×
Ad

ಕ್ರಿಸ್ ಮಾರ್ಟಿನ್‌ರಿಂದ ತ್ರಿವರ್ಣ ಧ್ವಜಕ್ಕೆ ಅಪಮಾನ: ಆರೋಪ

Update: 2016-11-20 19:33 IST

ಮುಂಬೈ, ನ.20: ಬ್ರಿಟಿಷ್ ರಾಕ್‌ಬ್ಯಾಂಡ್ ‘ಕೋಲ್ಡ್ ಪ್ಲೇ’ಯ ಪ್ರಮುಖ ಗಾಯಕ ಕ್ರಿಸ್ ಮಾರ್ಟಿನ್ ಮುಂಬೈಯಲ್ಲಿ ನಡೆದ ಸಂಗೀತಗೋಷ್ಠಿಯೊಂದರಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಅವಮಾನಿಸಿದ್ದಾರೆ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ) ಆರೋಪಿಸಿದೆ.

  ಸಂಗೀತಗೋಷ್ಠಿಯ ವೀಡಿಯೋದ ದೃಶ್ಯವೊಂದರಲ್ಲಿ ಮಾರ್ಟಿನ್ ತಾನು ಧರಿಸಿದ ಪ್ಯಾಂಟ್‌ನ ಹಿಂಭಾಗಕ್ಕೆ ತ್ರಿವರ್ಣ ಧ್ವಜವನ್ನು ಸಿಕ್ಕಿಸಿಕೊಂಡಿದ್ದಾರೆ. ಇದು ದೇಶದ ಧ್ವಜಕ್ಕೆ ಮಾಡಿರುವ ಅಪಮಾನವಾಗಿದೆ ಎಂದು ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ದೂರಿದ್ದಾರೆ. ಈ ದೃಶ್ಯದ ವೀಡಿಯೊ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ದೇಶದ ಜನರ ಭಾವನೆಗಳಿಗೆ ಘಾಸಿ ಉಂಟುಮಾಡಿದ ಈ ಪ್ರಮಾದಕ್ಕಾಗಿ ಗಾಯಕ ಮಾರ್ಟಿನ್ ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿಜೆಪಿ ಮತ್ತು ಶಿವಸೇನೆಯ ಮುಖಂಡರು ನಿಶ್ಯರ್ಥ ಕ್ಷಮೆ ಯಾಚಿಸಬೇಕು ಎಂದವರು ಆಗ್ರಹಿಸಿದ್ದಾರೆ. ಗ್ಲೋಬಲ್ ಸಿಟಿಜನ್ ಫೆಸ್ಟಿವಲ್ ಇಂಡಿಯಾ ಎಂಬ ಹೆಸರಿನಲ್ಲಿ ನಡೆದ ಈ ಸಂಗೀತಗೋಷ್ಠಿಯಲ್ಲಿ ಮಾರ್ಟಿನ್ ಮತ್ತವರ ತಂಡ ವಂದೇ ಮಾತರಂ ಹಾಡಿನೊಂದಿಗೆ ತಮ್ಮ ಸಂಗೀತಗೋಷ್ಠಿ ಕೊನೆಗೊಳಿಸಿತು. ಅಮಿತಾಬ್ ಬಚ್ಚನ್, ಅರ್ಜುನ್ ರಾಂಪಾಲ್, ಕತ್ರೀನಾ ಕೈಫ್, ಸೋನಾಕ್ಷಿ ಸಿನ್ಹಾ ಸೇರಿದಂತೆ ಬಾಲಿವುಡ್‌ನ ಹಲವಾರು ಖ್ಯಾತನಾಮರು ಮತ್ತು ಕೆಲವು ಅಂತಾರಾಷ್ಟ್ರೀಯ ಕಲಾವಿದರು ವೇದಿಕೆಯಲ್ಲಿದ್ದರು. ಪ್ರಧಾನಿ ನರೇಂದ್ರ ಮೋದಿ ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರೆಂದು ತಿಳಿಸಲಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಅವರು ವೀಡಿಯೋ ಮೂಲಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದನ್ನು ನೇರ ಪ್ರಸಾರ ಮಾಡಲಾಯಿತು. ಕ್ರಿ.ಶ.2030ರೊಳಗೆ ದೇಶದಲ್ಲಿ ಬಡತವನ್ನು ನಿವಾರಿಸುವ ಗುರಿಯೊಂದಿಗೆ 2012ರಲ್ಲಿ ಈ ಅಭಿಯಾನ ಆರಂಭವಾಗಿತ್ತು. ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಮುಂದಿನ ವರ್ಷ ನಡೆಯಲಿರುವ ಬೃಹನ್ಮುಂಬಯಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಎನ್‌ಸಿಪಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News