ಪಕ್ಷದೊಳಗೆ ತಳಮಳ: ಮೂರು ದಿನಗಳಲ್ಲಿ ಪಕ್ಷದ ಸಂಸದರ ಎರಡು ಸಭೆ ರದ್ದು ಮಾಡಿದ ಬಿಜೆಪಿ
ಹೊಸದಿಲ್ಲಿ, ನ.19: ಹೆಚ್ಚಿನ ಬಿಜೆಪಿ ಸಂಸದರು 500 ಹಾಗೂ 1000 ರೂ. ನೋಟು ಅಮಾನ್ಯದ ವಿರುದ್ಧವಾಗಿದ್ದಾರೆಂಬ ಕಾರಣಕ್ಕೆ ಬಿಜೆಪಿ ನಾಯಕತ್ವ ಕಳೆದ ಮೂರು ದಿನಗಳಲ್ಲಿ ನಡೆಯಬೇಕಿದ್ದ ಪಕ್ಷ ಸಂಸದರ ಎರಡು ಸಭೆಗಳನ್ನು ರದ್ದುಗೊಳಿಸಿದೆಯೆಂದು ತಿಳಿದು ಬಂದಿದೆ. ಸಂಸದರ ಆಕ್ರೊಶಕ್ಕೆ ತುತ್ತಾಗಬೇಕಾದೀತೆಂಬ ಭಯವೇ ಇದಕ್ಕೆ ಕಾರಣವೆನ್ನಲಾಗಿದೆ.
ಮೊದಲ ಸಭೆ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾದ ದಿನವಾದ ಬುಧವಾರದಂದು ನಡೆಯಬೇಕಿದ್ದರೆ, ಎರಡನೇ ಸಭೆ ಶುಕ್ರವಾರ ನಡೆಯಬೇಕಿತ್ತು. ಈ ಸಭೆಗಳ ರದ್ದತಿಗೆ ಪಕ್ಷ ನಾಯಕತ್ವ ಯಾವುದೇ ಕಾರಣ ನೀಡದೇ ಇದ್ದರೂ, ಬಿಜೆಪಿ ಸಂಸದರ ಅಧಿಕೃತ ಸಭೆ ನಡೆಸಿದ್ದೇ ಆದಲ್ಲಿ ಅವರೆಲ್ಲರೂ ತಮ್ಮ ಅಸಮಾಧಾನ ಹೊರಗೆಡಹಿ ಸರಕಾರಕ್ಕೆ ಇರಿಸುಮುರಿಸು ಉಂಟು ಮಾಡಬಹುದೆಂಬ ಭಯವೇ ಇದಕ್ಕೆ ಕಾರಣವೆಂದು ಪಕ್ಷದ ಕೆಲ ಮೂಲಗಳು ತಿಳಿಸಿವೆ.
ತಮ್ಮ ಹೆಸರನ್ನು ಬಹಿರಂಗಪಡಿಸಲಿಚ್ಛಿಸದ ಬಿಜೆಪಿ ಸಂಸದರೊಬ್ಬರ ಪ್ರಕಾರ ಶುಕ್ರವಾರದ ಸಭೆ ಕಳೆದ ಕೆಲದಿನಗಳ ಹಿಂದೆಯೇ ನಿಗದಿಯಾಗಿದ್ದು ಸಂಸದರಿಗೆ ನೋಟು ಅಮಾನ್ಯದ ವಿಚಾರವಾಗಿ ಹಲವು ವಿಷಯಗಳಲ್ಲಿ ಅರಿವನ್ನುಂಟು ಮಾಡುವ ಉದ್ದೇಶ ಹೊಂದಿತ್ತು. ಸಭೆಯಲ್ಲಿ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಒಂದು ನಡೆಯಲಿದೆಯೆಂದು ನಮಗೆ ತಿಳಿಸಲಾಗಿತ್ತಲ್ಲದೆ, ಹಳೆಯ 500 ಹಾಗೂ 1000 ರೂ. ನೋಟುಗಳ ಅಮಾನ್ಯ ನಿರ್ಧಾರದ ಹಿಂದಿನ ಕಾರಣಗಳನ್ನೂ ಮನದಟ್ಟು ಮಾಡಲು ನಿರ್ಧರಿಸಲಾಗಿತ್ತು.
ಆದರೆ ಸಭೆ ನಡೆಯಬೇಕಿದ್ದ ಕೆಲವೇ ಗಂಟೆಗಳ ಮೊದಲು ಅದು ರದ್ದಾದ ವಿಚಾರ ಸಂಸದರಿಗೆ ತಿಳಿಸಲಾಗಿತ್ತು. ಈ ಸಭೆ ಮುಂದಿನ ವಾರ ನಡೆಯಲಿದೆಯೆಂಬ ಮಾಹಿತಿಯಿದೆ ಎಂದು ಆ ಸಂಸದರು ಹೇಳಿಕೊಂಡಿದ್ದಾರೆ.
ಅಂತೆಯೇ ನವೆಂಬರ್ 16ರಂದು ಸಂಸದರನ್ನು ಏಳು ಗಂಟೆಗೆ ಸಭೆಗೆ ಬರುವಂತೆ ಪಕ್ಷದ ಅಧ್ಯಕ್ಷ ಅಮಿತ್ ಷಾ ಹೇಳಿದರೆ ಯಾವುದೇ ಕಾರಣ ನೀಡದೆ ಆ ಸಭೆಯನ್ನು ರದ್ದುಗೊಳಿಸಲಾಗಿತ್ತು.
ಈಗಾಗಲೇ ಪೋರ್ ಬಂದರ್ಸಂಸದ ವಿಠಲ್ ರಡದಿಯಾ ನೋಟು ಅಮಾನ್ಯ ಕ್ರಮವನ್ನು ಟೀಕಿಸಿರುವ ಹಿನ್ನೆಲೆಯಲ್ಲಿ ಇತರ ಸಂಸದರೂ ಹಾಗೆಯೇ ತಮ್ಮ ಪ್ರತಿಕ್ರಿಯೆ ನೀಡಬಹುದೆಂಬ ಭಯವೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರನ್ನು ಈ ಸಭೆಗಳನ್ನು ರದ್ದುಗೊಳಿಸಲು ಪ್ರೇರೇಪಿಸಿತೆನ್ನಲಾಗಿದೆ. ಅವರ ಈ ಭಯ ಕಾರಣವಿಲ್ಲದೇ ಇಲ್ಲ. ಚಳಿಗಾಲದ ಅಧಿವೇಶನದ ಆರಂಭದ ದಿನಗಳಲ್ಲಿ ಸಂಸತ್ತಿನಲ್ಲಿ ವಿಪಕ್ಷಗಳ ಟೀಕೆಗಳಿಗೆ ಸರಿಯಾದ ಪ್ರತ್ಯುತ್ತರ ನೀಡಲು ಅಲ್ಲಿ ಪಕ್ಷದ ಸಾಕಷ್ಟು ಸಂಸದರು ಹಾಜರಿರಲಿಲ್ಲ. ರಾಜ್ಯಸಭೆಯಲ್ಲೂ ಇದೇ ಸ್ಥಿತಿಯಿತ್ತು. ಕೊನೆಗೆ ಶುಕ್ರವಾರ ಎಲ್ಲಾ ಸಂಸದರು ಹಾಜರಿರಬೇಕೆಂದು ಪಕ್ಷ ವಿಪ್ ಜಾರಿಮಾಡಿ ಮುಜುಗರ ತಪ್ಪಿಸುವ ಪ್ರಯತ್ನ ಮಾಡಿತ್ತು.