×
Ad

ನೋಟು ಅಮಾನ್ಯ ನಿರ್ಧಾರ : ಇದು ಬೃಹತ್ ಸ್ವಚ್ಛತಾ ಅಭಿಯಾನ - ನರೇಂದ್ರ ಮೋದಿ

Update: 2016-11-12 22:13 IST

ಹೊಸದಿಲ್ಲಿ, ನ.12: ಅಧಿಕ ವೌಲ್ಯದ ನೋಟುಗಳ ಅಮಾನ್ಯ ನಿರ್ಧಾರ, ಕಪ್ಪುಹಣ ಹೊಂದಿರುವ ವ್ಯಕ್ತಿಗಳ ವಿರುದ್ಧ ಕೇಂದ್ರ ಸರಕಾರ ಕೈಗೊಂಡಿರುವ ಬೃಹತ್ ಸ್ವಚ್ಛತಾ ಅಭಿಯಾನ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಲೂಟಿ ಮಾಡಲಾಗಿರುವ ಹಣವನ್ನು ವಾಪಸು ತರಲಾಗುವುದು ಮತ್ತು ಇನ್ನು ಮುಂದೆ ದೇಶದಲ್ಲಿ ಎಲ್ಲರಿಗೂ ಸಮಾನ ನಿಯಮಗಳು ಅನ್ವಯವಾಗುತ್ತದೆ ಎಂದಿದ್ದಾರೆ. ಜಪಾನ್‌ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಮೋದಿ, 500 ಮತ್ತು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಕ್ರಮದಿಂದ ಭಾರತದಲ್ಲಿ ಜನರು ಪಡುತ್ತಿರುವ ಬವಣೆಯ ಬಗ್ಗೆ ಅರಿವಿದೆ. ಆದರೆ ರಾಷ್ಟ್ರದ ಹಿತದೃಷ್ಟಿಯ ನಿಟ್ಟಿನಲ್ಲಿ ಇದು ಅಗತ್ಯವಾಗಿದೆ. ಹಲವರ ಮನೆಯಲ್ಲಿ ಮದುವೆ ಸಮಾರಂಭಗಳಿವೆ. ಹಲವರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಾಕಷ್ಟು ತೊಂದರೆಗೆ ಒಳಗಾದರೂ ಸರಕಾರದ ನಿರ್ಧಾರವನ್ನು ಒಪ್ಪಿಕೊಂಡ ದೇಶದ ಜನರನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು.

 ಇದು ಆತುರದ ನಿರ್ಧಾರವಲ್ಲ . ಲೆಕ್ಕ ನೀಡಿಲ್ಲದ ಸಂಪತ್ತಿನ ಬಗ್ಗೆ ತಿಳಿಸಲು ನಾವು ಸೆಪ್ಟೆಂಬರ್‌ವರೆಗೆ 50 ದಿನಗಳ ಸಮಯ ಕೊಟ್ಟಿದ್ದೇವೆ. ಆ ಬಳಿಕ ನೋಟು ಅಮಾನ್ಯ ನಿರ್ಧಾರ ಘೋಷಿಸಿದ್ದೇವೆ ಎಂದರು.
ಕಪ್ಪು ಹಣದ ವಿರುದ್ಧ ಮತ್ತಷ್ಟು ಕಾರ್ಯಾಚರಣೆಯ ಸುಳಿವು ನೀಡಿದ ಮೋದಿ, ಡಿಸೆಂಬರ್ 30ರ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಲಾಗದು ಎಂದರು. (ಡಿ.30 ಬ್ಯಾಂಕ್‌ಗಳಲ್ಲಿ ನೋಟು ಬದಲಿಸಿಕೊಳ್ಳಲು ಅಂತಿಮ ದಿನವಾಗಿದೆ).
ಈ ಯೋಜನೆಯ ಬಳಿಕ ನಿಮ್ಮನ್ನು (ಕಪ್ಪು ಹಣ ಹೊಂದಿದವರನ್ನು) ಶಿಕ್ಷಿಸಲು ಹೊಸ ಯೋಜನೆಯೊಂದು ಅನುಷ್ಠಾನಕ್ಕೆ ಬರಲಾರದು ಎಂದು ಖಾತರಿ ನೀಡಲಾಗದು. ಲೆಕ್ಕತಪ್ಪಿಸಿದ ಪ್ರಕರಣಗಳು ಕಂಡುಬಂದರೆ, ಇಂತಹ ಖಾತೆಗಳ ದಾಖಲೆಗಳನ್ನು ಸ್ವಾತಂತ್ರ ದೊರೆತ ಕಾಲದಿಂದ ಪರಿಶೀಲನೆ ನಡೆಸಲೂ ಹಿಂಜರಿಯುವುದಿಲ್ಲ. ಈ ಕಾರ್ಯಕ್ಕೆ ಸಾಕಷ್ಟು ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು.
ಪ್ರಾಮಾಣಿಕ ಜನರು ಎಂದೂ ತೊಂದರೆಗೆ ಒಳಗಾಗುವುದಿಲ್ಲ. ಆದರೆ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ನನ್ನ ಬಗ್ಗೆ ಗೊತ್ತಿದ್ದವರು ನನ್ನಷ್ಟೇ ಬುದ್ಧಿವಂತರಾಗಿದ್ದಾರೆ. ಇದನ್ನು (ಕಪ್ಪುಹಣವನ್ನು) ಬ್ಯಾಂಕ್‌ಗೆ ನೀಡುವುದಕ್ಕಿಂತ ಗಂಗೆಗೆ ಅರ್ಪಿಸುವುದೇ ಒಳಿತು ಎಂದು ಅವರು ಯೋಚಿಸುತ್ತಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News