×
Ad

ಗುಜರಾತ್: ಹೊಸ 2000 ರೂ. ನೋಟಿನಲ್ಲಿ 3 ಲಕ್ಷ ಲಂಚ ಪಡೆದ ಇಬ್ಬರ ಬಂಧನ

Update: 2016-11-17 08:49 IST

ಅಹ್ಮದಾಬಾದ್, ನ.17: ಕಪ್ಪುಹಣ ಜಾಲಕ್ಕೆ ತಡೆ ಒಡ್ಡುವ ಸಲುವಾಗಿ ಅಧಿಕ ಮೌಲ್ಯದ ಕರೆನ್ಸಿಗಳನ್ನು ಚಲಾವಣೆಯಿಂದ ರದ್ದು ಮಾಡಿದ ಕೇಂದ್ರ ಸರಕಾರದ ದಿಢೀರ್ ನಿರ್ಧಾರದಿಂದ ದೇಶದಲ್ಲಿ ಉಂಟಾಗಿರುವ ಅಲ್ಲೋಲ-ಕಲ್ಲೋಲ ಪರಿಸ್ಥಿತಿ ತಿಳಿಯಾಗುವ ಮುನ್ನವೇ, ಇಲ್ಲಿನ ಇಬ್ಬರು ಬಂದರು ಮಂಡಳಿ ಅಧಿಕಾರಿಗಳು 2.9 ಲಕ್ಷ ರೂಪಾಯಿ ಲಂಚವನ್ನು ಹೊಸ 2000 ರೂಪಾಯಿ ನೋಟಿನಲ್ಲಿ ಸ್ವೀಕರಿಸಿ, ಪೊಲೀಸ್ ಬಲೆಗೆ ಬಿದ್ದಿದ್ದಾರೆ.

2.5 ಲಕ್ಷ ರೂಪಾಯಿ ನಗದು ಸಹಿತ ಇಬ್ಬರನ್ನು ಬಂಧಿಸಲಾಗಿದೆ. 40 ಸಾವಿರ ರೂಪಾಯಿಗಳನ್ನು ಅವರ ಮನೆಗಳಿಂದ ವಶಪಡಿಸಿಕೊಳ್ಳಲಾಗಿದೆ. ನವೆಂಬರ್ 11ರಂದು ಬಿಡುಗಡೆಯಾದ 2000 ರೂಪಾಯಿ ನೋಟುಗಳ ರೂಪದಲ್ಲೇ ಈ ಲಂಚದ ಹಣ ಸ್ವೀಕರಿಸಿರುವುದು ಎಲ್ಲರನ್ನೂ ದಂಗುಬಡಿಸಿದೆ.

ಕೇಂದ್ರ ಸರಕಾರ ಹೊಸ ನೋಟುಗಳ ಹರಿವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತಿದ್ದು, ವಾರಕ್ಕೆ ಒಂದು ಖಾತೆಯಿಂದ 24 ಸಾವಿರ ರೂಪಾಯಿಗಳನ್ನಷ್ಟೇ ಪಡೆಯಲು ಸಾಧ್ಯವಿದೆ. ಇಷ್ಟಾಗಿಯೂ ಕಾಂಡ್ಲ ಬಂದರು ಮಂಡಳಿಯ ಅಧೀಕ್ಷಕ ಎಂಜಿನಿಯರ್ ಪಿ.ಶ್ರೀನಿವಾಸು ಹಾಗೂ ಉಪ ವಿಭಾಗೀಯ ಅಧಿಕಾರಿ ಕೆ.ಕೋಮ್ಟೆಕರ್ ಅವರು, ಖಾಸಗಿ ವಿದ್ಯುತ್ ಘಟಕದ ಬಾಕಿ ಬಿಲ್ ಪಾವತಿಗೆ 4.4 ಲಕ್ಷ ರೂಪಾಯಿ ಲಂಚ ಬೇಡಿಕೆ ಇಟ್ಟಿದ್ದರು ಎಂದು ಗುಜರಾತ್ ನ ಭ್ರಷ್ಟಾಚಾರ ವಿರೋಧಿ ಬ್ಯೂರೊ ಅಧಿಕಾರಿಗಳು ಹೇಳಿದ್ದಾರೆ.

ನವೆಂಬರ್ 15ರಂದು ಈ ಅಧಿಕಾರಿಗಳ ದಲ್ಲಾಳಿ ರುದ್ರೇಶರ್ ಎಂಬಾತ 2.5 ಲಕ್ಷ ರೂಪಾಯಿಯನ್ನು ಈ ಘಟಕದಿಂದ ಪಡೆದ ಎಂದು ಹೇಳಲಾಗಿದೆ. ಈ ದಲ್ಲಾಳಿಯನ್ನೂ ಬಂಧಿಸಲಾಗಿದೆ. ಖಾಸಗಿ ಘಟಕ ಈ ಲಂಚ ಬೇಡಿಕೆ ಬಗ್ಗೆ ದೂರು ನೀಡಿತ್ತು.
ಬಳಿಕ ಶ್ರೀನಿವಾಸು ಅವರ ನಿವಾಸದಿಂದ 40 ಸಾವಿರ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದ್ದು, ಈ ಒಪ್ಪಂದದ ಪೂರ್ವಭಾವಿಯಾಗಿ 40 ಸಾವಿರ ರೂಪಾಯಿ ಸ್ವೀಕರಿಸಿದ್ದನ್ನು ಶ್ರೀನಿವಾಸು ಒಪ್ಪಿಕೊಂಡಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಕರೆನ್ಸಿ ನೋಟನ್ನು ಹೇಗೆ ಪಡೆಯಲಾಯಿತು ಎಂಬ ಬಗ್ಗೆ ಎಸಿಬಿ ತನಿಖೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News