ಬ್ಯಾಂಕಿಗೆ ಹಣ ಹಾಕುವವರ ಹಿಂದೆ ಬಿದ್ದಿದೆ ಐಟಿ ಇಲಾಖೆ !

Update: 2016-11-19 16:30 GMT

ಹೊಸದಿಲ್ಲಿ,ನ.19: ಚುರುಕಿನ ಕಾರ್ಯಾಚರಣೆಗಿಳಿದಿರುವ ಆದಾಯ ತೆರಿಗೆ ಇಲಖೆಯು ನ.8ರ ನಂತರ ಹಳೆಯ 500 ಮತ್ತು 1,000 ರೂ. ನೋಟುಗಳ ಮೂಲಕ ತಮ್ಮ ಬ್ಯಾಂಕ್ ಖಾತೆಗಳಲ್ಲಿ ದೊಡ್ಡ ಮೊತ್ತಗಳನ್ನು ಜಮಾ ಮಾಡುತ್ತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಹಣದ ‘ಮೂಲ’ವನ್ನು ಕೇಳಿ ನೂರಾರು ನೋಟಿಸುಗಳನ್ನು ಜಾರಿಗೊಳಿಸಿದೆ.


ಈ ಸಂಬಂಧ ದೇಶಾದ್ಯಂತ ವಿಚಾರಣೆಯನ್ನು ಆರಂಭಿಸಿರುವ ಆದಾಯ ತೆರಿಗೆ ಅಧಿಕಾರಿಗಳು ವಿವಿಧ ನಗರಗಳು ಮತ್ತು ಪಟ್ಟಣಗಳಲ್ಲಿ ಆದಾಯ ತೆರಿಗೆ ಕಾಯ್ದೆ(ಮಾಹಿತಿಗಾಗಿ ಕರೆಯುವ ಅಧಿಕಾರ)ಯ ಕಲಂ 133(6)ರಡಿ ನೋಟಿಸುಗಳನ್ನು ಹೊರಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ತಮ್ಮ ಖಾತೆಗಳಲ್ಲಿ, ಮುಖ್ಯವಾಗಿ 2.5 ಲ.ರೂ.ಗೂ ಹೆಚ್ಚಿನ ಶಂಕಾತ್ಮಕ ನಗದು ಠೇವಣಿಗಳ ಕೆಲವು ಪ್ರಕರಣಗಳನ್ನು ಬಾಂ್ಯಕುಗಳು ವರದಿ ಮಾಡಿದ ಬಳಿಕ ಈ ನೋಟಿಸುಗಳನ್ನು ಹೊರಡಿಸಲಾಗಿದೆ ಎಂದು ಅವರು ಹೇಳಿದರು. ಇಲಾಖೆಯು ಹೊರಡಿಸುತ್ತಿರುವ ನೋಟಿಸುಗಳಲ್ಲಿ ಸಂಸ್ಥೆ ಅಥವಾ ವ್ಯಕ್ತಿ ಬ್ಯಾಂಕಿನಲ್ಲಿ ಹಳೆಯ ನೋಟುಗಳ ಮೂಲಕ ಜಮಾ ಮಾಡಿದ ಮೊತ್ತ ಮತ್ತು ದಿನಾಂಕಗಳನ್ನು ಉಲ್ಲೇಖಿಸಲಾಗುತ್ತಿದ್ದು, ಈ ಹಣದ ಮೂಲವನ್ನು ವಿವರಿಸಲು ಅಗತ್ಯ ದಾಖಲೆಗಳು,ಲೆಕ್ಕಪತ್ರಗಳು ಇತ್ಯಾದಿಗಳೊಂದಿಗೆ ಆದಾಯ ತೆರಿಗೆ ಇಲಾಖೆಯ ಕಚೇರಿಗೆ ನಿರ್ದಿಷ್ಟ ದಿನದಂದು ಹಾಜರಾಗುವಂತೆ ಸೂಚಿಸಲಾಗುತ್ತಿದೆ.


ಅಲ್ಲದೇ ಅಂತಹ ವ್ಯಕ್ತಿಗಳು ಮತ್ತು ಸಂಸ್ಥೆಗಳು ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಹಿಂದಿನ ಎರಡು ವರ್ಷಗಳ ಆದಾಯ ತೆರಿಗೆ ರಿಟರ್ನ್‌ಗಳ ಪ್ರತಿಯನ್ನು ಸಲ್ಲಿಸು ವಂತೆಯೂ ಸೂಚಿಸಲಾಗಿದೆ.


 ನೋಟು ನಿಷೇಧ ಪ್ರಕಟಣೆಯ ಬಳಿಕ ನಿಷೇಧಿತ ನೋಟುಗಳ ಅಕ್ರಮ ಬಳಕೆ ಮತ್ತು ತನ್ಮೂಲಕ ಕಪ್ಪುಹಣದ ಸೃಷ್ಟಿಯನ್ನು ತಡೆಯಲು ಆದಾಯ ತೆರಿಗೆ ಇಲಾಖೆಯು ರಿಯಲ್ ಎಸ್ಟೇಟ್ ಕುಳಗಳು, ಚಿನ್ನಬೆಳ್ಳಿ ವ್ಯಾಪಾರಿಗಳು ಮತ್ತು ಶಂಕಿತ ಹವಾಲಾ ವ್ಯಾಪಾರಿಗಳ ಮೇಲೆ ತೀವ್ರ ನಿಗಾಯಿರಿಸಿದೆ.
ಸಹಕಾರಿ ಸೊಸೈಟಿಗಳ ಮೇಲೆಯೂ ಇಲಾಖೆಯು ನಿಗಾ ಇರಿಸಿದ್ದು,ಮಂಗಳೂರಿನಲ್ಲಿ ಸಹಕಾರಿ ಬ್ಯಾಂಕಿನಲ್ಲಿ ಖಾತೆಗಳನ್ನು ಹೊಂದಿರುವ ಐದು ಸೊಸೈಟಿಗಳು ಎಂಟು ಕೋ.ರೂ.ವೌಲ್ಯದ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ವಿನಿಮಯ ಮಾಡಿರುವುದನ್ನು ಪತ್ತೆ ಹಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News