×
Ad

ಕೊಹ್ಲಿ-ಜಡೇಜ ಸಾಹಸ: ಸಂಭಾವ್ಯ ಸೋಲಿನಿಂದ ಭಾರತ ಪಾರು

Update: 2016-11-13 23:37 IST

ರಾಜ್‌ಕೋಟ್, ನ.13: ನಾಯಕ ವಿರಾಟ್ ಕೊಹ್ಲಿ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜ ಅವರ ಸಂದರ್ಭೋಚಿತ ಬ್ಯಾಟಿಂಗ್‌ನ ನೆರವಿನಿಂದ ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಪ್ರಯಾಸದ ಡ್ರಾ ಸಾಧಿಸಿದೆ.

 ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದ ಆಂಗ್ಲರು ಸರಣಿಯ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಮಾನಸಿಕ ಮೇಲುಗೈ ಸಾಧಿಸಿದ್ದಾರೆ. ರವಿವಾರ ಇಲ್ಲಿ ನಡೆದ ಐದನೆ ಹಾಗೂ ಅಂತಿಮ ದಿನದಾಟದಲ್ಲಿ ಗೆಲ್ಲಲು 49 ಓವರ್‌ಗಳಲ್ಲಿ 310 ರನ್ ಗುರಿ ಪಡೆದಿದ್ದ ಆತಿಥೇಯ ಭಾರತ 52.3 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 172 ರನ್ ಗಳಿಸಲಷ್ಟೇ ಶಕ್ತವಾಯಿತು.

ಆರಂಭಿಕ ಕುಸಿತಕ್ಕೊಳಗಾಗಿದ್ದ ಭಾರತ  ಒಂದು ಹಂತದಲ್ಲಿ 132 ರನ್‌ಗೆ 6 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಆಗ 7ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 40 ರನ್ ಸೇರಿಸಿದ ಕೊಹ್ಲಿ(ಅಜೇಯ 49ರನ್, 98 ಎಸೆತ, 6 ಬೌಂಡರಿ) ಹಾಗೂ ರವೀಂದ್ರ ಜಡೇಜ(ಅಜೇಯ 32) ತಂಡವನ್ನು ಸಂಭಾವ್ಯ ಸೋಲಿನಿಂದ ಪಾರು ಮಾಡಿದರು.

64 ರನ್‌ಗೆ 3 ವಿಕೆಟ್‌ಗಳನ್ನು ಕಬಳಿಸಿದ ಆದಿಲ್ ರಶೀದ್ ಭಾರತಕ್ಕೆ ನಡುಕ ಹುಟ್ಟಿಸಿದ್ದರು. ಹಿರಿಯ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಖಾತೆ ತೆರೆಯಲು ವಿಫಲರಾದರು. ಇನಿಂಗ್ಸ್‌ನ 2ನೆ ಓವರ್‌ನಲ್ಲಿ ಗಂಭೀರ್ ಔಟಾದರು. ವಿಜಯ್(31) ಹಾಗೂ ಅಶ್ವಿನ್(32) ಎರಡಂಕೆಯ ಸ್ಕೋರ್ ದಾಖಲಿಸಿದರು.

ಇಂಗ್ಲೆಂಡ್ 260/3: ಇದಕ್ಕೆ ಮೊದಲು ಇಂಗ್ಲೆಂಡ್ ತಂಡ ನಾಯಕ ಅಲೆಸ್ಟೈರ್ ಕುಕ್ ಬಾರಿಸಿದ 30ನೆ ಶತಕ (130)ಹಾಗೂ 19ರ ಹರೆಯದ ಯುವ ಆರಂಭಿಕ ಆಟಗಾರ ಹಸೀಬ್ ಹಮೀದ್(82) ನೆರವಿನಿಂದ 3 ವಿಕೆಟ್‌ಗಳ ನಷ್ಟಕ್ಕೆ 260 ರನ್‌ಗೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಭಾರತದ ಗೆಲುವಿಗೆ 310 ರನ್ ಗುರಿ ನೀಡಿತು.

 ಕುಕ್ ಭಾರತ ವಿರುದ್ಧ ಅದರದೇ ನೆಲದಲ್ಲಿ ಐದನೆ ಬಾರಿ ಶತಕ ಬಾರಿಸಿದ ಪ್ರವಾಸಿ ತಂಡದ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ವೀಕ್ಸ್, ಲಾಯ್ಡ್ ಹಾಗೂ ಹಾಶಿಮ್ ಅಮ್ಲ ಭಾರತ ವಿರುದ್ಧ ತಲಾ ನಾಲ್ಕು ಶತಕಗಳನ್ನು ಬಾರಿಸಿದ ಸಾಧನೆ ಮಾಡಿದ್ದಾರೆ.

  ಕುಕ್ ಹಾಗೂ ಹಮೀದ್ ಅಂತಿಮ ದಿನದಾಟವಾದ ರವಿವಾರ ವಿಕೆಟ್ ನಷ್ಟವಿಲ್ಲದೆ 114 ರನ್‌ನಿಂದ ಬ್ಯಾಟಿಂಗ್‌ನ್ನು ಮುಂದುವರಿಸಿ ಮೊದಲ ವಿಕೆಟ್‌ಗೆ 180 ರನ್ ಜೊತೆಯಾಟ ನಡೆಸಿದರು. ಕುಕ್ 194 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ ಶತಕ ಪೂರೈಸಿದರು.

82 ರನ್‌ಗೆ ಸ್ಪಿನ್ನರ್ ಅಮಿತ್ ಮಿಶ್ರಾಗೆ ರಿಟರ್ನ್ ಕ್ಯಾಚ್ ನೀಡಿ ಕೇವಲ 18 ರನ್‌ನಿಂದ ಚೊಚ್ಚಲ ಶತಕ ವಂಚಿತರಾದ ಹಮೀದ್ ಔಟಾಗುವ ಮೊದಲು 177 ಎಸೆತಗಳನ್ನು ಎದುರಿಸಿ 7 ಬೌಂಡರಿ, 1 ಸಿಕ್ಸರ್ ಬಾರಿಸಿದರು.

ಕೊನೆಯ ದಿನದಾಟದಲ್ಲಿ ಅಮಿತ್ ಮಿಶ್ರಾ(2-60) ಹೊರತುಪಡಿಸಿ ಉಳಿದ ಬೌಲರ್‌ಗಳು ಎದುರಾಳಿ ದಾಂಡಿಗರನ್ನು ಕಾಡಲು ವಿಫಲರಾದರು. ಪ್ರಮುಖ ಬೌಲರ್ ಅಶ್ವಿನ್ ಪಂದ್ಯದಲ್ಲಿ ಒಟ್ಟು 69.3 ಓವರ್‌ಗಳ ಬೌಲಿಂಗ್‌ನಲ್ಲಿ ಕೇವಲ 3 ವಿಕೆಟ್ ಪಡೆದು 230 ರನ್ ನೀಡಿ ದುಬಾರಿಯಾದರು.

ಹಿರಿಯ ಬ್ಯಾಟ್ಸ್‌ಮನ್ ಗಂಭೀರ್ 2ನೆ ಇನಿಂಗ್ಸ್‌ನಲ್ಲೂ ವಿಫಲರಾಗಿ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ರವಿವಾರ ಆರಂಭವಾದ ರಣಜಿ ಟ್ರೋಫಿಯಲ್ಲಿ ಆಕರ್ಷಕ 75 ರನ್ ಗಳಿಸಿರುವ ಕೆಎಲ್ ರಾಹುಲ್ ಗಾಯದಿಂದ ಚೇತರಿಸಿಕೊಂಡಿರುವ ಸೂಚನೆ ನೀಡಿದ್ದು, ನ.17 ರಿಂದ ವಿಶಾಖಪಟ್ಟಣದಲ್ಲಿ ಆರಂಭವಾಗಲಿರುವ ಎರಡನೆ ಟೆಸ್ಟ್‌ನಲ್ಲಿ ತಂಡಕ್ಕೆ ವಾಪಸಾಗುವ ವಿಶ್ವಾಸದಲ್ಲಿದ್ದಾರೆ

ಸ್ಕೋರ್ ವಿವರ

ಇಂಗ್ಲೆಂಡ್ ಪ್ರಥಮ ಇನಿಂಗ್ಸ್: 537

ಭಾರತ ಪ್ರಥಮ ಇನಿಂಗ್ಸ್: 488 ರನ್

ಇಂಗ್ಲೆಂಡ್ ಎರಡನೆ ಇನಿಂಗ್ಸ್: 75.3 ಓವರ್‌ಗಳಲ್ಲಿ 260/3

ಅಲೆಸ್ಟೈರ್ ಕುಕ್ ಸಿ ಜಡೇಜ ಬಿ ಅಶ್ವಿನ್ 130

 ಹಮೀದ್ ಸಿ ಮತ್ತು ಬಿ ಜಡೇಜ 82

ಜೋ ರೂಟ್ ಸಿ ಸಹಾ ಬಿ ಮಿಶ್ರಾ 04

ಸ್ಟೋಕ್ಸ್ ಅಜೇಯ 29

ಇತರ 15

ವಿಕೆಟ್ ಪತನ: 1-180, 2-192, 3-260

ಬೌಲಿಂಗ್ ವಿವರ

ಮುಹಮ್ಮದ್ ಶಮಿ 11-1-29-0

ರವೀಂದ್ರ ಜಡೇಜ 15-1-47-0

ಆರ್.ಅಶ್ವಿನ್ 23.3-4-63-1

ಉಮೇಶ್ ಯಾದವ್ 13-2-47-0

ಅಮಿತ್ ಮಿಶ್ರಾ 13-0-60-2

ಭಾರತ ದ್ವಿತೀಯ ಇನಿಂಗ್ಸ್:

52.3 ಓವರ್‌ಗಳಲ್ಲಿ 172/6

ವಿಜಯ್ ಸಿ ಹಮೀದ್ ಬಿ ರಶೀದ್ 31

ಗಂಭೀರ್ ಸಿ ರೂಟ್ ಬಿ ವೋಕ್ಸ್ 00

ಪೂಜಾರ ಎಲ್‌ಬಿಡಬ್ಲು ಬಿ ರಶೀದ್ 18

ವಿರಾಟ್ ಕೊಹ್ಲಿ ಅಜೇಯ 49

ಅಜಿಂಕ್ಯ ರಹಾನೆ ಬಿ ಅಲಿ 01

ಆರ್.ಅಶ್ವಿನ್ ಸಿ ರೂಟ್ ಬಿ ಅನ್ಸಾರಿ 32

ಸಹಾ ಸಿ ಮತ್ತು ಬಿ ರಶೀದ್ 09

ರವೀಂದ್ರ ಜಡೇಜ ಅಜೇಯ 32

ವಿಕೆಟ್ ಪತನ: 1-0, 2-47, 3-68, 4-71, 5-118, 6-132.

ಬೌಲಿಂಗ್ ವಿವರ:

ಸ್ಟುವರ್ಟ್ ಬ್ರಾಡ್ 3-2-8-0

ವೋಕ್ಸ್ 4-1-6-1

ಅನ್ಸಾರಿ 8-1-41-1

ಮೊಯಿನ್ ಅಲಿ 19-5-47-1

ಆದಿಲ್ ರಶೀದ್ 14.3-0-64-3

ಸ್ಟೋಕ್ಸ್ 2-1-1-0

ರೂಟ್ 2-0-5-0

ಅಂಕಿ-ಅಂಶ

5: ಅಲೆಸ್ಟೈರ್ ಕುಕ್ ಭಾರತ ವಿರುದ್ಧ ಅದರದೇ ನೆಲದಲ್ಲಿ ಐದನೆ ಬಾರಿ ಟೆಸ್ಟ್ ಶತಕ ಬಾರಿಸಿದರು. ಪ್ರವಾಸಿ ಬ್ಯಾಟ್ಸ್‌ಮನ್‌ವೋರ್ವ ಬಾರಿಸಿದ ಗರಿಷ್ಠ ಸಂಖ್ಯೆಯ ಶತಕ ಇದಾಗಿದೆ. ಎವರ್ಟನ್ ವೀಕ್ಸ್, ಕ್ಲೈವ್ ಲಾಯ್ಡ್ ಹಾಗೂ ಹಾಶಿಮ್ ಅಮ್ಲ ಭಾರತ ನೆಲದಲ್ಲಿ ತಲಾ 4 ಶತಕಗಳನ್ನು ಬಾರಿಸಿದ್ದಾರೆ.

12: ಕುಕ್ ಟೆಸ್ಟ್‌ನ 3ನೆ ಇನಿಂಗ್ಸ್‌ನಲ್ಲಿ 12ನೆ ಬಾರಿ ಶತಕ ಬಾರಿಸಿದರು. ಈ ಮೂಲಕ ಶ್ರೀಲಂಕಾದ ಕುಮಾರ ಸಂಗಕ್ಕರರೊಂದಿಗೆ ದಾಖಲೆ ಹಂಚಿಕೊಂಡಿದ್ದಾರೆ. ಇಂಗ್ಲೆಂಡ್ ನಾಯಕನಾಗಿ 12ನೆ ಶತಕ ಬಾರಿಸಿದ ಕುಕ್ ತಮ್ಮದೇ ದೇಶದ ಗ್ರಹಾಂ ಗೂಚ್ ದಾಖಲೆಯನ್ನು ಸರಿಗಟ್ಟಿದ್ದಾರೆ.

24.58: ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಹಾಗೂ ಭಾರತದ ಸ್ಪಿನ್ನರ್‌ಗಳ ಸರಾಸರಿಯಲ್ಲಿ 24.58ರಷ್ಟು ವ್ಯತ್ಯಾಸ ಕಂಡುಬಂದಿದೆ. ಇಂಗ್ಲೆಂಡ್‌ನ ಸ್ಪಿನ್ನರ್‌ಗಳು ಒಟ್ಟು 13 ವಿಕೆಟ್‌ಗಳನ್ನು ಉರುಳಿಸಿದರೆ, ಭಾರತದ ಸ್ಪಿನ್ನರ್‌ಗಳು 9 ವಿಕೆಟ್ ಪಡೆದರು.

180: ಕುಕ್ ಹಾಗೂ ಹಸೀಬ್ ಹಮೀದ್ ಮೊದಲ ವಿಕೆಟ್‌ಗೆ 180 ರನ್ ಜೊತೆಯಾಟ ನಡೆಸಿದರು. ಇದು ಭಾರತದಲ್ಲಿ ನಡೆದ ಟೆಸ್ಟ್‌ನಲ್ಲಿ ಎರಡನೆ ಇನಿಂಗ್ಸ್‌ನ ಮೊದಲ ವಿಕೆಟ್‌ನಲ್ಲಿ ದಾಖಲಾದ 2ನೆ ಗರಿಷ್ಠ ಜೊತೆಯಾಟ. 2008-09ರಲ್ಲಿ ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧ ಪಂದ್ಯದಲ್ಲಿ ಗೌತಮ್ ಗಂಭೀರ್ ಹಾಗೂ ವೀರೇಂದ್ರ ಸೆಹ್ವಾಗ್ 182 ರನ್ ಸೇರಿಸಿದ್ದು ಗರಿಷ್ಠ ಜೊತೆಯಾಟವಾಗಿದೆ.

  05: ಎರಡನೆ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ ಕುಕ್ ಕ್ಯಾಲೆಂಡರ್ ವರ್ಷದಲ್ಲಿ ಐದನೆ ಬಾರಿ 1000 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದರು. ಸಚಿನ್ ತೆಂಡುಲ್ಕರ್ ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ಬಾರಿ(6) ಸಾವಿರಕ್ಕೂ ಅಧಿಕ ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಬ್ರಿಯಾನ್ ಲಾರಾ, ಮ್ಯಾಥ್ಯೂ ಹೇಡನ್, ರಿಕಿ ಪಾಂಟಿಂಗ್, ಕಾಲಿಸ್ ಹಾಗೂ ಸಂಗಕ್ಕರ ಐದು ಬಾರಿ ಈ ಮೈಲುಗಲ್ಲು ತಲುಪಿದ್ದರು. ಕುಕ್ 2006, 2010, 2012, 2015 ಹಾಗೂ 2016ರಲ್ಲಿ ಸಾವಿರಕ್ಕೂ ಅಧಿಕ ರನ್ ದಾಖಲಿಸಿದ್ದಾರೆ.

230: ಭಾರತದ ಮುಖ್ಯ ಸ್ಪಿನ್ನರ್ ಆರ್. ಅಶ್ವಿನ್ ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲಿ ಒಟ್ಟು 230 ರನ್ ಬಿಟ್ಟುಕೊಟ್ಟರು. ಮೊದಲ ಇನಿಂಗ್ಸ್‌ನಲ್ಲಿ 163 ರನ್ ನೀಡಿದ್ದ ಅಶ್ವಿನ್ 2ನೆ ಇನಿಂಗ್ಸ್‌ನಲ್ಲಿ 63 ರನ್ ನೀಡಿದ್ದರು. ಅಶ್ವಿನ್ ಸ್ವದೇಶಿ ಟೆಸ್ಟ್‌ನಲ್ಲಿ ಇದೇ ಮೊದಲ ಬಾರಿ ಇಷ್ಟೊಂದು ರನ್ ಸೋರಿಕೆ ಮಾಡಿದ್ದಾರೆ. ಕೇವಲ 3 ವಿಕೆಟ್ ಪಡೆದಿದ್ದಾರೆ. ನ್ಯೂಝಿಲೆಂಡ್ ವಿರುದ್ಧ ಕಾನ್ಪುರದಲ್ಲಿ ಇತ್ತೀಚೆಗೆ ನಡೆದ ಟೆಸ್ಟ್‌ನಲ್ಲಿ ಅಶ್ವಿನ್ 225 ರನ್ ನೀಡಿದ್ದರು. ಆದರೆ, 10 ವಿಕೆಟ್ ಗೊಂಚಲು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News