ಹೈದರಾಬಾದ್ ವಿವಿಯಲ್ಲಿ ಮುಂದುವರಿದ ವಿದ್ಯಾರ್ಥಿಗಳ ಶೋಷಣೆ
ಹೈದರಾಬಾದ್, ನ.19: ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ಮೋಸೆಸ್ ಅನ್ರಹಮ್ ಎಂಬವರು ಶುಕ್ರವಾರ ಸಂಜೆ ತಮ್ಮ ಎಡಗೈಮಣಿಕಟ್ಟಿನ ನರ ತುಂಡರಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ.
ಶಿಕ್ಷಕರೊಬ್ಬರು ತಮಗೆ ಮಾಡಿದ ಅವಮಾನವನ್ನು ಸಹಿಸಲಾರದೆ ತಮ್ಮ ಗೈಡ್ ಲ್ಯಾಬ್ ನಲ್ಲಿ ಸಂಜೆ ಸುಮಾರು 5 ಗಂಟೆಗೆ ಅವರು ಈ ವಿಪರೀತ ಕ್ರಮಕ್ಕೆ ಮುಂದಾಗಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನ್ರಹಮ್ ಅವರು ಮೂಲತಃ ಆಂಧ್ರ ಪ್ರದೇಶದ ಮಚಿಲಿಪಟ್ಣಂನವರಾಗಿದ್ದು, ವಿಶ್ವವಿದ್ಯಾನಿಲಯದ ಅಡ್ವಾನ್ಸ್ಡ್ ಸೆಂಟರ್ ಫಾರ್ ರಿಸರ್ಚ್ ಇನ್ ಹೈ ಎನರ್ಜಿ ಮೆಟೀರಿಯಲ್ಸ್ ಇಲ್ಲಿ ಅಧ್ಯಯನ ನಡೆಸುತ್ತಿದ್ದರು. ಅನ್ರಹಮ್ ಅವರು ಎರಡು ಸಂಶೋಧನಾ ಲೇಖನಗಳನ್ನು ಖ್ಯಾತ ಜರ್ನಲ್ ಗಳಲ್ಲಿ ಪ್ರಕಟಿಸಿದ ಹೊರತಾಗಿಯೂ ಅವರ ಗೈಡ್ ಅವರಿಗೆ ಸೆಮಿನಾರ್ ಗಳಲ್ಲಿ ಭಾಗವಹಿಸಲು ಅನುಮತಿಸುತ್ತಿರಲಿಲ್ಲ ಹಾಗೂ ಅವರ ಸಂಶೋಧನಾ ಕ್ಷೇತ್ರ ಮತ್ತು ಸುಪರ್ ವೈಸರ್ ಅವರನ್ನು ಬದಲಾಯಿಸುವಂತೆ ಒತ್ತಾಯಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಅವರ ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ತಿಳಿಯದೇ ಇದ್ದರೂ ಆ ದಿನ ಅವರು ತಮ್ಮ ಅಧ್ಯಯನ ಕೇಂದ್ರಕ್ಕೆ ಆಗಮಿಸಿದಾಗ ಖಿನ್ನರಾಗಿದ್ದರು ಎಂದು ತಿಳಿದು ಬಂದಿದೆ.
ವಿಶ್ವವಿದ್ಯಾನಿಲಯದ ಇದೇ ಇಲಾಖೆಯ ಇನ್ನೊಬ್ಬ ಸಂಶೋಧನಾ ವಿದ್ಯಾರ್ಥಿ ಮದರಿ ವೆಂಕಟೇಶ್ ಕೆಲ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ಕಳೆದ ಎಂಟು ತಿಂಗಳ ಹಿಂದೆ ಇನ್ನೊಬ್ಬ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ಭಾರೀ ಕೋಲಾಹಲವನ್ನೇ ಸೃಷ್ಟಿಸಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಸರೋಜಿನಿ ನಾಯ್ಡು ಸ್ಕೂಲ್ ಆಫ್ ಆರ್ಟ್ಸ್ ಎಂಡ್ ಕಮ್ಯುನಿಕೇಶನ್ ಇದರ ವಿದ್ಯಾರ್ಥಿ ಪ್ರವೀಣ್ ಕುಮಾರ್ ತಮ್ಮ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ಇನ್ನೊಬ್ಬ ಸಂಶೋಧನಾ ವಿದ್ಯಾರ್ಥಿ ಸೂರ್ಯ ಪ್ರಕಾಶ್‌ಕೂಡ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದರು.
ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಆಗಿರುವ ವೈಫಲ್ಯತೆಯೇ ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ಆತ್ಮಹತ್ಯೆ ಯತ್ನಕ್ಕೆ ಕಾರಣವೆಂದು ಹೇಳಲಾಗಿದೆ.