×
Ad

ಬಿಜೆಪಿ ಆಪ್ತರಿಗೆ ಮೊದಲೇ ಮಾಹಿತಿ ಆರೋಪ

Update: 2016-11-13 08:59 IST

ಹೊಸದಿಲ್ಲಿ,ನ. 13: ನೋಟುಗಳ ಚಲಾವಣೆ ರದ್ದತಿ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರ ಬೇಜವಾಬ್ದಾರಿಯುತ ಎಂದು ಟೀಕಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕೆಂಡ ಕಾರಿದ್ದಾರೆ.

ಕೇಂದ್ರದ ನಡೆ ಎನ್‌ಡಿಎ ಸರ್ಕಾರದ ದೊಡ್ಡ ಹಗರಣ. ಬಿಜೆಪಿ ಹಾಗೂ ಇತರ ಕೆಲ ಆಪ್ತರಿಗೆ ಈ ಮಾಹಿತಿಯನ್ನು ಮೊದಲೇ ಸೋರಿಕೆ ಮಾಡಲಾಗಿತ್ತು ಎಂದು ಕೇಜ್ರಿವಾಲ್ ಬಣ್ಣಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಜೇಟ್ಲಿ, ಕೇಜ್ರಿವಾಲ್ ಹೆಸರನ್ನು ಎಲ್ಲೂ ನಮೂದಿಸದೇ, ಆರೋಪಗಳನ್ನು ಅಲ್ಲಗಳೆದರು. ಜುಲೈನಿಂದ ಸೆಪ್ಟಂಬರ್ ಅವಧಿಯಲ್ಲಿ ದೊಡ್ಡ ಮೊತ್ತದ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಡಲಾಗಿತ್ತು ಎಂದು ಕೇಜ್ರಿವಾಲ್ ಆಪಾದಿಸಿದ್ದರು.

"ಆರ್‌ಬಿಐ ದಾಖಲೆಗಳನ್ನು ನಾನು ಪರಿಶೀಲಿಸಿದ್ದೇನೆ. ಸೆಪ್ಟಂಬರ್ ನಲ್ಲಿ ಮಾತ್ರ ಅಧಿಕ ಠೇವಣಿ ಇಡಲಾಗಿದೆ. ಈ ಅಂಕಿ ಅಂಶಗಳನ್ನು ವಿಶ್ಲೇಷಿಸಿದರೆ, ಅದಕ್ಕೆ ಕಾರಣ ಸ್ಪಷ್ಟವಾಗುತ್ತದೆ. ವೇತನ ಆಯೋಗದ ಹಿಂಬಾಕಿಯನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿರುವುದು ಇದಕ್ಕೆ ಕಾರಣ. ಉಳಿದಂತೆ ಅಂಕಿ ಅಂಶ ಸ್ಥಿರವಾಗಿದೆ. ಆಗಸ್ಟ್ 31ರಿಂದ ಸೆಪ್ಟಂಬರ್ 15ರವರೆಗಿನ ಅಂಕಿ ಅಂಶಗಳನ್ನು ಇಟ್ಟುಕೊಂಡು ಈ ಕಾಲ್ಪನಿಕ ಸಿದ್ಧಾಂತ ಮುಂದಿಡಲಾಗುತ್ತಿದೆ ಎಂದು ವಿಶ್ಲೇಷಿಸಿದರು.

ರಾಜಕೀಯ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಪ್ರಯತ್ನವೂ ಕೆಲವರಿಗೆ ಸಮಸ್ಯೆಯಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ತರಲು ಒಂದು ವಾರದ ಕಾಲಾವಕಾಶ ನೀಡಬೇಕಿತ್ತು ಎಂದು ಕೆಲವರು ಆಗ್ರಹಿಸಿದ್ದಾರೆ ಎಂದು ಮುಲಾಯಂ ಸಿಂಗ್ ಯಾದವ್ ಹೆಸರು ಉಲ್ಲೇಖಿಸದೇ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News