ಬ್ಯಾಂಕುಗಳಲ್ಲಿ ಸರದಿ ಸಾಲುಗಳು ಕಿರಿದಾದರೂ ಎಟಿಎಂಗಳಿಗೆ ಜನರ ಪರದಾಟ ಮಾತ್ರ ತಪ್ಪಿಲ್ಲ
ಕೋಲ್ಕತಾ/ಮುಂಬೈ,ನ.19: ನೋಟು ನಿಷೇಧ ಜಾರಿಗೆ ಬಂದ 11 ದಿನಗಳ ಬಳಿಕ ಇಂದು ಬ್ಯಾಂಕ್ ಶಾಖೆಗಳಲ್ಲಿ ನಗದು ಲಭ್ಯತೆ ಗ್ರಾಹಕರಿಗೆ ಕೊಂಚ ನಿರಾಳತೆಯನ್ನು ನೀಡಿತ್ತು. ಆದರೆ ಎಟಿಎಂಗಳ ಮುಂದೆ ಉದ್ದನೆಯ ಸರದಿ ಸಾಲುಗಳು ಮಾತ್ರ ತಪ್ಪಿರಲಿಲ್ಲ. ಇದೇ ವೇಳೆ ನಗದು ಕೊರತೆಯಿಂದ ಉತ್ತರ ಪ್ರದೇಶದಲ್ಲಿ ಇನ್ನೂ ಮೂವರು ಸಾವನ್ನಪ್ಪಿದ್ದಾರೆ.
ಹಳೆಯ 500 ಮತ್ತು 1,000 ರೂ.ನೋಟುಗಳ ವಿನಿಮಯದ ಮೇಲೆ ಕೆಲ ನಿರ್ಬಂಧಗಳಿಂದಾಗಿ ಹಲವಾರು ಬ್ಯಾಂಕ್ ಶಾಖೆಗಳಲ್ಲಿ ಸರದಿಯ ಸಾಲುಗಳು ಕಿರಿದಾಗಿದ್ದವು. ಆದರೆ ನೋಟುಗಳ ಕೊರತೆಯಿಂದಾಗಿ ಹಲವಾರು ಎಟಿಎಂಗಳ ಹೊರಗೆ ಜನರು ಹತಾಶೆಯಿಂದ ಕಾಯುತ್ತಿದ್ದ ದೃಶ್ಯಗಳಂತೂ ಕಣ್ಣಿಗೆ ಬೀಳುತ್ತಿದ್ದವು.
ಎಲ್ಲ ಬ್ಯಾಂಕುಗಳು ಇಂದು ತಮ್ಮ ಗ್ರಾಹಕರಿಗೆ ಮಾತ್ರ ಹಳೆಯ ನೋಟುಗಳ ವಿನಿಮಯಕ್ಕೆ ನೀಡಿದ್ದವು,ಆದರೆ ಹಿರಿಯ ನಾಗರಿಕರಿಗೆ ಈ ನಿರ್ಬಂಧದಿಂದ ವಿನಾಯಿತಿಯನ್ನು ನೀಡಲಾಗಿತ್ತು. ಅವರು ಯಾವುದೇ ಬ್ಯಾಂಕಿನಲ್ಲಿ ನೋಟುಗಳನ್ನು ಬದಲಿಸಿಕೊಳ್ಳಬಹುದಾಗಿತ್ತು.
ಉತ್ತರ ಪ್ರದೇಶದ ಹರ್ದೋಲಿಯಲ್ಲಿ ಬ್ಯಾಂಕ್ ಆಫ್ ಇಂಡಿಯಾದ ಧಿಕ್ಕಾವುನಿ ಶಾಖೆಯಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದ ಕಾಮ್ತಾ ಪ್ರಸಾದ್(75) ಕುಸಿದು ಬಿದ್ದು ಮೃತಪಟ್ಟಿದ್ದರೆ,ಅತ್ತ ಅಲಿಘಡದಲ್ಲಿ ಕಳೆದ ಮೂರು ದಿನಗಳಿಂದಲೂ ಹಲವಾರು ಬ್ಯಾಂಕುಗಳನ್ನು ಎಡತಾಕಿ ಹಳೆಯ ನೋಟುಗಳ ವಿನಿಮಯಕ್ಕಾಗಿ ಪ್ರಯತ್ನಿಸಿ ವಿಫಲ ಗೊಂಡಿದ್ದ ಬಾಬುಲಾಲ್(50) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನ.26ರಂದು ಅವರ ಪುತ್ರಿಯ ಮದುವೆ ನಿಗದಿಗೊಂಡಿದ್ದ ಹಿನ್ನೆಲೆಯಲ್ಲಿ ಅವರು ಭಾರೀ ಮಾನಸಿಕ ಒತ್ತಡಕ್ಕೆ ಗುರಿಯಾಗಿದ್ದರು ಎಂದು ಅವರ ಕುಟುಂಬ ಸದಸ್ಯರು ಹೇಳಿದರು.
ಪ್ರತ್ಯೇಕ ಘಟನೆಯಲ್ಲಿ ಅಲಿಗಡದ ಜಮಾಲಪುರ ಬಡಾವಣೆಯ ನಿವಾಸಿ ಮೊಹಮ್ಮದ್ ಇದ್ರೀಸ್(45)ಹಳೆಯ ನೋಟುಗಳ ವಿನಿಮಯಕ್ಕಾಗಿ ಬ್ಯಾಂಕಿಗೆ ತೆರಳುತ್ತಿದ್ದಾಗ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬ್ಯಾಂಕ ಖಾತೆಯನ್ನು ಹೊಂದಿರದ ಅವರು ಕಳೆದ ನಾಲ್ಕು ದಿನಗಳಿಂದಲೂ ಹಳೆಯ ನೋಟುಗಳ ವಿನಿಮಯಕ್ಕಾಗಿ ಬ್ಯಾಂಕಿಗೆ ಎಡತಾಕುತ್ತಿದ್ದರು ಎನ್ನಲಾಗಿದೆ.
ಮುಂಬೈ ಮಹಾನಗರದಲ್ಲಿ ಎಟಿಎಂಗಳ ಮುಂದೆ ಉದ್ದನೆಯ ಸರದಿ ಸಾಲುಗಳು ಸಾಮಾನ್ಯವಾಗಿದ್ದವು. ಆದರೆ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಮಾತ್ರ ನೋಟು ವಿನಿಮಯಕ್ಕೆ ಅವಕಾಶ ನೀಡಿದ್ದರಿಂದ ಆ ಪ್ರಕ್ರಿಯೆ ಇಂದು ಸುಗಮವಾಗಿ ನಡೆಯಿತು.
ಅತ್ತ ಕೋಲ್ಕತಾದಲ್ಲಿ ಹೆಚ್ಚಿನ ಎಟಿಎಂಗಳು ಇಂದೂ ಕಾರ್ಯಾಚರಿಸಲಿಲ್ಲ,ಹೀಗಾಗಿ ನಗದುಹಣಕ್ಕಾಗಿ ಸಾರ್ವಜನಿಕರ ಪರದಾಟ ಮುಂದುವರಿದಿತ್ತು.