ಟ್ರಂಪ್ ನ್ಯಾಟೊ ಮುನ್ನಡೆಸುತ್ತಾರೆಂಬ ವಿಶ್ವಾಸ: ಮಹಾಕಾರ್ಯದರ್ಶಿ
ಬ್ರಸೆಲ್ಸ್, ನ. 18: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (ನ್ಯಾಟೊ)ನ್ನು ಮುನ್ನಡೆಸುವ ಬಗ್ಗೆ ತನಗೆ ವಿಶ್ವಾಸವಿದೆ ಎಂದು ನ್ಯಾಟೊ ಮಹಾ ಕಾರ್ಯದರ್ಶಿ ಜೆನ್ಸ್ ಸ್ಟಾಲ್ಟನ್‌ಬರ್ಗ್ ಶುಕ್ರವಾರ ಹೇಳಿದ್ದಾರೆ. ಈ ವಿಷಯದಲ್ಲಿ ತಾನು ಟ್ರಂಪ್ ಜೊತೆಗೆ ಶೀಘ್ರವೇ ಮಾತನಾಡಲಿದ್ದೇನೆ ಎಂದು ಅವರು ಹೇಳಿದರು.
ಭದ್ರತೆಗಾಗಿ ಕಡಿಮೆ ಖರ್ಚು ಮಾಡುವ ದೇಶಗಳನ್ನು ಅಮೆರಿಕ ಯಾಕೆ ರಕ್ಷಿಸಬೇಕು ಎಂಬುದಾಗಿ ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಪ್ರಶ್ನಿಸಿದ್ದರು. ರಶ್ಯದ ಜೊತೆಗಿನ ಉದ್ವಿಗ್ನತೆ ಹೆಚ್ಚಾಗಿರುವ ಸಮಯದಲ್ಲಿ ಈ ಒಕ್ಕೂಟಕ್ಕೆ ನೀಡುವ ನಿಧಿಯನ್ನು ಟ್ರಂಪ್ ಹಿಂದಕ್ಕೆ ಪಡೆಯಬಹುದು ಎಂಬ ಭೀತಿ ನ್ಯಾಟೊ ದೇಶಗಳನ್ನು ಆವರಿಸಿರುವುದನ್ನು ಸ್ಮರಿಸಬಹುದಾಗಿದೆ.
‘‘ನ್ಯಾಟೊ ಒಕ್ಕೂಟದಲ್ಲಿನ ಅಮೆರಿಕದ ನಾಯಕತ್ವವನ್ನು ಟ್ರಂಪ್ ವಹಿಸಲಿದ್ದಾರೆ ಎಂಬ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ’’ ಎಂದು ಬ್ರಸೆಲ್ಸ್‌ನಲ್ಲಿ ನಡೆದ ಸಮಾವೇಶವೊಂದರಲ್ಲಿ ಸ್ಟಾಲ್ಟನ್‌ಬರ್ಗ್ ಹೇಳಿದರು.
ಟರ್ಕಿ ಅಧಿಕಾರಿಗಳಿಂದ ಬೇರೆ ದೇಶಗಳಲ್ಲಿ ಆಶ್ರಯ ಕೋರಿಕೆ
ನ್ಯಾಟೊಗೆ ನಿಯೋಜನೆಗೊಂಡಿರುವ ಟರ್ಕಿಯ ಹಲವಾರು ಅಧಿಕಾರಿಗಳು ತಾವು ಸೇವೆ ಸಲ್ಲಿಸುತ್ತಿರುವ ಸದಸ್ಯ ರಾಷ್ಟ್ರಗಳಲ್ಲಿ ಆಶ್ರಯ ಕೋರಿದ್ದಾರೆ ಎಂದು ಒಕ್ಕೂಟದ ಮುಖ್ಯಸ್ಥ ಸ್ಟಾಲ್ಟನ್‌ಬರ್ಗ್ ಶುಕ್ರವಾರ ಹೇಳಿದ್ದಾರೆ.
‘‘ನ್ಯಾಟೊದಲ್ಲಿ ಕೆಲಸ ಮಾಡುತ್ತಿರುವ ಟರ್ಕಿಯ ಕೆಲವು ಅಧಿಕಾರಿಗಳು ತಾವು ಸೇವೆ ಸಲ್ಲಿಸುತ್ತಿರುವ ದೇಶಗಳಲ್ಲಿ ಆಶ್ರಯ ಕೋರಿದ್ದಾರೆ ಎನ್ನುವ ಸುದ್ದಿ ಸರಿಯಾಗಿದೆ’’ ಎಂದು ಇಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.