ಚೆನ್ನೈ ಓಪನ್‌ಗೆ ಸಿಲಿಕ್ ವಾಪಸ್
ಚೆನ್ನೈ, ನ.20: ವಿಶ್ವದ ನಂ.6ನೆ ಆಟಗಾರ ಮರಿನ್ ಸಿಲಿಕ್ ಮುಂಬರುವ ಚೆನ್ನೈ ಓಪನ್‌ನಲ್ಲಿ ಭಾಗವಹಿಸಲಿದ್ದಾರೆ.
2014ರ ಅಮೆರಿಕನ್ ಓಪನ್ ಚಾಂಪಿಯನ್ ಸಿಲಿಕ್ ಭಾರತದ ಪ್ರಮುಖ ಎಟಿಪಿ ಟೂರ್ನಮೆಂಟ್‌ನಲ್ಲಿ ಭಾಗವಹಿಸುವುದಾಗಿ ದೃಢಪಡಿಸಿದ್ದಾರೆ. ಚೆನ್ನೈ ಓಪನ್ ಜ.2 ರಿಂದ ಆರಂಭವಾಗಲಿದೆ.
‘‘ವಿಶ್ವದ ನಂ.6 ಆಟಗಾರನಾಗಿ ಭಾರತಕ್ಕೆ ವಾಪಸಾಗಿ ಚೆನ್ನೈ ಅಭಿಮಾನಿಗಳ ಮುಂದೆ ಆಡಲು ತುಂಬಾ ಸಂತೋಷವಾಗುತ್ತಿದೆ. ಈ ವರ್ಷ ಅಗ್ರ-5 ಹಾಗೂ ಅಗ್ರ-3ನೆ ಸ್ಥಾನಕ್ಕೆ ಲಗ್ಗೆ ಇಡುವ ವಿಶ್ವಾಸ ನನಗಿದೆ. ಚೆನ್ನೈ ನನ್ನ ಪಾಲಿನ ಅದೃಷ್ಟದ ಮೈದಾನ. ಆ ಟೂರ್ನಿಯು ನನಗೆ ಗುರಿ ಸಾಧಿಸಲು ನೆರವಾಗಲಿದೆ. 2017ರ ಋತುವನ್ನು ಆರಂಭಿಸಲು ಚೆನ್ನೈ ಓಪನ್ ಉತ್ತಮ ವೇದಿಕೆ’’ಎಂದು ಸಿಲಿಕ್ ಹೇಳಿದ್ದಾರೆ.
28ರ ಹರೆಯದ ಸ್ಟಾರ್ ಆಟಗಾರ ಸಿಲಿಕ್ 2008ರಲ್ಲಿ ಚೆನ್ನೈ ಓಪನ್‌ಗೆ ಪಾದಾರ್ಪಣೆಗೈದಿದ್ದರು. 2009 ಹಾಗೂ 2010ರಲ್ಲಿ ಚೆನ್ನೈ ಓಪನ್ ಪ್ರಶಸ್ತಿಯನ್ನು ಜಯಿಸಿದ್ದರು. ಈ ವರ್ಷ ಭರ್ಜರಿ ಫಾರ್ಮ್‌ನಲ್ಲಿರುವ ಸಿಲಿಕ್ ಆಗಸ್ಟ್‌ನಲ್ಲಿ ಸಿನ್ಸಿನಾಟಿ ಮಾಸ್ಟರ್ಸ್ ಟ್ರೋಫಿಯನ್ನು ಜಯಿಸಿದ್ದರು. ಅಕ್ಟೋಬರ್‌ನಲ್ಲಿ ಸ್ವಿಸ್ ಇಂಡೋರ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಸಿಲಿಕ್ ಅವರು ಹಾಲಿ ವಿಶ್ವದ ನಂ.1 ಆಟಗಾರ ಆ್ಯಂಡಿ ಮರ್ರೆ, ಸೆರ್ಬಿಯ ಸೂಪರ್‌ಸ್ಟಾರ್ ನೊವಾಕ್ ಜೊಕೊವಿಕ್ ಹಾಗೂ ಜಪಾನ್‌ನ ಕೀ ನಿಶಿಕೊರಿ ಅವರನ್ನು ಮಣಿಸಿದ್ದಾರೆ.