×
Ad

ಎಸ್‌ಬಿಐ ಮುಖ್ಯಸ್ಥೆ ಯ ಪ್ರಕಾರ 'ನೋಟು' ಸಮಸ್ಯೆಗೆ ಪರಿಹಾರವೇನು ?

Update: 2016-11-15 22:45 IST

ಹೊಸದಿಲ್ಲಿ: ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಂಡು ಹೊಸನೋಟು ಪಡೆದವರಿಗೆ ಅಳಿಸಲಾಗದ ಶಾಯಿ ಬಳಸುವ ಸರ್ಕಾರದ ಹೊಸ ನಿರ್ಧಾರದಿಂದ ಬ್ಯಾಂಕುಗಳ ಮುಂದೆ ನಿಲ್ಲುವ ಸಾಲು ಕಡಿತವಾಗಲಿದೆ ಎಂಬ ವಿಶ್ವಾಸವನ್ನು ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿದ ಭಾರತೀಯ ಸ್ಟೇಟ್ ಬ್ಯಾಂಕಿನ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ವ್ಯಕ್ತಪಡಿಸಿದ್ದಾರೆ.
"ಈಗ ಇರುವ ದೊಡ್ಡ ಸಮಸ್ಯೆ ಎಂಧರೆ ಎಟಿಎಂಗಳು ಕಾರ್ಯ ನಿರ್ವಹಿಸದಿರುವುದು ಅಥವಾ ತಕ್ಷಣ ಬರಿದಾಗುತ್ತಿರುವುದು. ಎಟಿಎಂ ಯಂತ್ರಗಳನ್ನು ಸಮರೋಪಾದಿಯಲ್ಲಿ ಸಿದ್ಧಪಡಿಸಿ, ಹೊಸ ನೋಟುಗಳನ್ನು ವಿತರಿಸಲು ವ್ಯವಸ್ಥೆ ಮಾಡಬೇಕು. ಇದಕ್ಕೆ ಹಳೆಯ ನೋಟುಗಳಿಗಿಂತ ಭಿನ್ನವಾದ ಟ್ರೇಗಳು ಅಗತ್ಯ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರದ ದಿಢೀರ್ ನಿರ್ಧಾರದಿಂದ ದೇಶಾಧ್ಯಂತ ಲಕ್ಷಾಂತರ ಮಂದಿ ಬಡವರ ಸಾಮಾನ್ಯ ಜನಜೀವನಕ್ಕೆ ತೊಂದರೆಯಾಗಿದೆ.
ಸತತ ಆರನೇ ದಿನವೂ ಬ್ಯಾಂಕುಗಳ ಮುಂದೆ ಉದ್ದುದ್ದದ ಸರತಿಸಾಲುಗಳು ಕಂಡುಬಂದವು. ಇಂದು ಸರ್ಕಾರ ಹೊಸ ಘೋಷಣೆ ಮಾಡಿ, ಚುನಾವಣೆ ಸಂದರ್ಭದಲ್ಲಿ ಬಳಸುವಂತೆ ಅಳಿಸಲಾಗದ ಶಾಯಿಯನ್ನು ಬಳಸಲು ನಿರ್ಧರಿಸುವ ನಿರ್ಧಾರವನ್ನು ಪ್ರಕಟಿಸಿದೆ. ಸಾರ್ವಜನಿಕರು ಪದೇ ಪದೇ 4500 ರೂಪಾಯಿ ವಿನಿಮಯ ಮಾಡಿಕೊಳ್ಳುವುದನ್ನು ತಡೆಯುವ ಸಲುವಾಗಿನಿರ್ಧಾರ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.
ಈ ನಿರ್ಧಾರ ಪರಿಸ್ಥಿತಿಯ ದುರುಪಯೋಗ ತಡೆಗೆ ಸಹಕಾರಿಯಾಗಲಿದೆ ಎಂದು ಭಟ್ಟಾಚಾರ್ಯ ಎನ್‌ಡಿಟಿವಿಗೆ ತಿಳಿಸಿದರು. ಹಾಲಿ ಇರುವ ಸಮಸ್ಯೆಗೆ ಏಕೈಕ ಪರಿಹಾರವೆಂದರೆ 500 ರೂಪಾಯಿ ನೋಟುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿತರಿಸುವುದು. ಇದೀಗ ಈ ನೋಟುಗಳು ಎಟಿಎಂಗೆ ಈಗಷ್ಟೇ ಹರಿಯುತ್ತಿದೆ. ಇದು ಸಾಕಷ್ಟು ಪೂರೈಕೆಯಾದರೆ, ಎಟಿಎಂಗಳ ಮೂಲಕ ಪಡೆಯುವ 2500 ರೂಪಾಯಿ ಮಿತಿ ಸಡಿಲಿಸಬಹುದು ಎಂದು ಹೇಳಿದರು.
ಈಗ ಬೇಕಾಗಿರುವುದು ಐದು ದಿನಗಳ ತಾಳ್ಮೆ. ಕೆಲ ಸಣ್ಣ ಪಟ್ಟಣಗಳಲ್ಲಿ ಸರದಿಸಾಲು ಕಡಿಮೆಯಾಗುತ್ತಿದೆ. ಅಧಿಕ ವಲಸೆ ಜನರು ಇರುವ ದೊಡ್ಡ ನಗರಗಳಲ್ಲಿ ಮಾತ್ರ ಪರಿಸ್ಥಿತಿ ಸುಧಾರಿಸಲು ಇನ್ನೂ ಕೆಲ ದಿನ ಬೇಕಾಗಬಹುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News