×
Ad

ತನ್ನ ಸರಕಾರಕ್ಕೇ ಅವಮಾನ ಮಾಡಿದ ಸಚಿವ ಪ್ರಮೋದ್

Update: 2016-11-19 00:09 IST

ಮಾನ್ಯರೆ,
ಉಡುಪಿಯಲ್ಲಿ ಸರಕಾರದಿಂದ ಆಯೋಜಿತ ಟಿಪ್ಪುಜಯಂತಿಗೆ ಗೈರು ಹಾಜರಾಗುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ತಮ್ಮ ಹುದ್ದೆಯ ಘನತೆಗೆ ಧಕ್ಕೆ ತಂದಿದ್ದಾರೆ. ಇದಕ್ಕೆ ಅವರು ಜಿಲ್ಲೆಯ ಜನತೆಗೆ ವಿವರಣೆ ನೀಡಬೇಕಾಗಿದೆ. ಈ ರೀತಿ ಮಾಡುವ ಮೂಲಕ ಅವರು ತಮ್ಮ ಮುಖ್ಯಮಂತ್ರಿಗೆ, ಸರಕಾರಕ್ಕೂ ಅವಮಾನ ಮಾಡಿದ್ದಾರೆ. ಜಿಲ್ಲಾ ಮಟ್ಟದಲ್ಲಿ ನಡೆಯುವ ಸರಕಾರಿ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೇ ಬರದಿದ್ದರೆ ಇನ್ನು ಆ ಕಾರ್ಯಕ್ರಮ ನಡೆಸುವ ಅಗತ್ಯವೇನಿದೆ ? ಹೆಸರಿಗೆ, ದಾಖಲೆಗಾಗಿ, ಕಾಟಾಚಾರಕ್ಕೆ ಕಾರ್ಯಕ್ರಮ ಮಾಡುವ ಅಗತ್ಯ ಯಾರಿಗಿದೆ ? ಯಾರಿಗೆ ಅಂಜಿ ಪ್ರಮೋದ್ ಈ ಕಾರ್ಯಕ್ರಮಕ್ಕೆ ಕೈ ಕೊಟ್ಟಿದ್ದಾರೆ ?
 
ಕಾಂಗ್ರೆಸ್‌ನ ಹೆಚ್ಚಿನ ಮುಖಂಡರು ಇದೇ ರೀತಿ ಸೂಕ್ತ ಸಂದರ್ಭದಲ್ಲಿ ಸ್ಪಷ್ಟ ನಿಲುವು ತಾಳದೆ ಎಡಬಿಡಂಗಿತನ ತೋರಿಸುವ ಮೂಲಕ ಬಿಜೆಪಿಯನ್ನು, ಸಂಘ ಪರಿವಾರವನ್ನು ನೀರು, ಗೊಬ್ಬರ ಹಾಕಿ ಬೆಳೆಸಿದ್ದಾರೆ. ಪ್ರಮೋದ್ ಅವರ ಜಿಲ್ಲೆಯಲ್ಲೂ ಅವರ ಇಂತಹ ಮೃದು ಹಿಂದುತ್ವ ಧೋರಣೆಯಿಂದ ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತದಲ್ಲಿದ್ದೂ ದುರ್ಬಲವಾಗಿದೆ. ಮುಂದಿನ ಚುನಾವಣೆಯಲ್ಲಿ ಇದು ಸಾಬೀತಾಗಲಿದೆ. ಟಿಪ್ಪು ಜಯಂತಿಯನ್ನು ಸಂಘ ಪರಿವಾರ ಹಾಗೂ ಅಲ್ಪಸಂಖ್ಯಾತರ ನಡುವಿನ ವಿಷಯವಾಗಿ ಪರಿವರ್ತಿಸಿ ಕೊನೆಗೆ ನಷ್ಟ ಅನುಭವಿಸುವುದು ತಾವು ಮತ್ತು ತಮ್ಮ ಪಕ್ಷವೇ ಎಂಬುದನ್ನು ಪ್ರಮೋದ್ ಈಗಲಾದರೂ ತಿಳಿದುಕೊಳ್ಳದಿದ್ದರೆ ಅವರು ಮುಂದೆ ರಾಜಕೀಯವಾಗಿ ದೊಡ್ಡ ಬೆಲೆ ತೆರಬೇಕಾಗುತ್ತೆ. 

Writer - -ಸತೀಶ್ ಅಮೀನ್, ಮುಲ್ಕಿ

contributor

Editor - -ಸತೀಶ್ ಅಮೀನ್, ಮುಲ್ಕಿ

contributor

Similar News