ಕಾರು ಢಿಕ್ಕಿ: ಮೂವರು ಮಕ್ಕಳು ಸೇರಿದಂತೆ 7ಮಂದಿಗೆ ಗಾಯ

Update: 2016-11-13 18:58 GMT

ಉಪ್ಪಿನಂಗಡಿ, ನ.13: ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಓಮ್ನಿ ಕಾರೊಂದು ರಸ್ತೆಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಮೂವರು ಪುಟ್ಟ ಮಕ್ಕಳು ಸೇರಿದಂತೆ ಒಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ಸಂಜೆ ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಯ ಇಳಂತಿಲ ಗ್ರಾಮದ ನೇಜಿಕಾರು ಎಂಬಲ್ಲಿ ಸಂಭವಿಸಿದೆ. ಮಾರುತಿ ಓಮ್ನಿಯ ಚಾಲಕ-ಮಾಲಕ ಅಬೂಬಕರ್ (53), ಅವರ ಪತ್ನಿ ಬೀಪಾತುಮ್ಮ (46), ಮಕ್ಕಳಾದ ಇರ್ಷಾದ್(18), ಆಶಿಕಾ (15), ಮೊಮ್ಮಕ್ಕಳಾದ ಮುಫೀದಾ (3), ಮುಝಮೀರ್ (2), ಮುಹೀಫಾ(4) ಗಾಯ ಗೊಂಡವರು. ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಅಳಕೆ ಎಂಬಲ್ಲಿನ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಓಮ್ನಿ ನೇಜಿಕಾರಿನ ತಿರುವಿನಲ್ಲಿ ರಸ್ತೆ ಬದಿಯ ಮರ ವೊಂದಕ್ಕೆ ಢಿಕ್ಕಿ ಹೊಡೆದು ಮುಂಭಾಗ ನಜ್ಜು ಗುಜ್ಜಾಗಿದೆ. ಪರಿಣಾಮ ಮುಂಭಾಗದಲ್ಲಿದ್ದ ಮಕ್ಕಳ ಮುಖದ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗೊಂಡು ವಾಹನದಲ್ಲಿ ಸಿಲುಕಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಕಾರಿನಲ್ಲಿ ಸಿಲುಕಿದ್ದ ಮಕ್ಕಳನ್ನು ಹೊರತೆಗೆದು ತುರ್ತುಚಿಕಿತ್ಸೆಗಾಗಿ ಉಪ್ಪಿನಂಗಡಿಯ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಗಾಯಾಳುಗಳನ್ನು ದಾಖಲಿಸಲಾಗಿದೆ. ಪುತ್ತೂರು ಸಂಚಾರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News