ಟ್ರಂಪ್, ಶಿಂರೊ ಅಬೆ ಭೇಟಿ; ಸಭೆಯಲ್ಲಿ ಪಾಲ್ಗೊಂಡ ಇವಾಂಕಾ
ನ್ಯೂಯಾರ್ಕ್, ನ. 18: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಜಪಾನ್ ಪ್ರಧಾನಿ ಶಿಂರೊ ಅಬೆಯನ್ನು ಭೇಟಿಯಾಗಿದ್ದಾರೆ.
ಕಳೆದ ವಾರ ನಡೆದ ಚುನಾವಣೆಯಲ್ಲಿ ದೇಶದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ, ವಿದೇಶಿ ನಾಯಕರೊಬ್ಬರನ್ನು ಅವರು ಭೇಟಿಯಾಗುವುದು ಇದೇ ಮೊದಲು. ಆದರೆ, ಈ ಭೇಟಿಯ ಅವಧಿಯಲ್ಲಿ ಹೆಚ್ಚು ಸುದ್ದಿಯಾದವರು ಟ್ರಂಪ್‌ರ ಮಗಳು ಇವಾಂಕಾ. ಉಭಯ ನಾಯಕರ ಮಾತುಕತೆಯ ವೇಳೆ ಅವರೂ ಉಪಸ್ಥಿತರಿದ್ದರು.
ಇದು ಟ್ರಂಪ್ ಸರಕಾರದ ಮೇಲೆ ಕುಟುಂಬ ಸದಸ್ಯರ ಹಸ್ತಕ್ಷೇಪದ ಸಾಧ್ಯತೆಗಳನ್ನು ತೆರೆದಿಟ್ಟಿದೆ.
ರಿಯಲ್ ಎಸ್ಟೇಟ್ ಕುಳ ಟ್ರಂಪ್‌ರ ಮ್ಯಾನ್‌ಹಟನ್‌ನಲ್ಲಿರುವ ನಿವಾಸ ಟ್ರಂಪ್ ಪ್ಲಾಝಾದಲ್ಲಿ ನಡೆದ ಮಾತುಕತೆಯ ವೇಳೆ, ರೂಪದರ್ಶಿಯಾಗಿದ್ದು ಬಿಝ್ನೆಸ್ ಎಕ್ಸಿಕ್ಯೂಟಿವ್ ಆಗಿ ಮಾರ್ಪಾಡಾದ ಇವಾಂಕಾ ಹಾಜರಿದ್ದರು.
ಈ ಸಭೆಯಿಂದ ಮಾಧ್ಯಮಗಳನ್ನು ಹೊರಗಿಡಲಾಗಿತ್ತು. ಆದರೆ, ಜಪಾನ್ ಸರಕಾರ ಬಿಡುಗಡೆ ಮಾಡಿರುವ ಚಿತ್ರಗಳಲ್ಲಿ ಇವಾಂಕಾ, ಅವರ ಗಂಡ ಹಾಗೂ ರಿಯಲ್ ಎಸ್ಟೇಟ್ ಡೆವೆಲಪರ್ ಮತ್ತು ಪ್ರಕಾಶಕ ಜೇರ್ಡ್ ಕುಶ್ನರ್ ಇರುವುದು ಪತ್ತೆಯಾಗಿದೆ.
ಇವಾಂಕಾ ಮತ್ತು ಕುಶ್ನರ್, ಟ್ರಂಪ್‌ರ ಪ್ರಮುಖ ಸಲಹೆಗಾರರಾಗಿ ಹೊರಹೊಮ್ಮಿದ್ದಾರೆ.
ನವೆಂಬರ್ 8ರಂದು ನಡೆದ ಚುನಾವಣೆಯಲ್ಲಿ ಟ್ರಂಪ್ ತನ್ನ ಎದುರಾಳಿ ಹಿಲರಿ ಕ್ಲಿಂಟನ್‌ರನ್ನು ಎಲ್ಲ ನಿರೀಕ್ಷೆಗಳಿಗೆ ವಿರುದ್ಧವಾಗಿ ಸೋಲಿಸಿದ್ದಾರೆ.