ಚೊಚ್ಚಲ ಟೆಸ್ಟ್ ಆಡಿದ ಕಿವೀಸ್‌ನ ಕಾಲಿನ್ , ರಾವಲ್ ದಾಖಲೆ
ಕ್ರಿಸ್ಟ್ ಚರ್ಚ್, ನ.18: ನ್ಯೂಝಿಲೆಂಡ್ ನ ಆಲ್‌ರೌಂಡರ‍್ ಕಾಲಿನ್ ಡಿ ಗ್ರಾಂಡ್‌ಹೊಮೆ ಇಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಪ್ರಥಮ ಟೆಸ್ಟ್ ನ ಎರಡನೆ ದಿನ 6 ವಿಕೆಟ್ ಉಡಾಯಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಇದೇ ವೇಳೆ ಗುಜರಾತ್ ಮೂಲದ ಜೀತ್ ಅಶೋಕ್ ರಾವಲ್ ಅರ್ಧ ಶತಕ ದಾಖಲಿಸುವ ಮೂಲಕ ದಾಖಲೆ ಬರೆದಿದ್ದಾರೆ. ಅವರು ಔಟಾಗದೆ 108 ಎಸೆತಗಳನ್ನು ಎದುರಿಸಿ 7 ಬೌಂಡರಿಗಳ ಸಹಾಯದಿಂದ 55 ರನ್ ಗಳಿಸಿದ್ದಾರೆ.
ಚೊಚ್ಚಲ ಟೆಸ್ಟ್ ಆಡುತ್ತಿರುವ ಕಾಲಿನ್ 15.5 ಓವರ‍್ ಗಳಲ್ಲಿ 41 ಕ್ಕೆ 6 ವಿಕೆಟ್ ಉಡಾಯಿಸುವ ಮೂಲಕ ನ್ಯೂಝಿಲೆಂಡ್ ಪರ ಚೊಚ್ಚಲ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ದಾಖಲೆ ನಿರ್ಮಿಸಿದ್ದಾರೆ.
ಹರಾರೆ ಮೂಲದ ಆಕ್ಲೆಂಡ್ ನ ಆಲ್‌ರೌಂಡರ‍್ ಕಾಲಿನ್ ಅವರು ಮೊದಲ ಇನಿಂಗ್ಸ್ ನಲ್ಲಿ ಪಾಕಿಸ್ತಾನದ ಆರಂಭಕಾರ ಅಝರ‍್ ಅಲಿ ವಿಕೆಟ್ ಉಡಾಯಿಸುವ ಮೂಲಕ ತನ್ನ ಖಾತೆಗೆ ಮೊದಲ ವಿಕೆಟ್ ಸೇರಿಸಿಕೊಂಡಿದ್ದರು.
ಜೀತ್ ಅಶೋಕ್ ರಾವಲ್ ಚೊಚ್ಚಲ ಟೆಸ್ಟ್‌ನಲ್ಲಿ ಅವರು ಔಟಾಗದೆ 55 ರನ್(108ಎ, 7ಬೌ) ಗಳಿಸಿ ಬ್ಯಾಟಿಂಗ್‌ನ್ನು ಮೂರನೆ ದಿನಕ್ಕೆ ಕಾಯ್ದಿರಿಸಿದರು. 28ರ ಹರೆಯದ ರಾವಲ್ ಹಲವು ವರ್ಷಗಳಿಂದ ಆಕ್ಲೆಂಡ್ ತಂಡದ ಪರ ಆಡುತ್ತಿದ್ದರು. 2015 -16ನೆ ಸಾಲಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 59.76 ಸರಾಸರಿಯಂತೆ 1,016 ರನ್ ಗಳಿಸಿರುವ ಅವರು ನಿರೀಕ್ಷೆಯಂತೆ ನ್ಯೂಝಿಲೆಂಡ್‌ನ ರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು.
ಸ್ಪಿನ್ ಬೌಲರ್ ಆಗಿರುವ ರಾವಲ್ ಗುಜರಾತ್‌ನಲ್ಲಿ ಜನಿಸಿ ಅಲ್ಲೇ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಅವರು ಭಾರತದ ಹಿರಿಯ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಕಲಿತ ಶಾಲೆಯಲ್ಲೇ ಶಿಕ್ಷಣ ಪಡೆದಿದ್ದ ರಾವಲ್ ಹೆತ್ತವರ ಜತೆ ನ್ಯೂಝಿಲೆಂಡ್‌ಗೆ ತೆರಳಿದ ಬಳಿಕ ಅಲ್ಲೇ ನೆಲೆ ಕಂಡು ಕೊಂಡಿದ್ದರು. ನ್ಯೂಝಿಲೆಂಡ್‌ನ ಅಂಡರ್-19 ತಂಡದ ಮೂಲಕ ಅವರು ನ್ಯೂಝಿಲೆಂಡ್ ಕ್ರಿಕೆಟ್ ಪ್ರವೇಶಿಸಿದ್ದರು.
ರಾವಲ್ 71 ಪ್ರಥಮ ದರ್ಜೆ ಪಂದ್ಯಗಳಲ್ಲಿ 43.69 ಸರಾಸರಿಯಂತೆ 5,156 ರನ್, 14 ಶತಕ, 23 ಅರ್ಧಶತಕ ಮತ್ತು 19 ವಿಕೆಟ್ ಗಳಿಸಿದ್ದಾರೆ.