×
Ad

ಹಳೆ ನೋಟು ವಿನಿಮಯ, ಮದುವೆ ಖರ್ಚಿನ ಕುರಿತು ಮಹತ್ವದ ಆದೇಶ

Update: 2016-11-17 19:26 IST

ಹೊಸದಿಲ್ಲಿ, ನ.17: ರದ್ದಾಗಿರುವ ರೂ.500 ಹಾಗೂ 1000ದ ನೋಟುಗಳನ್ನು ರೂ. 2 ಸಾವಿರದ ಹೊಸ ನೋಟುಗಳೊಂದಿಗೆ ಬದಲಾಯಿಸುವ ಮಿತಿಯನ್ನು ಸರಕಾರವು ಗುರುವಾರ ಈಗಿನ ರೂ.4,500ರಿಂದ ರೂ. 2,000ಕ್ಕೆ ಇಳಿಸಿವೆ.
ನಡೆಯುತ್ತಿರುವ ಮದುವೆಗಳ ಹಂಗಾಮಿನಲ್ಲಿ ವರ, ವಧು ಅಥವಾ ಅವರ ಹೆತ್ತವರ ಬ್ಯಾಂಕ್ ಖಾತೆಗಳಿಂದ ರೂ.2.5 ಲಕ್ಷದ ವರೆಗೆ ನಗದು ಹಿಂದೆಗೆಯಲು ಅವಕಾಶ ನೀಡಲಾಗಿದೆ.

ರೂ.500 ಹಾಗೂ 1000ದ ಹಳೆಯ ನೋಟುಗಳನ್ನು ಕೌಂಟರ್‌ಗಳಲ್ಲಿ ಬದಲಾಯಿಸುವ ಲಾಭ ಹೆಚ್ಚಿನ ಸಂಖ್ಯೆಯ ಜನರಿಗೆ ದೊರೆಯುವಂತಾಗಲು ನಾಳೆಯಿಂದ ಜಾರಿಗೆ ಬರುವಂತೆ ಮಿತಿಯನ್ನು ಈಗಿರುವ ರೂ.4,500ರಿಂದ ರೂ.2,000ಕ್ಕೆ ಇಳಿಸಲಾಗಿದೆ ಎಂದು ಆರ್ಥಿಕ ವ್ಯವಹಾರ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಪತ್ರಕರ್ತರಿಗೆ ತಿಳಿಸಿದರು.

ರೂ.500 ಹಾಗೂ 1000ದ ಹಳೆಯ ನೋಟುಗಳ ವಿನಿಮಯವನ್ನು ಕೌಂಟರ್‌ಗಳಲ್ಲಿ ಡಿ.30ರ ವರೆಗೆ ಒಬ್ಬನು ಒಂದು ಸಾರಿ ಮಾತ್ರ ಮಾಡಬಹುದು. ಇದರಿಂದ ಹೆಚ್ಚು ಜನರಿಗೆ ನೋಟು ವಿನಿಮಯಕ್ಕೆ ಅವಕಾಶ ಲಭಿಸುತ್ತದೆ. ನಗದಿನ ಯಾವುದೇ ಕೊರತೆಯಿಲ್ಲ. ಸಾಕಷ್ಟು ನಗದು ಲಭ್ಯವಿದೆಯೆಂದು ಅವರು ಹೇಳಿದರು.
ಒಂದಕ್ಕಿಂತ ಹೆಚ್ಚು ಬಾರಿ ಹಳೆಯ ನೋಟು ಬದಲಿಸುವವರನ್ನು ಗುರುತಿಸಲು ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಚ್ಚುವಂತೆ ಸರಕಾರ ಬ್ಯಾಂಕ್‌ಗಳಿಗೆ ಆದೇಶ ನೀಡಿದ ಒಂದು ದಿನದ ಬಳಿಕ ಈ ನಿರ್ಧಾರ ಹೊರಬಿದ್ದಿದೆ.

ನ.8ರಂದು ಪ್ರಧಾನಿ ನರೇಂದ್ರ ಮೋದಿ ದೊಡ್ಡ ನೋಟುಗಳನ್ನು ರದ್ದುಗೊಳಿಸಿದ ಬಳಿಕ ವಿವಾಹದ ಉದ್ದೇಶಕ್ಕೆ ನಿಯಮವನ್ನು ಕೊಂಚ ಸಡಿಲಿಸುವಂತೆ ಪ್ರಧಾನಿ ಹಾಗೂ ಅರ್ಥ ಸಚಿವರಿಗೆ ಹಲವು ಮನವಿಗಳು ಬಂದಿವೆ.

ಅದನ್ನು ಸರಕಾರ ಪರಿಗಣಿಸಿದೆ. ಮದುವೆ ಸಮಾರಂಭಗಳಿಗೆ ವಧು, ವರ ಅಥವಾ ಅವರ ಹೆತ್ತವರ ಬ್ಯಾಂಕ್ ಖಾತೆಗಳಿಂದ ರೂ.2.5 ಲಕ್ಷದ ವರೆಗೆ ಹಣ ಹಿಂದೆಗೆಯಲು ಅವಕಾಶ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಖಾತೆಗಳು ‘ನಿಮ್ಮ ಗ್ರಾಹಕರನ್ನು ತಿಳಿಯಿರಿ’ ನಿಯಮ ಪೂರೈಸಿರಬೇಕು ಹಾಗೂ ಬ್ಯಾಂಕ್‌ಗೆ ಸ್ವಯಂ ಘೋಷಣೆಯನ್ನು ನೀಡಬೇಕೆಂದು ದಾಸ್ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News