×
Ad

ಎರಡನೆ ಟೆಸ್ಟ್‌ನಲ್ಲಿ ಹರಿಣ ಪಡೆಗೆ ಇನಿಂಗ್ಸ್, 80 ರನ್‌ಗಳ ಗೆಲುವು

Update: 2016-11-16 00:25 IST

ಹೋಬರ್ಟ್, ನ.15: ಇಲ್ಲಿ ನಡೆದ ಎರಡನೆ ಕ್ರಿಕೆಟ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ದಕ್ಷಿಣ ಆಫ್ರಿಕ ಇನಿಂಗ್ಸ್ ಹಾಗೂ 80 ರನ್‌ಗಳ ಭರ್ಜರಿ ಜಯ ಗಳಿಸಿದರು.
 ಪಂದ್ಯದ ಐದನೆ ಹಾಗೂ ಅಂತಿಮ ದಿನವಾಗಿರುವ ಇಂದು ಆಸ್ಟ್ರೇಲಿಯ ತಂಡ ಎರಡನೆ ಇನಿಂಗ್ಸ್‌ನಲ್ಲಿ 60.1 ಓವರ್‌ಗಳಲ್ಲಿ 161 ರನ್‌ಗಳಿಗೆ ಅಲೌಟಾಗಿದೆ.
ಪಂದ್ಯದ ಮೂರನೆ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯ ಎರಡನೆ ಇನಿಂಗ್ಸ್‌ನಲ್ಲಿ 36 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 121 ರನ್ ಗಳಿಸಿತ್ತು.
 ಆಸ್ಟ್ರೇಲಿಯದ ಉಸ್ಮಾನ್ ಖ್ವಾಜಾ 56ರನ್ ಮತ್ತು ನಾಯಕ ಸ್ಟೀವನ್ ಸ್ಮಿತ್ 18 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು.
ಆಸ್ಟ್ರೇಲಿಯ ಎರಡನೆ ಇನಿಂಗ್ಸ್‌ನಲ್ಲಿ ನಿನ್ನೆ ಆರಂಭಿಕ ದಾಂಡಿಗ ಬರ್ನ್ಸ್ ಅವರನ್ನು ಕಳೆದುಕೊಂಡಾಗ ತಂಡ ಖಾತೆ ತೆರೆದಿರಲಿಲ್ಲ. ಆದರೆ ಎರಡನೆ ವಿಕೆಟ್‌ಗೆ ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖ್ವಾಜಾ ತಂಡವನ್ನು ಮುನ್ನಡೆಸಿ 79ರನ್‌ಗಳ ಕೊಡುಗೆ ನೀಡಿದ್ದರು. 22.6ನೆ ಓವರ್‌ನಲ್ಲಿ ಅಬಾಟ್ ಎಸೆತದಲ್ಲಿ ವಾರ್ನರ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದ್ದರು. ವಾರ್ನರ್ 45 ರನ್ ಗಳಿಸಿದ್ದರು.
ಅಗ್ರ ಸರದಿಯ ಎರಡು ವಿಕೆಟ್‌ಗಳನ್ನು ಉರುಳಿಸಿದ್ದ ಅಬಾಟ್ ಅವರು ದಕ್ಷಿಣ ಆಫ್ರಿಕ ತಂಡಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾಗಿದ್ದರು.
ಪಂದ್ಯದ ನಾಲ್ಕನೆ ದಿನವಾಗಿರುವ ಇಂದು ಅಬಾಟ್ ಮತ್ತೆ ರಬಾಡ ಆಸ್ಟ್ರೇಲಿಯದ ಉಳಿದ ವಿಕೆಟ್‌ಗಳನ್ನು ಹಂಚಿಕೊಂಡರು.ಖ್ವಾಜಾ ಮತ್ತು ಸ್ಮಿತ್ ನಾಲ್ಕನೆ ದಿನದ ಆಟವನ್ನು ಮುಂದುವರಿಸಿ ತಂಡದ ಸ್ಕೋರ್‌ನ್ನು 46.6 ಓವರ್‌ಗಳಲ್ಲಿ 129ಕ್ಕೆ ಏರಿಸಿದರು. ಇವರ ಜೊತೆಯಾಟದಲ್ಲಿ 50 ರನ್‌ಗಳು ಸೇರ್ಪಡೆಗೊಂಡಿತು. ಅಬಾಟ್ ಎಸೆತದಲ್ಲಿ ಖ್ವಾಜಾ ಅವರು ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್‌ಗೆ ಕ್ಯಾಚ್ ನೀಡುವುದರೊಂದಿಗೆ ಆಸ್ಟ್ರೇಲಿಯದ ಪೆವಿಲಿಯನ್ ಪರೇಡ್ ಆರಂಭಗೊಂಡಿತು.

 ಮುಂದೆ ತಂಡದ ಖಾತೆಗೆ 32 ರನ್ ಸೇರುವಷ್ಟರಲ್ಲಿ ಆಸ್ಟ್ರೇಲಿಯ ಉಳಿದ 7 ವಿಕೆಟ್‌ಗಳನ್ನು ಕಳೆದುಕೊಂಡು ಆಲೌಟಾಯಿತು. ವೋಗೆಸ್(2), ಸ್ಟಾರ್ಕ್(0) ಮತ್ತು ಲಿನ್ (4) ಅವರನ್ನು ಅಬಾಟ್ ಪೆವಿಲಿಯನ್‌ಗೆ ಅಟ್ಟಿದರು. ಫರ್ಗ್ಯುಸನ್(1), ನೇವಿಲ್ (6),ಮಿನ್ನೆ (0) ನಾಯಕ ಸ್ಮಿತ್(31) ಇವರಿಗೆ ರಬಾಡ ಪೆವಿಲಿಯನ್ ಹಾದಿ ತೋರಿಸಿ ಆಸ್ಟ್ರೇಲಿಯದ ಎರಡನೆ ಇನಿಂಗ್ಸ್‌ನ್ನು ಬೇಗನೆ ಮುಗಿಸಿದರು. ಎರಡನೆ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯದ ಎಲ್ಲ ವಿಕೆಟ್‌ಗಳನ್ನು ಅಬಾಟ್ (77ಕ್ಕೆ 6) ಮತ್ತು ರಬಾಡ(34ಕ್ಕೆ4) ಹಂಚಿಕೊಂಡರು.
 ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ ಫಿಲ್ಯಾಂಡರ್(21ಕ್ಕೆ 5) , ಅಬಾಟ್ (41ಕ್ಕೆ 3) ಮತ್ತು ರಬಾಡ ದಾಳಿಗೆ ಸಿಲುಕಿ 32.5 ಓವರ್‌ಗಳಲ್ಲಿ 85 ರನ್‌ಗಳಿಗೆ ಆಲೌಟಾಗಿತ್ತು. ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್‌ನಲ್ಲಿ 241 ರನ್‌ಗಳ ಮುನ್ನಡೆ ಸಾಧಿಸಿತ್ತು.
ಎರಡನೆ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದ ದಕ್ಷಿಣ ಆಫ್ರಿಕ ಇನಿಂಗ್ಸ್ ಹಾಗೂ 80 ರನ್‌ಗಳ ಭರ್ಜರಿ ಜಯ ದಾಖಲಿಸಿತು.
 ಅಬಾಟ್ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್ ಮತ್ತು ಎರಡನೆ ಇನಿಂಗ್ಸ್‌ನಲ್ಲಿ 6 ವಿಕೆಟ್ ಸೇರಿದಂತೆ ಟೆಸ್ಟ್‌ನಲ್ಲಿ 9 ವಿಕೆಟ್ ಉಡಾಯಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡರು.
ಸಂಕ್ಷಿಪ್ತ ಸ್ಕೋರ್ ವಿವರ
ಆಸ್ಟ್ರೇಲಿಯ ಮೊದಲ ಇನಿಂಗ್ಸ್ 85, ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್ 326, ಆಸ್ಟ್ರೇಲಿಯ ಎರಡನೆ ಇನಿಂಗ್ಸ್ 60.1 ಓವರ್‌ಗಳಲ್ಲಿ ಆಲೌಟ್ 161(ಖ್ವಾಜಾ 64, ವಾರ್ನರ್ 45, ಸ್ಮಿತ್ 31;ಅಬಾಟ್ 77ಕ್ಕೆ 6, ರಬಾಡ 34ಕ್ಕೆ 4).
ಪಂದ್ಯಶ್ರೇಷ್ಠ : ಕೈಲ್ ಅಬಾಟ್.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News