×
Ad

ಬ್ಯಾಂಕ್‌ನಲ್ಲೇ ಕೊನೆಯುಸಿರೆಳೆದ ಬ್ಯಾಂಕ್‌ ವ್ಯವಸ್ಥಾಪಕ

Update: 2016-11-17 15:08 IST

ರೋಹ್ಟಕ್, ನ.17: ಹರ‍್ಯಾಣದ ರೋಹ್ಟಕ್ ನಲ್ಲಿ ಕೋಅಪರೇಟಿವ್‌ ಬ್ಯಾಂಕ್ ಅಧಿಕಾರಿಯೊಬ್ಬರು ಸತತ ಬಿಡುವಿಲ್ಲದ ಕೆಲಸದ ಒತ್ತಡ ತಾಳಲಾರದೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ರೋಹ್ಟಕ್  ಕೋಅಪರೇಟಿವ್‌ ಬ್ಯಾಂಕ್‌ ವ್ಯವಸ್ಥಾಪಕರಾದ 56ರ ಹರೆಯದ ರಾಜೇಶ್‌ ಕುಮಾರ್‌ ಅವರು ಕೆಲಸದ ಒತ್ತಡದಿಂದಾಗಿ  ಸತತ ಮೂರು ದಿನ  ಬ್ಯಾಂಕ್‌ನಲ್ಲೇ ಉಳಿದುಕೊಂಡಿದ್ದರು.  ನಿನ್ನೆ ಬೆಳಗ್ಗೆ ತನ್ನ ಛೇಂಬರ್‌ನಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಐನೂರು  ಮತ್ತು ಸಾವಿರ ನೋಟು ನಿಷೇಧದ ಹಿನ್ನೆಲೆಯಲ್ಲಿ ಪ್ರತಿನಿತ್ಯ ನೂರಾರು ಮಂದಿ ಜನಸಾಮಾನ್ಯರು ನೋಟುಗಳ ಬದಲಾವಣೆ ಮತ್ತು ಠೇವಣಿ ಇಡಲು ಬ್ಯಾಂಕ್‌ಗೆ  ಬರುತ್ತಿದ್ದರು. ಮೂರು ದಿನಗಳಿಂದ ಕೆಲಸದ ಒತ್ತಡದಿಂದಾಗಿ ಮನೆಗೂ ತೆರಳದೆ ರಾಜೇಶ್‌ ಕುಮಾರ್‌ ಬ್ಯಾಂಕ್‌ನಲ್ಲೇ ಉಳಿದು ಕೊಂಡಿದ್ದರು.
ಮೂರು ದಿನಗಳಿಂದ ತನ್ನ ಕಚೇರಿಯಲ್ಲೇ ನಿದ್ದೆಗೆ ಶರಣಾಗಿದ್ದ ರಾಜೇಶ್‌ ಕುಮಾರ್‌ ಅವರನ್ನು ಬುಧವಾರ ಬೆಳಗ್ಗೆ ಸೆಕ್ಯೂರಿಟಿ ಗಾರ್ಡ್‌ ಎಬ್ಬಿಸಲು ಬಂದಾಗ ಅವರ ಕಚೇರಿ ಬಂದ್‌ ಆಗಿತ್ತು. ಕರೆದಾಗ ಉತ್ತರವಿಲ್ಲ. ತಕ್ಷಣ ಕಚೇರಿಯ ಸಿಬ್ಬಂದಿಗಳಿಗೆ ವಿಷಯ ತಿಳಿಸಿದರು. ಬಳಿಕ ಪೊಲೀಸರು ಬಂದು ಕಚೇರಿಯ ಬೀಗ ಮುರಿದು ಒಳಪ್ರವೇಶಿಸಿದಾಗ ರಾಜೇಶ್‌ ಕುಮಾರ್‌ ಮೃತಪಟ್ಟಿರುವುದು ಬೆಳಕಿಗೆ ಬಂತು ಎನ್ನಲಾಗಿದೆ.
ಗುರ್ಗಾಂನ್‌ ನಿವಾಸಿ ಕುಮಾರ‍್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News