೇ ಏರಿಕೆಯಾಗಿಲ್ಲವೆಂದು ಆಹಾರ ಮತ್ತು ಬಳಕೆದಾರ ವ್ಯವಹಾರಗಳ ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ.


ಉಪ್ಪು ಪೂರೈಕೆ ಮತ್ತು ವಿತರಣೆಯಲ್ಲಿ ಯಾವುದೇ ತೊಡಕುಗಳು ಉಂಟಾಗಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೇ ಸಂದರ್ಭದಲ್ಲಿ, ಉಪ್ಪು ಅಭಾವ ಒಂದು ವದಂತಿ ಎಂದು ಟ್ಪೀಟಿಸಿದ್ದಾರೆ. ಕೆಲವು ಜನರು ಸಕ್ಕರೆ ಮತ್ತು ಉಪ್ಪಿನ ಅಭಾವಗಳ ಕುರಿತಂತೆ ವದಂತಿ ಹಬ್ಬಿಸುತ್ತಿದ್ದಾರೆ. ಆದರೆ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ. ಇದೇ ಸಂದರ್ಭದಲಿ ದಿಲ್ಲಿ ಆಹಾರ ಪೂರೈಕೆ ಸಚಿವ ಇಮ್ರಾನ್ ಹುಸೈನ್ ತುರ್ತು ಸಭೆಯೊಂದನ್ನು ಕರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News