×
Ad

ನೋಟು ನಿಷೇಧ ಎಫೆಕ್ಟ್: ಮ.ಪ್ರದೇಶದಲ್ಲಿ ಉಪ್ಪಿನ ಮೂಟೆಗಳನ್ನೇ ಕದ್ದೊಯ್ದರು!

Update: 2016-11-13 20:36 IST

ಮೊರೆನಾ(ಮ.ಪ್ರ),ನ.13: ಉಪ್ಪನ್ನು ಸಾಮಾನ್ಯವಾಗಿ ಯಾರೂ ಕದಿಯುವುದಿಲ್ಲ. ಉಪ್ಪು ಕದ್ದವರು ಬರ್ಕತ್ ಆಗುವುದಿಲ್ಲ ಎಂಬ ನಂಬಿಕೆ ಇದಕ್ಕೆ ಕಾರಣ. ಹೀಗಾಗಿ ಅಂಗಡಿಕಾರರು ರಾತ್ರಿಯೂ ಉಪ್ಪಿನ ಮೂಟೆಗಳನ್ನು ಹೊರಗೇ ಇಟ್ಟಿರುತ್ತಾರೆ. ಆದರೆ ಮೋದಿಯವರ ನೋಟು ನಿಷೇಧ ಕ್ರಮದಿಂದಾಗಿ ನಗದು ಹಣದ ಪ್ರವಾಹ ಕಡಿಮೆಯಾಗಿ ಉಪ್ಪಿನ ಕೊರತೆಯುಂಟಾಗಿದೆ ಎಂಬ ವದಂತಿಗಳ ನಡುವೆಯೇ ಇಲ್ಲಿಯ ಎರಡು ಅಂಗಡಿಗಳ ಹೊರಗೆ ಇಟ್ಟಿದ್ದ ಉಪ್ಪಿನ ಮೂಟೆಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ.
ಸಬ್ಜಿ ಮಂಡಿ ಮತ್ತು ಜಿವಾಜಿಗಂಗ್ ಮಾರುಕಟ್ಟೆ ಪ್ರದೇಶಗಳಲ್ಲಿ ನಿನ್ನೆ ಮಧ್ಯರಾತ್ರಿಯ ವೇಳೆಗೆ ಈ ಕಳ್ಳತನಗಳು ನಡೆದಿವೆ.

ಪಿಕಪ್ ವಾಹನಗಳಲ್ಲಿ ಬಂದಿದ್ದ ಮುಸುಕುಧಾರಿ ವ್ಯಕ್ತಿಗಳು ಉಪ್ಪು ತುಂಬಿದ್ದ ಗೋಣಿ ಚೀಲಗಳನ್ನು ಸಾಗಿಸಿದ್ದಾರೆ. ಮಾಹಿತಿ ತಿಳಿದು ಸಮೀಪದ ಕೆಲವು ವ್ಯಾಪಾರಿಗಳು ವಾಹನವನ್ನು ಬೆನ್ನಟ್ಟಿದ್ದರಾದರೂ ಕಳ್ಳರು ಪರಾರಿಯಾಗುವಲ್ಲಿ ಸಫಲರಾಗಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಮಾರುಕಟ್ಟೆಯಲ್ಲಿ ಉಪ್ಪಿನ ಕೊರತೆಯಿದೆ ಎಂಬ ವದಂತಿಗಳನ್ನು ಎರಡು ದಿನಗಳ ಹಿಂದೆ ತಳ್ಳಿಹಾಕಿದ್ದ ಕೇಂದ್ರವು ದೇಶಾದ್ಯಂತ ಸಾಕಷ್ಟು ಉಪ್ಪಿನ ದಾಸ್ತಾನಿದೆ ಎಂದು ಸ್ಪಷ್ಟಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News