ಭಾರತದಲ್ಲಿ ಜೂನಿಯರ್ ವಿಶ್ವಕಪ್ ಆಡಲಿದೆ ಪಾಕ್ ಹಾಕಿ ತಂಡ
ಕರಾಚಿ, ನ.19: ಮುಂದಿನ ತಿಂಗಳು ಭಾರತದ ಲಕ್ನೋದಲ್ಲಿ ನಡೆಯಲಿರುವ ಎಫ್‌ಐಎಚ್ ಜೂನಿಯರ್ ವಿಶ್ವಕಪ್‌ಗೆ ತನ್ನ ದೇಶದ ಜೂನಿಯರ್ ಹಾಕಿ ತಂಡವನ್ನು ಕಳುಹಿಸಿಕೊಡಲು ಪಾಕಿಸ್ತಾನ ಸರಕಾರ ಹಸಿರು ನಿಶಾನೆ ತೋರಿದೆ.
ಪಾಕ್ ಹಾಕಿ ಫೆಡರೇಶನ್ ಭಾರತಕ್ಕೆ ತೆರಳಲು ಕೋರಿ ಸಲ್ಲಿಸಿದ್ದ ಮನವಿಯನ್ನು ಪಾಕ್ ಸರಕಾರ ಪುರಸ್ಕರಿಸಿದೆ. ಡಿ.8 ರಿಂದ 18ರ ತನಕ ನಡೆಯಲಿರುವ ಜೂನಿಯರ್ ವಿಶ್ವಕಪ್‌ನಲ್ಲಿ ಭಾಗವಹಿಸಲು ಪಾಕ್ ಸರಕಾರ ಜೂನಿಯರ್ ಹಾಕಿ ತಂಡಕ್ಕೆ ನಿರಪೇಕ್ಷಣಾ ಪತ್ರ(ಎನ್‌ಒಸಿ) ನೀಡಿದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ತಿಂಗಳು ಲಕ್ನೋದಲ್ಲಿ ಆರಂಭವಾಗಲಿರುವ ಜೂನಿಯರ್ ವಿಶ್ವಕಪ್‌ಗೆ ತನ್ನ ತಂಡವನ್ನು ಕಳುಹಿಸಿಕೊಡುವ ಮೊದಲು ಎನ್‌ಒಸಿ ಪಡೆಯುವ ಬಗ್ಗೆ ಪಿಎಚ್‌ಎಫ್ ಅಧಿಕಾರಿಗಳು ತೀವ್ರ ಆತಂಕದಲ್ಲಿದ್ದರು. ಸರಕಾರ ಹಾಕಿ ತಂಡಕ್ಕೆ ಭಾರತಕ್ಕೆ ತೆರಳಲು ಅನುಮತಿ ನೀಡಿದೆ ಎಂದು ಅಂತರ್-ಪ್ರಾಂತೀಯ ಸಮನ್ವಯ ಸಚಿವಾಲಯ ಪಿಎಚ್‌ಎಫ್‌ಗೆ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಪಿಎಚ್‌ಎಫ್ ಈಗಾಗಲೇ ಜೂನಿಯರ್ ವಿಶ್ವಕಪ್‌ಗಾಗಿ ಲಾಹೋರ್‌ನಲ್ಲಿ ಒಲಿಂಪಿಯನ್ ತಾಹಿತ್ ಝಮಾನ್ ಮೇಲಸ್ತುವಾರಿಯಲ್ಲಿ ಶಿಬಿರವನ್ನು ಆಯೋಜಿಸಿತ್ತು. ಭಾರತದಲ್ಲಿ ಪಾಕ್ ತಂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಎಲ್ಲರಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ಕಳೆದ ಕೆಲವು ವರ್ಷಗಳಿಂದ ಭಾರತದ ನೆಲದಲ್ಲಿ ನಡೆದಿದ್ದ ಹಿರಿಯರ ವಿಶ್ವಕಪ್, ಕಾಮನ್‌ವೆಲ್ತ್ ಗೇಮ್ಸ್ ಹಾಕಿ ಟೂರ್ನಮೆಂಟ ಹಾಗೂ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಿದೆ.