ಪಟಾಕಿ ಉತ್ಪಾದನೆಗೆ ಮಾರ್ಗದರ್ಶಿ ಸೂತ್ರ

Update: 2016-11-20 15:58 GMT

ಹೊಸದಿಲ್ಲಿ, ನ.20: ವಾಯು ಮಾಲಿನ್ಯ ಸಮಸ್ಯೆಗೆ ಪ್ರಮುಖ ಕಾರಣವಾಗಿರುವ ಪಟಾಕಿಯ ಉತ್ಪಾದನೆ, ಮಾರಾಟ ಮತ್ತು ಪಟಾಕಿ ಸಿಡಿಸುವ ಬಗ್ಗೆ ಮಾರ್ಗದರ್ಶಿ ಪತ್ರವೊಂದನ್ನು ಪ್ರಕಟಿಸುವಂತೆ ದಿಲ್ಲಿ ಸೇರಿದಂತೆ ಎಲ್ಲಾ ರಾಜ್ಯಗಳಿಗೆ ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್‌ಜಿಟಿ) ತಿಳಿಸಿದೆ.
  ಪಟಾಕಿಗಳನ್ನು ಸಿಡಿಸುವ ವೇಳೆ ಅತ್ಯಂತ ಕಡಿಮೆ ಹೊಗೆ ಹೊರಸೂಸಬೇಕು ಮತ್ತು ಶಬ್ದವೂ ಹೆಚ್ಚಿರಬಾರದು ಎಂಬ ಅಂಶಕ್ಕೆ ಮಾರ್ಗದರ್ಶಿ ಪ್ರಕಟಣೆಯ ಸಂದರ್ಭ ಒತ್ತು ನೀಡುವಂತೆ ಸೂಚಿಸಲಾಗಿದೆ.
ದಿಲ್ಲಿಯ ಮೂವರು ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಹಿನ್ನೆಲೆಯಲ್ಲಿ ಈ ನಿರ್ದೇಶನ ನೀಡಲಾಗಿದೆ. ವಾಯುಮಾಲಿನ್ಯದ ಕಾರಣ ಅತ್ಯಂತ ಕನಿಷ್ಠ ಗುಣಮಟ್ಟದ ಗಾಳಿಯನ್ನು ಉಸಿರಾಡುವ ಪರಿಸ್ಥಿತಿಯಿದ್ದು ಇದರಿಂದ ದೇಶದಲ್ಲಿ ವರ್ಷಂಪ್ರತಿ 6.2 ಲಕ್ಷದಷ್ಟು ಜನ ಸಾಯುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
    ಪಟಾಕಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿಯಾಗಿ ಸಿಡಿಸುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಸಂಬಂಧಪಟ್ಟ ಸಂಘ ಸಂಸ್ಥೆಗಳು ಸಾಮಾಜಿಕ ಅರಿವು ಮೂಡಿಸುವ ಅಗತ್ಯವಿದೆ. ವಿಶೇಷವಾಗಿ ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ ಎಂದು ಹಸಿರುಪೀಠ ಪ್ರಾಧಿಕಾರದ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತರ್ ಕುಮಾರ್ ನೇತೃತ್ವದ ಪೀಠವೊಂದು ತಿಳಿಸಿದೆ.
    ಹಸಿರು ಮಾನದಂಡವನ್ನು ಅನುಸರಿಸದ ಪಟಾಕಿಗಳನ್ನು ನಿರ್ಬಂಧಿಸಬೇಕು ಮತ್ತು ಪಟಾಕಿ ಸಿಡಿಸುವ ಸಮಯವನ್ನು ರಾತ್ರಿ 7ರಿಂದ 9 ಗಂಟೆಯವರೆಗೆ ಮಿತಿಗೊಳಿಸಬೇಕು ಎಂದು ಕೋರಿ ದಿಯಾ ಕಪೂರ್, ಶೆಯೆಲ್ ಟ್ರೆಹಾನ್ ಮತ್ತು ಮಂಜಿರಾ ದಾಸ್‌ಗುಪ್ತಾ ಎಂಬವರು ಹಸಿರುಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಕಡಿಮೆ ಬೆಲೆಯ ಚೀನಾ ನಿರ್ಮಿತ ಪಟಾಕಿಗಳು ಹೆಚ್ಚು ಹೊಗೆ ಕಾರಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದರಿಂದ ಇವುಗಳ ಮಾರಾಟವನ್ನು ನಿಷೇಧಿಸಬೇಕು ್ತ. ಧಾನ್ಯದ ತ್ಯಾಜ್ಯವನ್ನು ಹೊತ್ತಿಸುವುದು, ದೂಳು ಮತ್ತು ವಾಹನಳಿಂದ ಹೊರಬರುವ ಹೊಗೆಯ ನಿಯಂತ್ರಣದ ಬಗ್ಗೆ ವಿವರವಾದ ನಿರ್ದೇಶನವನ್ನು ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News