×
Ad

ಕಪ್ಪು ಹಣದ ಪರ್ಯಾಯ ಆರ್ಥಿಕತೆಯ ಅಪಾಯ ಕಾದಿದೆ...

Update: 2016-11-19 23:28 IST

ಒಂದು ವೇಳೆ ಕಪ್ಪು ಅರ್ಥಿಕ ವ್ಯವಸ್ಥೆಯೊಳಗೆ ತಮ್ಮ ಹಳೆಯ ಕರೆನ್ಸಿ ನೋಟುಗಳು ಸ್ವೀಕೃತವಾಗುವುದೆಂಬ ನಂಬಿಕೆಯೊಂದಿಗೆ ಜನರು ತಮ್ಮ ಹಳೆಯ ಕರೆನ್ಸಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ಮುಂದುವರಿಸಿದಲ್ಲಿ, ಅದು ಭಾರತೀಯ ವಿತ್ತೀಯ ವ್ಯವಸ್ಥೆಯ ಖಾಯಂ ಲಕ್ಷಣವಾಗಲಿದೆ.

ತಿಳಿದೋ ಅಥವಾ ತಿಳಿಯದೆಯೋ ಮೋದಿ ಸರಕಾರವು ದೇಶವನ್ನು ಸೋವಿಯತ್ ಯುಗವನ್ನು ಹೋಲುವಂತಹ ವಾತಾವರಣದೆಡೆಗೆ ಕೊಂಡೊಯ್ದಿದೆ. ಕೆಲವೇ ಕೆಲವು ಸಾವಿರ ರೂಪಾಯಿಗಳನ್ನು ಹುಡುಕಲು ಅವರು ಬ್ಯಾಂಕುಗಳು ಅಥವಾ ಎಟಿಎಂಗಳ ಮುಂದೆ ದಿನವೂ ತಾಸುಗಟ್ಟಲೆ ಸರತಿ ಸಾಲುಗಳಲ್ಲಿ ನಿಲ್ಲುತ್ತಿದ್ದಾರೆ. ಕರೆನ್ಸಿ ಅಮಾನ್ಯತೆ ಯೋಜನೆಯು, ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ಘೋರ ಅಸಾಮರ್ಥ್ಯವನ್ನು ಜಗಜ್ಜಾಹೀರುಗೊಳಿಸಿದೆ. 217 ಶತಕೋಟಿಡಾಲರ್ (ಚಲಾವಣೆಯಲ್ಲಿರುವ ಕರೆನ್ಸಿ ವೌಲ್ಯದ ಶೇ.86ರಷ್ಟು) ಕರೆನ್ಸಿಯು ವ್ಯವಸ್ಥೆಯಿಂದ ಹೊರಗಿವೆ. ಮಾರುಕಟ್ಟೆಗಳು ಭಣಗುಟ್ಟುತ್ತಿವೆ ಹಾಗೂ ಆರ್ಥಿಕ ಚಟುವಟಿಕೆಗಳು ಕನಿಷ್ಠ ಮಟ್ಟಕ್ಕೆ ಕುಸಿದಿವೆ. ಒಂದು ವೇಳೆ ಈಗ ಇರುವ ಗೊಂದಲ ಇನ್ನೂ ಸ್ವಲ್ಪ ಸಮಯ ಮುಂದುವರಿದಲ್ಲಿ, ನಿಷೇಧಿತ ಕರೆನ್ಸಿಯನ್ನು ಆಧರಿಸಿ ಪರ್ಯಾಯ ಕಪ್ಪುಹಣದ ಆರ್ಥಿಕತೆಯು ತಲೆಯೆತ್ತುವ ಅಪಾಯವಿದೆ. ಈಗ ಇರುವ ಕಪ್ಪುಹಣದ ಆರ್ಥಿಕತೆಗಿಂತ ಅತ್ಯಂತ ಗಂಭೀರವಾದ ಅಪಾಯ ಇಲ್ಲಿದೆ.

 
ಪರಿಸ್ಥಿತಿ ಸುಧಾರಣೆಯಾಗುವುದೆಂದು ಬಹುತೇಕ ಜನರು ಕಳೆದ ಕೆಲವು ದಿನಗಳಿಂದ ತಾಳ್ಮೆಯಿಂದ ಕಾಯುತ್ತಿದ್ದಾರೆ. ಆದರೆ ನೂತನ ಕರೆನ್ಸಿ ನೋಟುಗಳನ್ನು ಆಧರಿಸಿದ ಹೊಸ ಆರ್ಥವ್ಯವಸ್ಥೆಗೆ ಹಠಾತ್ ಪರಿವರ್ತನೆಯಾಗುವುದಕ್ಕೆ ನಿರೀಕ್ಷೆಗಿಂತ ದೀರ್ಘ ಸಮಯ ಬೇಕೆಂಬುದು ಈಗ ಸ್ಪಷ್ಟವಾಗಿದೆ. ವ್ಯವಸ್ಥೆಯು ಸಹಜಸ್ಥಿತಿಗೆ ಮರಳಲು ಕನಿಷ್ಠ ಎರಡು ವಾರಗಳು ಬೇಕಾಗಬಹುದೆಂಬುದನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಒಪ್ಪಿಕೊಂಡಿದ್ದಾರೆ. ಈಗಾಗಲೇ ಹಲವಾರು ಸಣ್ಣ ಪುಟ್ಟ ಉದ್ಯಮಸಂಸ್ಥೆಗಳು 500 ರೂ ಹಾಗೂ 1 ಸಾವಿರ ರೂ.ಗಳ ಕರೆನ್ಸಿ ನೋಟುಗಳನ್ನು ಸ್ವೀಕರಿಸಲು ಆರಂಭಿಸಿವೆ. ಈ ಪ್ರವೃತ್ತಿ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ. ಸದ್ಯಕ್ಕೆ 2.50 ಲಕ್ಷ ರೂ.ವರೆಗೆ ಸಣ್ಣ ಉಳಿತಾಯ ಖಾತೆಗಳಲ್ಲಿ ಹಳೆಯ ನೋಟುಗಳನ್ನು ಠೇವಣಿಯಿಡಬಹುದೆಂಬ ಭರವಸೆಯನ್ನು ಇದು ಆಧರಿಸಿದೆ. ತಮ್ಮ ಚಾಲ್ತಿ ಖಾತೆಗಳ ಹೊರತಾಗಿ ಬಹುತೇಕ ಸಣ್ಣ ಉದ್ಯಮ ಸಂಸ್ಥೆಗಳನ್ನು ನಡೆಸುವವರು ತಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯನ ಹೆಸರಿನಲ್ಲಿಯೂ ಕೆಲವು ಉಳಿತಾಯ ಖಾತೆಗಳನ್ನು ಹೊಂದಿರುತ್ತಾರೆ. ಹೀಗಾಗಿ ಹಳೆಯ ನೋಟುಗಳಿಂದಲೇ ಕೆಲವು ದಿನಗಳವರೆಗೆ ತಮ್ಮ ಉದ್ಯಮ ವಹಿವಾಟುಗಳನ್ನು ಅವರು ಕೆಲವು ದಿನಗಳವರೆಗೆ ನಿಭಾಯಿಸಬಹುದಾಗಿದೆ. ಕೆಲವು ಮಂದಿ ಸಣ್ಣ ಅಂಗಡಿಗಳ ಮಾಲಕರು ಮುಂದಿನ ಕೆಲವು ವಾರಗಳವರೆಗೆ ತಮ್ಮ ಅಂಗಡಿಗಳನ್ನು ಮುಚ್ಚುವ ಬದಲಿಗೆ, ಇಂತಹ ಹತಾಶ ಕ್ರಮಗಳಿಗೆ ಮೊರೆಹೋಗುತ್ತಿದ್ದಾರೆ. ಸಮಂಜಸವಾದ ಕರೆನ್ಸಿಯ ಅನುಪಸ್ಥಿತಿಯಲ್ಲಿ, ಈ ಅನೌಪಚಾರಿಕ ಕ್ರಮಗಳು ಸಣ್ಣ ಉದ್ಯಮಿಗಳಿಗೆ ಹಾಗೂ ಇಲೆಕ್ಟ್ರಾನಿಕ್ ಹಣ ವರ್ಗಾವಣೆ ವ್ಯವಸ್ಥೆಯ ಸೌಲಭ್ಯವಿಲ್ಲದ ಜನಸಾಮಾನ್ಯರಿಗೆ ತುಸು ನಿಟ್ಟುಸಿರೆಳೆಯುವಂತೆ ಮಾಡಿವೆ.
  ಆದಾಗ್ಯೂ, ಒಂದು ವೇಳೆ ಹಾಲಿ ಪರಿಸ್ಥಿತಿಯು ದೀರ್ಘ ಸಮಯದವರೆಗೆ ಮುಂದುವರಿದಲ್ಲಿ, ಅಕ್ರಮವಾದ ಟೆಂಡರ್‌ಗಳು (ಪ್ರಾಯಶಃ ಕಡಿಮೆ ವೌಲ್ಯದ) ಕಪ್ಪು ಆರ್ಥಿಕತೆಯೊಳಗೆ ಖಾಯಂ ಸ್ವೀಕಾರಾರ್ಹತೆಯನ್ನು ಪಡೆಯಲಿದೆ. ವಿನಿಮಯದ ಮಾಧ್ಯಮ ಹಾಗೂ ವೌಲ್ಯ ಸಂಗ್ರಹ ಇವೆರಡು ಹಣದ ಎರಡು ಪ್ರಮುಖ ಕಾರ್ಯನಿರ್ವಹಣೆಗಳಾಗಿವೆ. ಒಂದು ವೇಳೆ ಕಪ್ಪು ಅರ್ಥಿಕ ವ್ಯವಸ್ಥೆಯೊಳಗೆ ತಮ್ಮ ಹಳೆಯ ಕರೆನ್ಸಿ ನೋಟುಗಳು ಸ್ವೀಕೃತವಾಗುವುದೆಂಬ ನಂಬಿಕೆಯೊಂದಿಗೆ ಜನರು ತಮ್ಮ ಹಳೆಯ ಕರೆನ್ಸಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ಮುಂದುವರಿಸಿದಲ್ಲಿ, ಅದು ಭಾರತೀಯ ವಿತ್ತೀಯ ವ್ಯವಸ್ಥೆಯ ಖಾಯಂ ಲಕ್ಷಣವಾಗಲಿದೆ. ಈ ನೋಟುಗಳು ಅಕ್ರಮ ಹಣಕಾಸು ವ್ಯವಹಾರಗಳಲ್ಲಿ ಬಳಕೆಯಾಗಬಹುದು ಹಾಗೂ ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅದು ಎಂದೂ ಕಾಣಿಸಿಕೊಳ್ಳುವುದಿಲ್ಲ. 2017ರ ಮಾರ್ಚ್ ವೇಳೆಗೆ ಠೇವಣಿಯಿಡಲು ಸಾಧ್ಯವಾಗದ ಅಥವಾ ಹೊಸ ಕರೆನ್ಸಿಯೊಂದಿಗೆ ಬದಲಾಯಿಸಿಕೊಳ್ಳಲು ಸಾಧ್ಯವಾಗದ ಹಳೆಯ ನೋಟುಗಳು ಜನರ ಕೈಯಲ್ಲಿ ಗಣನೀಯ ಪ್ರಮಾಣದಲ್ಲಿರುವ ನಿರೀಕ್ಷೆಯಿದೆ. ಈ ರೀತಿಯ ಗೊಂದಲದ ಸನ್ನಿವೇಶವು ಮುಂದಿನ ಕೆಲವು ವಾರಗಳಲ್ಲಿ ನಿಷೇಧಿತ ಕರೆನ್ಸಿಯನ್ನು ಆಧರಿಸಿದ ಕಪ್ಪು ಆರ್ಥಿಕತೆಯು ತಲೆಯೆತ್ತಲು ಅವಕಾಶ ನೀಡಿದೆ. ಹೀಗಾಗಿ ಸಾಧ್ಯವಿದ್ದಷ್ಟು ಬೇಗನೆ ನೂತನ ಕರೆನ್ಸಿ ನೋಟುಗಳ ಪರಿವರ್ತನೆಯು ಪೂರ್ಣಗೊಳ್ಳುವುದು ಅತ್ಯಂತ ಮುಖ್ಯವಾಗಿದೆ.
  ಒಟ್ಟಾರೆಯಾಗಿ, ಕರೆನ್ಸಿ ಅಮಾನ್ಯತೆಯ ಈ ಆರ್ಥಿಕ ಸೌಲಭ್ಯಗಳು ಯಾವತ್ತೂ ಪ್ರಶ್ನಾತೀತವಾಗಿವೆ. ತಾನು ಕಪ್ಪು ಹಣದ ಪಿಡುಗನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇನೆ ಹಾಗೂ ಈ ನಿಟ್ಟಿನಲ್ಲಿ ತಾನು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬಲ್ಲೆನೆಂಬುದನ್ನು ತೋರಿಸಲು ಕೇಂದ್ರ ಸರಕಾರ ನಡೆಸಿದ ರಾಜಕೀಯ ತಂತ್ರಗಾರಿಕೆ ಇದೆಂದೂ ಹೇಳಲಾಗುತ್ತಿದೆ. ದೊಡ್ಡ ವೌಲ್ಯದ ಹಳೆಯ ಕರೆನ್ಸಿ ನೋಟುಗಳನ್ನು ಅಮಾನ್ಯ ಮಾಡುವ ಕೇಂದ್ರ ಸರಕಾರದ ನಿರ್ಧಾರದ ಕುರಿತು ಹಠಾತ್ತನೆ ಸೃಷ್ಟಿಯಾಗಿದ್ದ ಸುಖದ ಭಾವನೆ ಈಗ ಮಾಯವಾಗಿದೆ. ಬೀದಿಗಳಲ್ಲಿ ಜನರಿಂದ ವ್ಯಕ್ತವಾಗುತ್ತಿರುವ ಆಕ್ರೋಶವು ಆಡಳಿತ ಪಕ್ಷಕ್ಕಿಂತ ಪ್ರತಿಪಕ್ಷಗಳಿಗೆ ಹೆಚ್ಚು ಪ್ರಯೋಜನವನ್ನು ನೀಡಲಿದೆ. ಹಳೆಯ ಕರೆನ್ಸಿಯಿಂದ ಹೊಸ ಕರೆನ್ಸಿಗೆ ಬದಲಾವಣೆಯನ್ನು ಮಾಡುವ ಪ್ರಕ್ರಿಯೆಯನ್ನು ಮಾಡಲು ತನ್ನ ಎಲ್ಲಾ ಆಡಳಿತಾತ್ಮಕ ಸಾಮರ್ಥ್ಯವನ್ನು ಚುರುಕುಗೊಳಿಸುವುದೇ ಸರಕಾರದ ಮುಂದಿರುವ ಏಕೈಕ ಆಯ್ಕೆಯಾಗಿದೆ. ನಿಧಾನಗತಿಯ ಹಾಗೂ ಗೊಂದಲಕರವಾದ ಪರಿವರ್ತನೆಯು ಭಾರತೀಯ ಆರ್ಥಿಕತೆಗೆ ಗಂಭೀರವಾದ ಹಾನಿಯನ್ನುಂಟು ಮಾಡಲಿದೆ. ಒಂದು ವೇಳೆ ಕರೆನ್ಸಿ ಅಮಾನ್ಯತೆಯನ್ನು ಹಿಂಪಡೆದುಕೊಂಡಲ್ಲಿ ಸರಕಾರವು ಅದಕ್ಕಾಗಿ ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ದೊಡ್ಡ ಬೆಲೆಯನ್ನೇ ತೆರಬೇಕಾದೀತು.

(ಲೇಖಕ ಗುಲ್ಶನ್ ಸಚ್‌ದೇವ್ ಅವರು ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿವಿಯ ಸ್ಕೂಲ್ ಆಫ್ ಇಂಟರ್‌ನ್ಯಾಶನಲ್ ಸ್ಟಡೀಸ್‌ನ ಪ್ರೊಫೆಸರ್ ಆಗಿದ್ದಾರೆ.)

Writer - ಗುಲ್ಶನ್ ಸಚ್‌ದೇವ

contributor

Editor - ಗುಲ್ಶನ್ ಸಚ್‌ದೇವ

contributor

Similar News