×
Ad

ಸರಕಾರ ಮೊರೆ ಹೋಗಿರುವ ಮೈಕ್ರೋ ಎಟಿಎಂ ಎಂದರೆ ಏನು ಗೊತ್ತೇ ?

Update: 2016-11-14 20:50 IST

ನೋಟು ನಿಷೇಧ ಕ್ರಮದ ಬಳಿಕ ದೇಶದಲ್ಲಿ ಸೃಷ್ಟಿಯಾಗಿರುವ ನಗದು ಹಣದ ಕೊರತೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಸರಕಾರವು ಮೈಕ್ರೋ-ಎಟಿಎಂಗಳನ್ನು ನೆಚ್ಚಿಕೊಂಡಿದೆ. ನಗದು ಕೊರತೆಯನ್ನು ನಿವಾರಿಸಲು ದೇಶಾದ್ಯಂತ ಮೈಕ್ರೋ-ಎಟಿಎಂಗಳನ್ನು ಸ್ಥಾಪಿಸ ಲಾಗುವುದು ಎಂದು ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಎಟಿಎಂ ಜಾಲವು ಅಷ್ಟೊಂದು ವ್ಯಾಪಕವಾಗಿರದ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮೈಕ್ರೋ-ಎಟಿಎಂಗಳು ನೆರವಾಗಲಿವೆ. ಮೈಕ್ರೋ-ಎಟಿಎಂಗಳು ಪಾಯಿಂಟ್ ಆಫ್ ಸೇಲ್ ಸಾಧನಗಳಾಗಿದ್ದು, ಕೈಯಲ್ಲಿ ಹಿಡಿದುಕೊಳ್ಳಲು ಅನುಕೂಲಕರವಾಗಿವೆ.

ಮೈಕ್ರೋ-ಎಟಿಎಂಗಳು ವ್ಯಕ್ತಿಯೋರ್ವ ಯಾವುದೇ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರೂ ಆ ಖಾತೆಯಲ್ಲಿ ಹಣವನ್ನು ಜಮಾ ಮಾಡಲು ಅಥವಾ ಹಿಂಪಡೆಯಲು ಅನುಕೂಲವನ್ನು ಕಲ್ಪಿಸುತ್ತವೆ. ಆಧಾರ್ ಗುರುತು,ಡೆಬಿಟ್ ಮತ್ತು ರುಪೇ ಕಾರ್ಡ್‌ಗಳ ಬಳಕೆ ಅಥವಾ ಮೊಬೈಲ್ ಫೋನ್ ಸಂಖ್ಯೆಯ ಮೂಲಕ ವ್ಯಕ್ತಿಯು ತನ್ನ ಬ್ಯಾಂಕ್ ಖಾತೆಯೊಂದಿಗೆ ಸಂಪರ್ಕ ಹೊಂದುವುದನ್ನು ಮೈಕ್ರೋ-ಎಟಿಎಂಗಳು ಸಾಧ್ಯವಾಗಿಸುತ್ತವೆ. ಹಣ ಜಮಾ,ಹಿಂಪಡೆಯುವಿಕೆ,ಹಣ ವರ್ಗಾವಣೆ ಮತ್ತು ಶಿಲ್ಕು ವಿಚಾರಣೆಯಂತಹ ಮೂಲ ವಹಿವಾಟುಗಳನ್ನು ಇವುಗಳ ಮೂಲಕ ನಡೆಸಬಹುದಾಗಿದೆ.

  ಮೈಕ್ರೋ-ಎಟಿಎಂಗಳಿಗೆ ಸಾಮಾನ್ಯ ಎಟಿಎಂ ಯಂತ್ರಗಳಂತೆ ಮೂಲಸೌಕರ್ಯಗಳ ಅಗತ್ಯವಿಲ್ಲ ಮತ್ತು ಸುಲಭವಾಗಿ ನಿಯೋಜಿಸಬಹುದು ಎನ್ನುವುದು ಅವುಗಳ ಹೆಗ್ಗಳಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿಯ ಬ್ಯಾಂಕ್ ಪ್ರತಿನಿಧಿಗಳು ಅಥವಾ ಸ್ಥಳೀಯ ಪಾನ್‌ವಾಲಾ ಅಥವಾ ಕಿರಾಣಿ ಅಂಗಡಿಯವರ ಬಳಿ ಮೈಕ್ರೋ-ಎಟಿಎಂಗಳನ್ನು ಲಭ್ಯವಾಗಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News