×
Ad

ಹಳೆ ನೋಟು ರದ್ದು: ಗುಜರಾತ್‌ನಲ್ಲಿ ರೈತರಿಂದ ಭಾರೀ ಪ್ರತಿಭಟನೆ

Update: 2016-11-20 11:30 IST

ಸೂರತ್, ನ. 20: ಕರೆನ್ಸಿ ಬದಲಾಯಿಸುವ ಅವಕಾಶವನ್ನು ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿಗೆ ನೀಡದಿರುವುದನ್ನು ಪ್ರತಿಭಟಿಸಿ ದಕ್ಷಿಣ ಗುಜರಾತ್‌ನ ಕ್ಷೀರ ರೈತರು ಸೂರತ್‌ನಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದಾರೆಂದು ವರದಿಯಾಗಿದೆ. ಸಹಕಾರಿ ಬ್ಯಾಂಕುಗಳು ನೋಟು ಬದಲಾಯಿಸಿ ನೀಡುವಂತಿಲ್ಲ ಎಂದು ರಿಸರ್ವ್ ಬ್ಯಾಂಕ್ ಸರ್ಕ್ಯುಲರ್ ಹೊರಡಿಸಿತ್ತು.

ಸೂರತ್, ತಾಪಿ, ನವಸಾರಿ, ವಲ್ಸಾದ್ ಜಿಲ್ಲೆಗಳ ರೈತರು ಭತ್ತ, ಬೇಳೆ ಕಾಳುಗಳು, ಕಬ್ಬು, ಬಾಳೆಹಣ್ಣು, ತರಕಾರಿ, ಹಾಲು ಇತ್ಯಾದಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ನಡೆಸಿದ್ದಾರೆ. ಐವತ್ತು ಟ್ರಕ್‌ಗಳು,150 ಟ್ರಾಕ್ಟರ್‌ಗಳು, 100 ಟ್ರಾಲಿಗಳಲ್ಲಿ ಈ ವಸ್ತುಗಳನ್ನು ರೈತರು ಜಿಲ್ಲಾಧಿಕಾರಿ ಕಚೇರಿಗೆ ತಲುಪಿಸಿದ್ದಾರೆ. ನಂತರ ರೈತರು ರಸ್ತೆಗೆ ಹಾಲು ಸುರಿದು ಪ್ರತಿಭಟನೆ ನಡೆಸಿದ್ದಾರೆ. ಸಹಕಾರಿ ಸಂಘಗಳು ನಮಗೆ 100ರೂ. ಮತ್ತು ಅದಕ್ಕಿಂತ ಕಡಿಮೆ ಮುಖಬೆಲೆಯ ನೋಟುಗಳನ್ನುನೀಡುತ್ತಿಲ್ಲ ಎಂದು ರೈತರು ಆಪಾದಿಸಿದ್ದಾರೆ.

                                     

500,1000 ರೂಪಾಯಿ ನೋಟುಗಳನ್ನು ರದ್ದುಪಡಿಸಿದ ಬಳಿಕ ರೈತರು ಇದೇ ಮೊದಲ ಬಾರಿ ಗುಜರಾತ್‌ನಲ್ಲಿ ರಾಜಕೀಯೇತರ ಸಂಘಟನೆಯ ಆಶ್ರಯದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಪ್ರತಿಭಟನೆಯ ಗುರುತು ಆಗಿ ತಮ್ಮ ಉತ್ಪನ್ನಗಳೊಂದಿಗೆ ಬಂದಿದ್ದರು. ಸಹಕಾರಿ ಬ್ಯಾಂಕ್‌ಗಳು ತಮಗೆ ನೋಟುಗಳನ್ನು ಬದಲಾಯಿಸಿಕೊಡುತ್ತಿಲ್ಲ. ಅವುಗಳಲ್ಲಿಯೂ ಬದಲಾಯಿಸುವ ಅವಕಾಶ ಇರಬೇಕು ಎಂದು ಜಿಲ್ಲಾಧಿಕಾರಿಗಳಿಗೆ ರೈತರು ಮನವಿ ಸಲ್ಲಿಸಿದ್ದಾರೆ. ಸೂರತ್‌ನ ಎರಡು ಲಕ್ಷಕ್ಕೂ ಅಧಿಕ ರೈತರು ಸಹಕಾರಿ ಬ್ಯಾಂಕ್‌ಗಳಲ್ಲಿ ಖಾತೆಯನ್ನು ಹೊಂದಿದ್ದಾರೆ. ಸರಕಾರದ ಹಳೆ ನೋಟು ರದ್ದು ಕ್ರಮದಿಂದಾಗಿ ಅವರಿಗೆ ಬೀಜಗಳು, ಗೊಬ್ಬರ ಇತ್ಯಾದಿ ಖರೀದಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಲು ರಸ್ತೆಗೆ ಸುರಿಯುವ ಪ್ರತಿಭಟನೆಯಲ್ಲಿ ಕಾಂಗ್ರೆಸ್ಸಿಗರು ಕೂಡಾ ಪಾಲ್ಗೊಂಡಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News