ಶುಭ ಸುದ್ದಿ: 500 ರೂಪಾಯಿ ಹೊಸ ನೋಟು ಬಂದಿದೆ
ನಾಸಿಕ್, ನ.13: ನೋಟು ಚಲಾವಣೆ ರದ್ದತಿಯಿಂದ ಅಲ್ಲೋಲ ಕಲ್ಲೋಲವಾಗಿರುವ ದೇಶದ ಜನತೆಗೆ ಶುಭ ಸುದ್ದಿ ಬಂದಿದೆ. ಇಲ್ಲಿನ ಕರೆನ್ಸಿ ನೋಟು ಮುದ್ರಣಾಲಯವು ಹೊಸ 500 ರೂಪಾಯಿ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕಿಗೆ ಸಾಗಿಸಲು ವ್ಯವಸ್ಥೆ ಆರಂಭಿಸಿರುವುದರಿಂದ ಸದ್ಯೋಭವಿಷ್ಯದಲ್ಲಿ ಸಮಸ್ಯೆಗೆ ಪರಿಹಾರ ಸಿಗುವ ಸೂಚನೆ ಇದೆ.
"ಸಿಎನ್ಪಿ ಈಗಾಗಲೇ 500 ರೂಪಾಯಿಗಳ 50 ಲಕ್ಷ ನೋಟುಗಳನ್ನು ಆರ್ ಬಿಐಗೆ ಸಾಗಿಸಿದೆ. ಮತ್ತೆ ಐದು ಲಕ್ಷ ನೋಟುಗಳನ್ನು ಬುಧವಾರದ ಒಳಗೆ ವಿತರಿಸಲಾಗುವುದು" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ದೇಶದ ಸೆಕ್ಯುರಿಟಿ ಪ್ರಿಂಟಿಂಗ್ ಹಾಗೂ ಮಿಂಟಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾದ ಒಂಬತ್ತು ಘಟಕಗಳಲ್ಲಿ ನಾಸಿಕ್ ಘಟಕವೂ ಒಂದು. ಇಲ್ಲಿ 20, 50 ಹಾಗೂ 100 ರೂಪಾಯಿಗಳ ನೋಟುಗಳು ದೊಡ್ಡ ಪ್ರಮಾಣದಲ್ಲಿ ಮುದ್ರಣಗೊಳ್ಳುತ್ತವೆ.
500 ರೂಪಾಯಿ ಹಾಗೂ 1000 ರೂಪಾಯಿ ನೋಟುಗಳ ಚಲಾವಣೆಯನ್ನು ಸರಕಾರ ರದ್ದುಪಡಿಸಿದ ಬಳಿಕ 2000 ರೂಪಾಯಿ ನೋಟುಗಳನ್ನು ಸರಕಾರ ಚಲಾವಣೆಗೆ ಬಿಡುಗಡೆ ಮಾಡಿದ್ದರೂ, 500 ರೂಪಾಯಿ ನೋಟುಗಳ ಚಲಾವಣೆ ಆರಂಭವಾಗಿರಲಿಲ್ಲ.
ಆರ್ ಬಿಐ ಈಗಾಗಲೇ 2000 ಹಾಗೂ 500 ರೂಪಾಯಿ ನೋಟುಗಳನ್ನು ಮೈಸೂರು ಹಾಗೂ ಪಶ್ಚಿಮ ಬಂಗಾಳದ ಸಲ್ಬೋನಿ ಘಟಕಗಳಲ್ಲಿ ಮುದ್ರಿಸಿದೆ. ಅಂತೆಯೇ 500 ರೂಪಾಯಿ ನೋಟುಗಳನ್ನು ಮಧ್ಯಪ್ರದೇಶದ ದೇವಾಸ್ ನಲ್ಲಿ ಮುದ್ರಿಸಲಾಗಿದೆ. ಈ ಹಣಕಾಸು ವರ್ಷದ ಅಂತ್ಯದ ಒಳಗಾಗಿ 40 ಕೋಟಿ ನೋಟುಗಳನ್ನು ಬಿಡಗಡೆ ಮಾಡಲು ನಿರ್ಧರಿಸಲಾಗಿದೆ. ಎರಡು ವಾರದ ಹಿಂದೆ ಮುದ್ರಣ ಆರಂಭವಾಗಿತ್ತು.