ಎಟಿಎಂ ಹೊರಗೆ ಸಾಲು ನಿಂತವರನ್ನು ವಿಪಕ್ಷದವರು ಕಳಿಸಿದ್ದು ಎಂದ ರಾಮದೇವ್ !
ಹೊಸದಿಲ್ಲಿ, ನ.17: ಹಳೆಯ 500 ಹಾಗೂ 1000 ರೂ. ನೋಟುಗಳನ್ನು ರದ್ದುಗೊಳಿಸಿದ ಕೇಂದ್ರ ಸರಕಾರದ ಕ್ರಮವನ್ನು ಸ್ವಾಗತಿಸಿದ ಯೋಗಗುರು ಬಾಬಾ ರಾಮದೇವ್ ಅದೇ ಸಮಯ ಎಟಿಎಂ ಹಾಗೂ ಬ್ಯಾಂಕುಗಳ ಹೊರಗೆ ಸಾಲು ನಿಂತವರನ್ನು ವಿಪಕ್ಷದವರು ಕಳುಹಿಸಿದ್ದು ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಮೆದಾಂತ, ದಿ ಮೆಡಿಸಿಟಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕೊರೊನರಿ ಕಾಂಗ್ರೆಸ್ ನಲ್ಲಿ ಮಾತನಾಡಿದ ಅವರು ಪ್ರಧಾನಿಯ ಮಾನಹಾನಿ ಮಾಡಲೆಂದೇ ವಿಪಕ್ಷಗಳು ಜನರನ್ನು ಎಟಿಎಂ ಹಾಗೂ ಬ್ಯಾಂಕುಗಳ ಎದುರು ಕ್ಯೂ ನಿಲ್ಲುವಂತೆ ಮಾಡಿವೆ, ಎಂದರು.
ದೇಶವು ಆರ್ಥಿಕ ಸವಾಲುಗಳನ್ನೆದುರಿಸುತ್ತಿದೆ. ಪ್ರಧಾನಿಯ ನಿರ್ಧಾರವು ಭ್ರಷ್ಟಾಚಾರಿಗಳಿಗೆ, ಕಪ್ಪು ಹಣ ಹೊಂದಿರುವವರಿಗೆ, ನಕಲಿ ನೋಟು ತಯಾರಕರಿಗೆ ಹಾಗೂ ಉಗ್ರವಾದಕ್ಕೆ ಬೆಂಬಲ ನೀಡುವವರಿಗೆ ದೊಡ್ಡ ಹೊಡೆತ ನೀಡಿದೆ ಎಂದರು. ಸರಕಾರದ ವಿರುದ್ಧ ಆರೋಪ ಹೊರಿಸುವ ಬದಲು ಸರಕಾರದ ಕಾರ್ಯದೊಂದಿಗೆ ಕೈಜೋಡಿಸಿ ಎಂದು ಅವರು ಕರೆ ನೀಡಿದರು.
``ಯುದ್ಧದ ಸಂದರ್ಭದಲ್ಲಿ ಯೋಧರು ಸಂಕಷ್ಟವೆದುರಿಸುತ್ತಾರೆ, ಕೆಲವೊಮ್ಮೆ ಹಲವು ದಿನಗಳ ಕಾಲ ಹಸಿವಿನಿಂದ ನರಳುತ್ತಾರೆ. ದೇಶದ ಹಿತಾಸಕ್ತಿಯಿಂದ ಜನರು ಕೆಲ ದಿನಗಳ ಕಾಲ ಕಷ್ಟ ಪಡಲು ಸಾಧ್ಯವಿಲ್ಲವೇ ?'' ಎಂದು ಅವರು ಪ್ರಶ್ನಿಸಿದರು.
``ಸರಕಾರದ ಕ್ರಮದಿಂದ ಭ್ರಷ್ಟಾಚಾರಿಗಳು ಹಾಗೂ ಕಪ್ಪು ಹಣ ಹೊಂದಿರುವವರಿಗೆ ಈಗ ಸಮಸ್ಯೆಯಾಗಿರುವುದರಿಂದಲೇ ಅವರು ಸರಕಾರವನ್ನು ಟೀಕಿಸುತ್ತಿದ್ದಾರೆ,'' ಎಂದು ರಾಮದೇವ್ ಹೇಳಿದರು.
ಯೋಗ ಹಾಗೂ ಆಯುರ್ವೇದದ ಮಹತ್ವದ ಬಗ್ಗೆಯೂ ಬಾಬಾ ರಾಮದೇವ್ ಈ ಸಂದರ್ಭ ಮಾತನಾಡಿದರು.