ಗೃಹಿಣಿಯರೇ, ಕಾರ್ಮಿಕರೇ, ನಿಮ್ಮ ಖಾತೆಯನ್ನು ಬೇರೆಯವರು ಬಳಸಲು ಬಿಡುವ ಮುನ್ನ ಇದನ್ನು ಓದಿ

Update: 2016-11-19 04:23 GMT

ಹೊಸದಿಲ್ಲಿ, ನ.19: ಗೃಹಿಣಿಯರು, ಕುಶಲಕರ್ಮಿಗಳು, ಕಾರ್ಮಿಕರು ಅಥವಾ ಜನಧನ್ ಖಾತೆಗಳನ್ನು ಕಪ್ಪುಹಣ ಪರಿವರ್ತಿಸಿಕೊಳ್ಳುವ ವೇದಿಕೆಯಾಗಿ ಬಳಸಿಕೊಳ್ಳಲು ಅವಕಾಶ ನೀಡದಂತೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಹಳೆಯ ನೋಟುಗಳ ವಿನಿಮಯಕ್ಕೆ ಇದನ್ನು ಬಳಸಿಕೊಂಡಿರುವುದು ಪತ್ತೆಯಾದರೆ ಆದಾಯ ತೆರಿಗೆ ಕಾಯ್ದೆಯಡಿ ಕಾನೂನು ಕ್ರಮ ಕೈಗೊಂಡು ತೆರಿಗೆ ಹಾಗೂ ದಂಡ ವಿಧಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಎಚ್ಚರಿಕೆ ಸಂದೇಶ ರವಾನಿಸಿದೆ.
ಇಂಥ ತೆರಿಗೆಗಳ್ಳತನದ ಚಟುವಟಿಕೆಗಳ ವಿರುದ್ಧ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಿ ದಂಡ ವಿಧಿಸಲಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಆದರೆ ನೈಜವಾಗಿ ಕುಟುಂಬಗಳು ಹೊಂದಿರುವ ನಗದು ರೂಪದ ಉಳಿತಾಯವನ್ನು ಠೇವಣಿ ಮಾಡಲು ಯಾವ ಅಡ್ಡಿಯೂ ಇಲ್ಲ ಎಂದು ಸ್ಪಷ್ಟಪಡಿಸಿದೆ. ಇದಕ್ಕೂ ಮುನ್ನ ಕೇಂದ್ರ ಸರ್ಕಾರ, 2.5 ಲಕ್ಷಕ್ಕಿಂತ ಕಡಿಮೆ ನಗದು ಹಣ ಪಾವತಿಸುವ ಖಾತೆದಾರರಿಗೆ ಯಾವ ಕಿರುಕುಳವನ್ನೂ ನೀಡುವುದಿಲ್ಲ ಎಂದು ಪ್ರಕಟಿಸಿತ್ತು.
ಹೀಗೆ ಬೇರೆಯವರ ಖಾತೆಯನ್ನು ಬಳಸಿಕೊಂಡು ನಗದನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಳ್ಳುವ ಹಾಗೂ ಖಾತೆದಾರರಿಗೆ ಕಮಿಷನ್ ನೀಡುತ್ತಿರುವ ದಂಧೆ ಬಗ್ಗೆ ಗುಪ್ತಚರ ವಿಭಾಗ ವರದಿ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News