ನಾಯಕನಾಗಿ ಮುಂದುವರಿಯಲು ಮಿಸ್ಬಾಗೆ ಪಿಸಿಬಿ ವಿನಂತಿ
ಕರಾಚಿ, ನ.17: ಆಸ್ಟ್ರೇಲಿಯ ಪ್ರವಾಸದ ತನಕ ಪಾಕಿಸ್ತಾನ ತಂಡವನ್ನು ನಾಯಕನಾಗಿ ಮುನ್ನಡೆಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು(ಪಿಸಿಬಿ) ಟೆಸ್ಟ್ ತಂಡದ ನಾಯಕ ಮಿಸ್ಬಾವುಲ್ ಹಕ್‌ರಲ್ಲಿ ವಿನಂತಿಸಿಕೊಂಡಿದೆ.
ಆಸ್ಟ್ರೇಲಿಯ ಸರಣಿಯ ಬಳಿಕ ಟೆಸ್ಟ್ ತಂಡಕ್ಕೆ ನೂತನ ನಾಯಕನ ಆಯ್ಕೆ ನಡೆಯಲಿದೆ. ಅಲ್ಲಿಯ ತನಕ ನಾಯಕನಾಗಿ ಮುಂದುವರಿಯುವಂತೆ ಮಿಸ್ಬಾರನ್ನು ಕೇಳಿಕೊಳ್ಳಲಾಗಿದೆ. ಜೂನ್‌ನಲ್ಲಿ ಪಾಕ್ ತಂಡ ಇಂಗ್ಲೆಂಡ್‌ಗೆ ತೆರಳುವ ಮೊದಲೇ ಪಿಸಿಬಿ ಚೇರ್ಮನ್ ಶಹರ್ಯಾರ್ ಖಾನ್ ಅವರು ಮಿಸ್ಬಾರನ್ನು ಭೇಟಿಯಾಗಿದ್ದರು. ಪಿಸಿಬಿ ಮನವಿಗೆ ಮಿಸ್ಬಾ ಸಮ್ಮಿತಿ ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ.
43ರ ಹರೆಯದ ಮಿಸ್ಬಾವುಲ್ ಹಕ್ ಕಳೆದ ವರ್ಷವೇ ನಿವೃತ್ತಿಯಾಗಲು ನಿರ್ಧರಿಸಿದ್ದರು. ಪಾಕಿಸ್ತಾನ ಪ್ರಮುಖ ಸರಣಿ ಆಡಲಿರುವ ಕಾರಣ ನಾಯಕನ ಸ್ಥಾನದಲ್ಲಿ ಮುಂದುವರಿಯುವಂತೆ ಮಿಸ್ಬಾರನ್ನು ಪಿಸಿಬಿ ಕೇಳಿಕೊಂಡಿತ್ತು.
ಇತ್ತೀಚೆಗೆ ಮಿಸ್ಬಾರನ್ನು ಭೇಟಿಯಾಗಿರುವ ಪಿಸಿಬಿ ಮುಖ್ಯಸ್ಥರು ಮಿಸ್ಬಾ ಇನ್ನು ಹೆಚ್ಚು ಸಮಯ ನಾಯಕನಾಗಿ ಮುಂದುವರಿಯಲಾರರು ಎಂಬುದನ್ನು ಸ್ಪಷ್ಟಪಡಿಸಿಕೊಂಡಿದ್ದರು. ಅಝರ್ ಅಲಿ ಪ್ರಸ್ತುತ ಏಕದಿನ ತಂಡದ ನಾಯಕನಾಗಿದ್ದು, ಅಲಿ ಟೆಸ್ಟ್ ತಂಡದ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.
ಪಿಸಿಬಿ ದೀರ್ಘಾವಧಿಗೆ ಟೆಸ್ಟ್ ನಾಯಕನನ್ನು ಆಯ್ಕೆ ಮಾಡುವ ಮೊದಲು ಮುಂದಿನ ವರ್ಷ ತಂಡದ ಇನ್ನೋರ್ವ ಹಿರಿಯ ಆಟಗಾರ ಯೂನಿಸ್‌ಖಾನ್‌ರನ್ನು ನಾಯಕನನ್ನಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ.
ಮಿಸ್ಬಾ ಕ್ರೈಸ್ಟ್‌ಚರ್ಚ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕ್ ತಂಡವನ್ನು ನಾಯಕನಾಗಿ 50ನೆ ಬಾರಿ ಮುನ್ನಡೆಸಲಿದ್ದಾರೆ. ಗುರುವಾರ ಆರಂಭವಾಗಬೇಕಿದ್ದ ಈ ಪಂದ್ಯ ಮಳೆಯಿಂದಾಗಿ ಆರಂಭವಾಗಿರಲ್ಲಿಲ್ಲ.
ಮಿಸ್ಬಾ 2010ರಲ್ಲಿ ಮೊದಲ ಬಾರಿ ಪಾಕ್ ತಂಡದ ಟೆಸ್ಟ್ ನಾಯಕನಾಗಿ ಆಯ್ಕೆಯಾಗಿದ್ದರು. ಕಳೆದ ವರ್ಷ ಆಸ್ಟ್ರೇಲಿಯ-ನ್ಯೂಝಿಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನ ವೇಳೆ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.