ಸಹಕಾರಿ ಸಂಘಗಳಿಂದ ಅರ್ಥ ವ್ಯವಸ್ಥೆ ಸದೃಢ: ಎಂ.ಎನ್. ರಾಜೇಂದ್ರ ಕುಮಾರ್

Update: 2016-11-14 12:25 GMT

ಮೂಡುಬಿದಿರೆ, ನ.14: ಕೃಷಿಕರ, ಜನಸಾಮಾನ್ಯರ ಆರ್ಥಿಕ ಸ್ಥಿತಿ ಮತ್ತು ಬೇಡಿಕೆಗಳನ್ನು ಪೂರೈಸುವ ಶಕ್ತಿಯನ್ನು ಹೊಂದಿರುವ ಸಹಕಾರಿ ಸಂಘಗಳು ದೇಶದ ಆರ್ಥ ವ್ಯವಸ್ಥೆಯನ್ನು ಬಲಿಷ್ಠಗೊಳಿಸುತ್ತಿದೆ. 500, 1000 ನೋಟು ರದ್ದುಗೊಳಿಸಿರುವುದರಿಂದ ಕೆಲವು ದಿನಗಳಲ್ಲಿ ವ್ಯವಹಾರಕ್ಕೆ ಕಷ್ಟವಾಗಬಹುದು. ಆದರೆ ಮುಂಬರುವ ದಿನಗಳಲ್ಲಿ ಸಹಕಾರಿ ರಂಗ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಯಾಗುವುದರಲ್ಲಿ ಸಂಶಯವಿಲ್ಲ ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದರು.

ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ದ.ಕ ಜಿಲ್ಲಾ ಸಹಕಾರಿ ಯೂನಿಯನ್, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ಕಲ್ಲಬೆಟ್ಟು ಸರ್ವಿಸ್ ಕೋ-ಅಪರೇಟಿವ್ ಬ್ಯಾಂಕ್ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ 63ನೆ ಅಖಿಲ ಭಾರತ ಸಹಕಾರಿ ಸಪ್ತಾಹವನ್ನು ಕಲ್ಲಬೆಟ್ಟುವಿನ ಅಕ್ಷಯಧಾಮದಲ್ಲಿ ಸೋಮವಾರ ಉದ್ಘಾಟಿಸಿ, ಮಾತನಾಡಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿತಜ್ಞ ಡಾ.ಎಲ್.ಸಿ ಸೋನ್ಸ್ ಸಹಕಾರಿ ದ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ, ಕೃಷಿಕರಿಗೆ ನಿರಂತರ ಸಹಕಾರ ನೀಡುತ್ತಿರುವ ವ್ಯವಸ್ಥೆ ಸಹಕಾರಿ ಸಂಘ. ಸಹಕಾರಿಯ ಸೇವೆ ಹಳ್ಳಿ ಹಳ್ಳಿಗಳಿಗೆ ತಲುಪಿದೆ. ಇದು ದೇಶದ ಅರ್ಥಿಕ ವ್ಯವಸ್ಥೆ ಸಹಕಾರಿಯಾಗಲಿದೆ ಎಂದರು. ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ದ.ಕ ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ. ಸಲೀಂ ಮಾತನಾಡಿ ಬ್ಯಾಂಕ್‌ಗಳು ಕೆವೈಸಿ ನಿಯಮಗಳನ್ನು ಅನುರಿಸದೆ ಠೇವಣಿಗಳನ್ನು ಸಂಗ್ರಹಿಸಿರುವುದರಿಂದ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಸಹಕಾರಿ ಬ್ಯಾಂಕ್‌ಗಳು ರಿಸರ್ವ್ ಮತ್ತು ನಬಾರ್ಡ್ ಬ್ಯಾಂಕ್‌ಗಳು ಜಾರಿಗೆ ತರುವ ಕಾನೂನುಗಳನ್ನು ಪಾಲಿಸಿದ್ದಲ್ಲಿ ಮುಂದೆ ಎದುರಾಗಬಹುದಾದ ಸಮಸ್ಯೆಗಳನ್ನು ನಿವಾರಿಸಬಹುದು ಎಂದರು.

ಕಲ್ಲಬೆಟ್ಟು ಸರ್ವಿಸ್ ಕೋ-ಆಪರೇಟಿವ್‌ನಲ್ಲಿ 30 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ನಿಕಟಪೂರ್ವ ಸಿಇಒ ಪುರುಷೋತ್ತಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಡಾ.ಎಲ್.ಸಿ ಸೋನ್ಸ್ ಅವರನ್ನು ಅಭಿನಂದಿಸಲಾಯಿತು.

ದ.ಕ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಹರೀಶ್ ಆಚಾರ್ಯ ಮುಖು ಅತಿಥಿಯಾಗಿ, ಮೈಸೂರು ಸಹಕಾರಿ ತರಬೇತಿ ಕೇಂದ್ರದ ನಿವೃತ್ತ ಪ್ರಾಂಶುಪಾಲ ಗುರುಮಲ್ಲಪ್ಪಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಸುಂದರ ಗೌಡ, ದ.ಕ ಜಿಲ್ಲಾ ಸಹಕಾರಿ ಯೂನಿಯನ್‌ನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ, ಕಲ್ಲಬೆಟ್ಟು ಸರ್ವಿಸ್ ಕೋ ಅಪರೇಟಿವ್‌ನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿತಾ ಆರ್.ಶೆಟ್ಟಿ, ಉಪಾಧ್ಯಕ್ಷ ಲಕ್ಷ್ಮೀಶ ಶೆಟ್ಟಿ ಉಪಸ್ಥಿತರಿದ್ದರು.

ಜಿಲ್ಲಾ ಸಹಕಾರಿ ಯೂನಿಯನ್‌ನ ನಿರ್ದೇಶಕ ಎಂ.ಬಾಹುಬಲಿ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬಿಂದು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News