ಅಬ್ದುಲ್ಲಾರ ಅಂಗಡಿಗೆ ದುಷ್ಕರ್ಮಿಗಳು ಹಚ್ಚಿದ ಬೆಂಕಿಯನ್ನು ನಂದಿಸಿದ ಶ್ರೀರಾಮ ಭಜನಾ ಮಂದಿರದ ಸದಸ್ಯರು

Update: 2016-11-16 14:06 GMT

ಉಳ್ಳಾಲ, ನ.16: ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಹಳಿ ಬಳಿ ಇರುವ ಗುಜರಿ ಅಂಗಡಿಯೊಂದಕ್ಕೆ ಮಂಗಳವಾರ ರಾತ್ರಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ಅಬ್ದುಲ್ಲಾ ಎಂಬವರಿಗೆ ಸೇರಿದ, ತೊಕ್ಕೊಟ್ಟು ಒಳಪೇಟೆಯ ಕರ್ನಾಟಕ ಬ್ಯಾಂಕ್‌ನ ಹಿಂಭಾಗದಲ್ಲಿದ್ದ ಗುಜರಿ ಅಂಗಡಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಕೊಟ್ಟ ಪರಿಣಾಮ ಅಂಗಡಿಯು ಸುಟ್ಟು ಭಸ್ಮವಾಗಿದೆ. ಒಳಗೆ ಶೇಖರಿಸಿಡಲಾಗಿದ್ದ ಪ್ಲಾಸ್ಟಿಕ್, ಕಬ್ಬಿಣ, ಹಾಗೂ ಇತರ ವಸ್ತುಗಳು ಬೆಂಕಿಗೆ ಆಹುತಿಯಾಗಿ ಅಪಾರ ನಷ್ಟ ಸಂಭವಿಸಿದೆ. ಬೆಂಕಿ ಹತ್ತಿರುವುದನ್ನು ಗಮನಿಸಿದ ಗುಜರಿ ಅಂಗಡಿಯ ಸಮೀಪದಲ್ಲೇ ಇರುವ ಶ್ರೀ ರಾಮ ಭಜನಾ ಮಂದಿರದ ಸದಸ್ಯರು ಕೊಡಗಳಲ್ಲಿ ನೀರು ತಂದು ಸುರಿದು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

 ಬೆಂಕಿಗೆ ಆಹುತಿಯಾದ ಗುಜರಿ ಅಂಗಡಿ ಬಳಿ ಕರ್ಣಾಟಕ ಬ್ಯಾಂಕ್ ಕಟ್ಟಡ ಕೂಡಾ ಇದ್ದು ಬೆಂಕಿ ನಂದಿಸಿದ ಪರಿಣಾಮ ದೊಡ್ಡಮಟ್ಟದ ಅಪಾಯ ತಪ್ಪಿದಂತಾಗಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಎಸಿಪಿ ಶೃತಿ, ಇನ್‌ಸ್ಪೆಕ್ಟರ್ ಗೋಪಿಕೃಷ್ಣ, ಎಸ್ಸೈ ರಾಜೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರ್ಗಾ ಅಧ್ಯಕ್ಷ ರಶೀದ್ ಹಾಜಿ ಭೇಟಿ

ಬುಧವಾರ ಬೆಂಕಿಗಾಹುತಿಯಾದ ಗುಜರಿ ಅಂಗಡಿಗೆ ಉಳ್ಳಾಲ ದರ್ಗಾದ ಅಧ್ಯಕ್ಷ ರಶೀದ್ ಹಾಜಿ ಭೇಟಿ ನೀಡಿದರು. ಬೆಂಕಿ ನಂದಿಸಲು ಕೈಜೋಡಿಸಿದ ಸ್ಥಳೀಯ ಶ್ರೀ ರಾಮ ಭಜನಾಮಂದಿರದ ಮುಖ್ಯಸ್ಥ ಭಗವಾನ್‌ದಾಸ್‌ರಿಗೆ ಅಭಿನಂದನೆ ಸಲ್ಲಿಸಿದರು. ಯಾರದೇ ಕಷ್ಟ ಕಾಲದಲ್ಲಿ ಜಾತಿಬೇಧ ಮೆರೆತು ಪರಸ್ಪರ ಸಹಾಯ ಹಸ್ತ ನೀಡುವುದೇ ನಾಗರಿಕ ಸಂಸ್ಕೃತಿ ಎಂದು ರಶೀದ್ ಹಾಜಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News