×
Ad

ನೋಟು ರದ್ದತಿ: ರಾಜ್ಯಗಳ ಕಳವಳ

Update: 2016-11-20 23:46 IST

ಹೊಸದಿಲ್ಲಿ, ನ.20: ರೂ.500 ಹಾಗೂ 1000 ಮುಖಬೆಲೆಯ ನೋಟುಗಳ ರದ್ದತಿ ಹಾಗೂ ಅದರಿಂದ ರಾಜ್ಯಗಳ ಬೊಕ್ಕಸಗಳ ಮೇಲೆ ಆಗಿರುವ ಪರಿಣಾಮದ ಕುರಿತು ಪಶ್ಚಿಮಬಂಗಾಳ, ಉತ್ತರಪ್ರದೇಶ, ತಮಿಳುನಾಡು ಸಹಿತ ಹಲವು ರಾಜ್ಯಗಳು ಇಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರ ಮುಂದೆ ಪ್ರಸ್ತಾಪಿಸಿವೆ.

 ಜಿಎಸ್‌ಟಿ ಕಾಯ್ದೆಯನ್ವಯ ತೆರಿಗೆದಾರರ ನ್ಯಾಯಾಂಗ ವ್ಯಾಪ್ತಿಯ ಕುರಿತಾದ ಬಿಕ್ಕಟ್ಟನ್ನು ಬಗೆಹರಿಸಲು ಅನೌಪಚಾರಿಕ ಸಭೆಯೊಂದನ್ನು ಜೇಟ್ಲಿ ಕರೆದಿದ್ದರು. ಅದಕ್ಕೆ ಮೊದಲು ಮಾತನಾಡಿದ ಪಶ್ಚಿಮಬಂಗಾಳದ ವಿತ್ತ ಸಚಿವ ಅಮಿತ್ ಮಿತ್ರ, ಹಳೆಯ ನೋಟುಗಳ ನಿಷೇಧದಿಂದ ಕೈಗಾರಿಕಾ ಚಟುವಟಿಕೆಗಳಿಗೆ ಧಕ್ಕೆಯಾಗಬಹುದು ಹಾಗೂ ತೆರಿಗೆ ಸಂಗ್ರಹ ಕಡಿಮೆಯಾಗಬಹುದು. ಇದು ಆರ್ಥಿಕ ಹಿನ್ನಡೆಗೆ ಕಾರಣವಾಗಬಹುದು ಎಂದರು.

ಇದಕ್ಕೆ ತಮಿಳುನಾಡು ಸಹ ದನಿಗೂಡಿಸಿತು. ಕಾನ್ಪುರ ಹಾಗೂ ಮೊರಾದಾಬಾದ್‌ಗಳಲ್ಲಿ ಕಾರ್ಖಾನೆಗಳು ಕಾರ್ಯಾಚರಣೆ ನಿಲ್ಲಿಸಿವೆಯೆಂದು ಉತ್ತರಪ್ರದೇಶ ಹೇಳಿತು.

‘ಕಂದಾಯ ಸಂಗ್ರಹ ಗಮನಾರ್ಹವಾಗಿ ಕುಸಿದಿದೆ’ ಎಂದು ಹಲವು ರಾಜ್ಯಗಳು ಅನೌಪಚಾರಿಕವಾಗಿ ವರದಿ ಮಾಡಿವೆಯೆಂದು ಕೇರಳದ ಅರ್ಥ ಸಚಿವ ಥೋಮಸ್ ಇಸಾಕ್ ತಿಳಿಸಿದರು.

ಶೇ.86ರಷ್ಟು ಹಣ ಮಾಯವಾದರೆ, ಅದರಿಂದ ಜನರಿಗೆ ಸಮಸ್ಯೆಯಾಗುತ್ತದೆ. ಹೂಡಿಕೆಯ ಭಾವನೆಗಳಿಗೆ ಪರೋಕ್ಷವಾಗಿ ಪರಿಣಾಮ ಉಂಟಾಗಿದೆಯೆಂದು ಇಸಾಕ್ ಪತ್ರಕರ್ತರೊಡನೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News