×
Ad

ಚಿನ್ನ ಖರೀದಿ,ವಿದೇಶಿ ವಿನಿಮಯದಲ್ಲಿ ಹೂಡಿಕೆಯ ಮೇಲೆ ಆದಾಯ ತೆರಿಗೆ ಇಲಾಖೆಯ ನಿಗಾ

Update: 2016-11-15 18:45 IST

ಹೊಸದಿಲ್ಲಿ,ನ.15: ಅಕ್ರಮ ಸಂಪತ್ತಿನ ವಿರುದ್ಧದ ದಾಳಿಯನ್ನು ಇನ್ನಷ್ಟು ತೀವ್ರ ಗೊಳಿಸಿರುವ ತೆರಿಗೆ ಅಧಿಕಾರಿಗಳು ನ.8ರಂದು ಸರಕಾರವು ನೋಟು ನಿಷೇಧ ಕ್ರಮವನ್ನು ಪ್ರಕಟಿಸಿದ ಬಳಿಕ ಚಿನ್ನಾಭರಣಗಳನ್ನು ಖರೀದಿಸಿರುವವರನ್ನು ಬಲೆಗೆ ಬೀಳಿಸಲು ಮಂಗಳವಾರ ಹಲವಾರು ಚಿನ್ನಾಭರಣ ಮಾರಾಟ ಮಳಿಗೆಗಳಿಂದ ಸಿಸಿಟಿವಿ ಫೂಟೇಜ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಇಂತಹ ಫೂಟೇಜ್‌ಗಳನ್ನು ಒಪ್ಪಿಸುವಂತೆ ಅಬಕಾರಿ ಗುಪ್ತಚರ ಇಲಾಖೆಯ ಅಧಿಕಾರಿ ಗಳು ಇತರ ಹಲವಾರು ಚಿನ್ನಾಭರಣ ಮಾರಾಟ ಮಳಿಗೆಗಳಿಗೆ ಸೂಚಿಸಿದ್ದಾರೆ. ಜಾರಿ ನಿರ್ದೇಶನಾಲಯ(ಇಡಿ)ಮತ್ತು ಕೇಂದ್ರೀಯ ಅಬಕಾರಿ ಗುಪ್ತಚರ ಇಲಾಖೆಗಳೀಗ ಕಪ್ಪುಹಣದ ವಿರುದ್ಧದ ಕಾರ್ಯಾಚರಣೆಯಲ್ಲಿ ಆದಾಯ ತೆರಿಗೆ ಇಲಾಖೆಯೊಂದಿಗೆ ಕೈ ಜೋಡಿಸಿವೆ.

ಚಿನ್ನ ಖರೀದಿ ಮತ್ತು ವಿದೇಶಿ ವಿನಿಮಯಗಳಲ್ಲಿ ಹಣ ಹೂಡುತ್ತಿರುವವರ ಮೇಲೆ ಇಡಿ ಮತ್ತು ಆದಾಯ ತೆರಿಗೆ ಇಲಾಖೆ ನಿಗಾಯಿರಿಸಿವೆ ಎಂದು ಎಎನ್‌ಐ ವರದಿ ಮಾಡಿದೆ. ದಿಢೀರ್‌ನೆ ಭಾರೀ ಮೊತ್ತದ ಹಣವನ್ನು ಠೇವಣಿಯಿರಿಸಿರುವ ಕೃಷಿಕರ ಬ್ಯಾಂಕ್ ಖಾತೆಗಳನ್ನೂ ತನಿಖೆಗೊಳಪಡಿಸಲಾಗುತ್ತಿದೆ ಎಂದು ಅದು ಮೂಲಗಳನ್ನು ಉಲ್ಲೇಖಿಸಿ ಹೇಳಿದೆ.

ಆದಾಯ ತೆರಿಗೆ ಇಲಾಖೆಯು ನ.7-10ರ ಅವಧಿಯಲ್ಲಿ ನಡೆಸಲಾಗಿರುವ ದೈನಂದಿನ ಮಾರಾಟದ ವರದಿಗಳನ್ನು ನೀಡುವಂತೆ ದಿಲ್ಲಿ, ಮುಂಬೈ, ಕೋಲ್ಕತಾ, ಚೆನ್ನೈ, ಬೆಂಗಳೂರು, ಅಹ್ಮದಾಬಾದ್ ಸೇರಿದಂತೆ 25 ನಗರಗಳಲ್ಲಿಯ ಚಿನ್ನಾಭರಣ ವ್ಯಾಪಾರಿಗಳಿಗೆ 600 ನೋಟಿಸುಗಳನ್ನು ರವಾನಿಸಿದೆ. ಈ ಕಾರ್ಯಾಚರಣೆಯನ್ನು ಬಳಿಕ ಇತರ ನಗರಗಳಿಗೂ ವಿಸ್ತರಿಸಲಾಗುವುದು.

ನೋಟು ನಿಷೇಧದ ಬಳಿಕ ಹೆಚ್ಚಿನ ಕಾಳಧನ ಧನಿಕರು ಕಪ್ಪುಹಣವನ್ನು ಬಿಳಿಯಾಗಿಸಲು ಚಿನ್ನ ಮತ್ತು ಬೆಳ್ಳಿ ಖರೀದಿಯ ಮೊರೆ ಹೋಗಿದ್ದರು. ಕಳೆದ ವಾರ ಚಿನ್ನದ ಮಾರುಕಟ್ಟೆ ದರ ಪ್ರತಿ 10 ಗ್ರಾಮ್‌ಗೆ 31,000 ರೂ.ಇದ್ದರೂ ಚಿನ್ನಾಭರಣ ವ್ಯಾಪಾರಿಗಳು ಹಳೆಯ ನೋಟುಗಳನ್ನು ಸ್ವೀಕರಿಸಿ ಪ್ರತಿ 10 ಗ್ರಾಮ್‌ಗೆ 50,000 ರೂ.ಗಳ ಹೆಚ್ಚಿನ ಬೆಲೆಗೆೆ ಮಾರಾಟ ಮಾಡಿದ್ದರು.

ಕಪ್ಪುಹಣವನ್ನು ಬಿಳಿಯಾಗಿಸಿಕೊಳ್ಳಲು ಉಳ್ಳವರು ಹಳೆಯ ನೋಟುಗಳನ್ನು ಶೇ.20 ರಿಂದ ಶೇ.40ರಷ್ಟು ಕಡಿಮೆ ವೌಲ್ಯಕ್ಕೆ ಬದಲಿಸಿಕೊಳ್ಳುತ್ತಿದ್ದಾರೆ. ಎರಡು ಲ.ರೂ.ಗೂ ಹೆಚ್ಚಿನ ಚಿನ್ನಾಭರಣ ಖರೀದಿಗೆ ಪಾನ್ ಕಡ್ಡಾಯವಾಗಿದೆ. ವ್ಯಾಪಾರಿಗಳು ಎರಡು ಲ.ರೂ.ಗೂ ಕಡಿಮೆ ಮೊತ್ತಗಳಲ್ಲಿ ವಿಭಜಿಸಿ ಮಾರಾಟ ಮಾಡುತ್ತಿದ್ದಾರೆಯೇ ಎನ್ನುವುದರ ಮೇಲೆ ನಾವು ನಿಗಾಯಿರಿಸಿದ್ದೇವೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ ಅಧ್ಯಕ್ಷ ಸುಶಿಲ್ ಚಂದ್ರ ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದರು.

ನ.8ರಂದು ನೋಟು ನಿಷೇಧ ನಿರ್ಧಾರ ಹೊರಬಿದ್ದ ಬಳಿಕ ಹಲವಾರು ಚಿನ್ನಾಭರಣ ಅಂಗಡಿಗಳು ಬೆಳಗಿನ ಜಾವದವರೆಗೂ ಮಾರಾಟ ನಡೆಸಿದ್ದವು. ಪ್ರಕಟಣೆ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಮುಂಬೈವೊಂದರಲ್ಲೇ 250 ಕೆಜಿ ಚಿನ್ನಾಭರಣ ಮಾರಾಟವಾಗಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News