ಅನಿವಾಸಿ ಭಾರತೀಯರ ಸಂಪಾದನೆ ಸುರಕ್ಷತೆ ಹೇಗೆ ?

Update: 2016-11-17 06:39 GMT

ಹೊಸದಿಲ್ಲಿ, ನ.17 : ಸರಕಾರ 500 ಹಾಗೂ 1000 ರೂ. ಹಳೆಯ ನೋಟುಗಳನ್ನು ರದ್ದುಪಡಿಸಿದಂದಿನಿಂದ ತಮ್ಮಲ್ಲಿರುವ ಹಳೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಜನರು ಬ್ಯಾಂಕುಗಳು ಹಾಗೂ ಎಟಿಎಂ ಗಳ ಮುಂದೆ  ಗಂಟೆಗಟ್ಟಲೆ ಸರತಿ ನಿಲ್ಲುತ್ತಿದ್ದಾರೆ. ಈ ನಡುವೆ ಅನಿವಾಸಿ ಭಾರತೀಯರೂ ಈ ನೋಟು ರದ್ದತಿಯಿಂದ ಗೊಂದಲಕ್ಕೊಳಗಾಗಿದ್ದು ತಮ್ಮಲ್ಲಿರುವ ಹಳೆ ನೋಟುಗಳನ್ನು ಹೇಗೆ ವಿನಿಮಯ ಮಾಡಿಕೊಳ್ಳುವುದು ಎಂದು ಚಿಂತಿಸುತ್ತಿದ್ದಾರೆ. ಈ ಬಗ್ಗೆ ಜನರ ಸಂಶಯ ನಿವಾರಿಸುವ ಸಲುವಾಗಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ  ಕ್ಲಿಯರ್ಟ್ಯಾಕ್ಸ್.ಕಾಂ ನ ಅರ್ಚಿತ ಗುಪ್ತಾರೊಂದಿಗೆ ಮಾತನಾಡಿ ಅನಿವಾಸಿ ಭಾರತೀಯರಿಗೆ ಉಪಯುಕ್ತವಾಗುವ ಕೆಲ ಮಾಹಿತಿ ಸಂಗ್ರಹಿಸಿದೆ. ಅನಿವಾಸಿ ಭಾರತೀಯರ  ಕೆಲ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.

1.  ಅಮೆರಿಕ, ಕೆನಡಾ, ಆಸ್ಟ್ರೇಲಿಯ, ಜಪಾನ್, ಸಿಂಗಾಪುರ ಮುಂತಾದ ದೇಶಗಳಲ್ಲಿ ವಾಸಿಸುವ ಅನಿವಾಸಿ ಭಾರತೀಯರು ತಮ್ಮ ಹಳೆ ಕರೆನ್ಸಿಗಳನ್ನು ಹೇಗೆ ವಿನಿಮಯ ಮಾಡಿಕೊಳ್ಳಬಹುದು ?

ಉತ್ತರ : ಅನಿವಾಸಿ ಭಾರತೀಯರು ಭಾರತಕ್ಕೆ ಸ್ವತಹ ಬಂದು ತಮ್ಮಲ್ಲಿರುವ ರದ್ದಾದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು ಇಲ್ಲವೇ ತಮ್ಮ ಪರವಾಗಿ ಹೀಗೆ ಮಾಡಲು ಯಾರಿಗಾದರೂ ಅಧಿಕಾರ ನೀಡಿ ಕಳುಹಿಸಬಹುದು. ಭಾರತದ ಸರಕಾರಿ ಹಾಗೂ ಖಾಸಗಿ  ಬ್ಯಾಂಕುಗಳ ವಿದೇಶಿ ಶಾಖೆಗಳು ದೇಶದ ಹೊರಗೆ ರದ್ದಾದ ನೋಟುಗಳನ್ನು ವಿನಿಮಯ ಮಾಡಿಕೊಡುವುದಿಲ್ಲ.

ಡಿಸೆಂಬರ್ 30 ರ ಗಡುವಿನ ಮೊದಲು ಅನಿವಾಸಿ ಭಾರತೀಯರು ಸ್ವದೇಶಕ್ಕೆ ಮರಳುವರೆಂದಾದರೆ ಅವರು ಅದನ್ನು ವಿನಿಮಯ ಮಾಡಿಕೊಳ್ಳಬಹುದು ಯಾ ತಮ್ಮ ಎನ್ ಆರ್ ಓ ಖಾತೆಯಲ್ಲಿ ಠೇವಣಿಯಿರಿಸಬಹುದು. ಅನಿವಾಸಿ ಭಾರತೀಯರು ಭಾರತಕ್ಕೆ ಜನವರಿ 2 ರಿಂದ ಮಾರ್ಚ್ 31 ರೊಳಗಾಗಿ ಬರುವರೆಂದಾದರೆ ಅವರು ಆರ್ ಬಿ ಐ ನ ನಿದರ್ಿಷ್ಟ ಶಾಖೆಗೆ ಅಗತ್ಯ ದಾಖಲೆಗಳೊಂದಿಗೆ ಹೋಗಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು.

ಅವರ ಬಳಿ ಭಾರತದಲ್ಲಿ ಹಳೆ ನೋಟುಗಳಿವೆಯೆಂದಾದಲ್ಲಿ ತಮ್ಮ ಪರವಾಗಿ  ಇನ್ನೊಬ್ಬರ ಮುಖಾಂತರ  ಈ ನೋಟುಗಳನ್ನು ಬ್ಯಾಂಕುಗಳಲ್ಲಿ ಠೇವಣಿಯಿರಿಸಬಹುದು. ಅನಿವಾಸಿ ಭಾರತೀಯ ನೀಡಿದ  ಪತ್ರ, ಗುರುತ ಚೀಟಿಯೊಂದಿಗೆ ಆತ ಬ್ಯಾಂಕು ಖಾತೆಗೆ ಬರಬೇಕು.
ಆದರೆ ರದ್ದಾದ ನೋಟುಗಳು ವಿದೇಶದಲ್ಲಿವೆಯೆಂದಾದರೆ,  ಯಾರಾದರೂ ನಂಬಿಕಸ್ಥರ ಮುಖಾಂತರ ಭಾರತಕ್ಕೆ ತಂದು ಅವರ ಪರವಾಗಿ ಬ್ಯಾಂಕಿನಲ್ಲಿ ಠೇವಣಿಯಿರಿಸಬಹುದಾಗಿದೆ.
 
2. ಅನಿವಾಸಿ ಭಾರತೀಯರು ತಮ್ಮಲ್ಲಿರುವ ಎಲ್ಲಾ ನಗದು ಹಣವನ್ನು ಎನ್ ಆರ್ ಒ ಖಾತೆಗಳಿಗೆ ಜಮೆ ಮಾಡಬಹುದೇ ? ಈ ಹಣದ ಮೇಲೆ ತೆರಿಗೆ ವಿಧಿಸಲಾಗುವುದೇ ?

ಉತ್ತರ :  ಎಲ್ಲಾ ನಗದನ್ನು ಎನ್ ಆರ್ ಒ ಖಾತೆಗಳಿಗೆ ವರ್ಗಾಯಿಸಬಹುದು. ಆದರೆ ರೂ 2.5 ಲಕ್ಷಕ್ಕಿಂತ ಹೆಚ್ಚಿನ ಹಣ ಡಿಸೆಂಬರ್ 30 ರೊಳಗಾಗಿ ಜಮೆಗೊಂಡರೆ ಬ್ಯಾಂಕುಗಳು ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕಿದೆ. ಠೇವಣಿದಾರರು ಪಾವತಿಸುತ್ತಿರುವ ಆದಾಯ ತೆರಿಗೆಯನ್ನು ಅವಲೋಕಿಸಿ ಇಲಾಖೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ.

 
3. ಪ್ರಸಕ್ತ ವಿದೇಶ ಪ್ರಯಾಣಗೈಯ್ಯುವ ಭಾರತೀಯರು ತಮ್ಮಲ್ಲಿರುವ ರದ್ದಾದ ನೋಟುಗಳನ್ನು ಸ್ಥಳೀಯ ಕರೆನ್ಸಿಗೆ ಬದಲಾಯಿಸಿಕೊಳ್ಳಲು ಉಪಯೋಗಿಸಬಹುದೇ ?
ಉತ್ತರ : ವಿದೇಶಕ್ಕೆ ತೆರಳಿದವರು ಮತ್ತೆ ಭಾರತಕ್ಕೆ ಬಂದು ತಮ್ಮಲ್ಲಿರುವ ನೋಟುಗಳನ್ನು ವಿನಿಮಯ ಮಾಡಬೇಕು. ಸದ್ಯಕ್ಕೆ ಅವರು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್, ಟ್ರಾವೆಲಸರ್್ ಚೆಕ್ ಉಪಯೋಗಿಸಬೇಕಾಗುತ್ತದೆ.
 
4. ಭಾರತೀಯ ಕರೆನ್ಸಿ ಉಪಯೋಗಿಸುತ್ತಿರುವ ನೇಪಾಳದಲ್ಲಿ ಏನಾಗುತ್ತದೆ ? ಇನ್ನೊಂದು ದೇಶದ ಕರೆನ್ಸಿ ದಾರರಿಗೆ ಭಾರತ ಸರಕಾರ ತನ್ನ ನಿಯಮಗಳನ್ನು ಹೇರಬಹುದೇ ?
ಉತ್ತರ : ಭಾರತದ ಕರೆನ್ಸಿ ಉಪಯೋಗಿಸುವ ದೇಶಗಳಲ್ಲಿರುವ ರದ್ದಾದ ಹಳೆ ನೋಟುಗಳನ್ನು ಹಿಂದಕ್ಕೆ ಪಡೆಯಲು ಸರಕಾರ ಕ್ರಮ ಕೈಗೊಳ್ಳುವುದೆಂಬ ನಂಬಿಕೆಯಿದೆ. ಆದರೆ ಇಂತಹ ಕೆಲ ಸ್ಥಳಗಳಿಂದ ನಕಲಿ ನೋಟುಗಳು ಬರುತ್ತಿರುವುದರಿಂದ ಈ ಪ್ರಕ್ರಿಯೆಗೆ ಸ್ವಲ್ಪ ಸಮಯ ತಗಲುವುದು 

ಕೃಪೆ:timesofindia.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News