ಅದಾನಿ, ಅಂಬಾನಿಗಳಿಗೆ ನೋಟು ರದ್ದತಿ ಮೊದಲೇ ಗೊತ್ತಿತ್ತು ಎಂದ ಬಿಜೆಪಿ ಶಾಸಕ
ಹೊಸದಿಲ್ಲಿ, ನ.17 : ಅದಾನಿ, ಅಂಬಾನಿ ಸಹಿತ ಹಲವಾರು ಪ್ರಮುಖ ಉದ್ಯಮಿಗಳಿಗೆ ಸರಕಾರದ ನೋಟು ರದ್ದತಿ ಯೋಜನೆಯ ಬಗ್ಗೆ ಮೊದಲೇ ಗೊತ್ತಿತ್ತು ಎಂದು ಬಿಜೆಪಿ ಶಾಸಕರೊಬ್ಬರು ಹೇಳುವ ವೀಡಿಯೊ ಬಹಿರಂಗಗೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸ್ವಯಂಘೋಷಿತ ಕಾಂಗ್ರೆಸ್ ಬೆಂಬಲಿಗನೆಂದು ಹೇಳಿಕೊಂಡ ವ್ಯಕ್ತಿ ಮೂಲತಃ ಪೋಸ್ಟ್ ಮಾಡಿದ್ದ ಈ ವೀಡಿಯೊವನ್ನು ರಹಸ್ಯವಾಗಿ ಚಿತ್ರೀಕರಿಸಿದಂತೆ ಕಾಣುತ್ತಿದ್ದು ಅದರಲ್ಲಿ ರಾಜಸ್ಥಾನದ ಕೋಟಾ ಕ್ಷೇತ್ರದ ಬಿಜೆಪಿ ಶಾಸಕ ಭವಾನಿ ಸಿಂಗ್ ರಾಜಪುತ್ ಅವರು ಪ್ರಮುಖ ಉದ್ಯಮಿಗಳು ತಮ್ಮಲ್ಲಿದ್ದ ಕಪ್ಪು ಹಣವನ್ನು ಸರಕಾರ ನೋಟು ರದ್ದತಿ ಬಗ್ಗೆ ಘೋಷಿಸುವ ಮೊದಲೇ ವಿಲೇವಾರಿ ಮಾಡಿದ್ದರೆಂದು ಹೇಳಿದ್ದಾರೆ.
``ಅದೊಂದು ಹಂತ ಹಂತವಾದ ಕ್ರಮವಾಗಿರಬಹುದು. ಎಲ್ಲವೂ ಸರಿಯಾಗುವ ತನಕ ಸರಕಾರ ಜನರಿಗೆ ಸ್ವಲ್ಪ ಸಮಯಾವಕಾಶ ಕೊಡಬಹುದಾಗಿತ್ತು. ಅದಾನಿ ಹಾಗೂ ಅಂಬಾನಿಗಳಿಗೆ ಈ ವಿಚಾರ ಮೊದಲೇ ಗೊತ್ತಿತ್ತು,'' ಎಂದು ರಾಜಪುತ್ ಹೇಳಿದ್ದಾರೆ.
ಸರಿಯಾದ ಯೋಜನೆಯಿಲ್ಲದೆ ಜಾರಿಗೊಳಿಸಲಾದ ಈ ನೋಟು ರದ್ದತಿಯನ್ನು ಬಿಜೆಪಿ ಶಾಸಕ ಟೀಕಿಸುತ್ತಿರುವುದು ವೀಡಿಯೊದಲ್ಲಿ ಕಾಣಬಹುದಾಗಿದೆ.
ಭವಾನಿ ಸಿಂಗ್ ವಿವಾದಗಳಿಗೆ ಹೊಸಬರೇನಲ್ಲ. ಈ ಹಿಂದೆ ಅವರು ಕೋಟಾದಲ್ಲಿರುವ ಬಿಹಾರಿ ವಿದ್ಯಾರ್ಥಿಗಳ ಕ್ರಿಮಿನಲ್ ಹಿನ್ನೆಲೆಯನ್ನು ಪರೀಕ್ಷಿಸಬೇಕೆಂದು ಹೇಳಿದ್ದರೆ, ಹೆಲ್ಮೆಟ್ ಧರಿಸಿದರೆ ತಲೆ ಬೋಳಾಗುವುದೆಂಬ ನೆಪವೊಡ್ಡಿ ಬೈಕು ಸವಾರರಿಗೆ ಹೆಲ್ಮೆಟ್ ಧರಿಸದಂತೆಯೂ ತಾಕೀತು ಮಾಡಿ ರಾಜಪುತ್ ಸುದ್ದಿಯಲ್ಲಿದ್ದರು.
#Expose Adani, Ambani etc knew about demonetisation in advance & sorted, claims BJP MLA Bhawani Singh Rajawat from RJ criticising the move! pic.twitter.com/Dvc67xBkXI
— Gaurav Pandhi (@GauravPandhi) November 16, 2016