‘ಭಾಷೆ ನಾಶವಾದರೆ ಸಂಸ್ಕೃತಿ ನಾಶವಾದಂತೆ’

Update: 2016-11-20 18:42 GMT

ಬೆಳ್ತಂಗಡಿ, ನ.20: ಒಂದು ಭಾಷೆ ನಾಶವಾದರೆ ಅಲ್ಲಿನ ಸಂಸ್ಕೃತಿಯೂ ನಾಶವಾದಂತೆ. ನಮ್ಮ ಭಾಷೆ, ಸಂಸ್ಕೃತಿ ನಾಶವಾದರೆ ಅದನ್ನು ಮತ್ತೆ ಸಂಪಾದನೆ ಮಾಡಲು ಅಸಾಧ್ಯ ಎಂದು ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಕೊಯ್ಯೂರು ಸರಕಾರಿ ಪ್ರೌಢಶಾಲಾ ವಠಾರದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ಸರಕಾರಿ ಪ್ರೌಢಶಾಲೆ ಕೊಯ್ಯೂರು ಇದರ ಆಶ್ರಯದಲ್ಲಿ ನಡೆದ ‘ಕೊಯ್ಯೂರುಡು ತುಳು ಜಾತ್ರೆ, ಬೋಳ್ತೇರ್ ತುಳು ಮಿನದನ-2016’ ಕಾರ್ಯಕ್ರಮದಲ್ಲಿ ಅವರು ಆಶಯ ಭಾಷಣ ಮಾಡಿದರು.

 ಯಾವುದೇ ಭಾಷೆಯಾದರೂ ಅದು ಒಬ್ಬರಿಗೊಬ್ಬರು ಸಂವಹನ ಮಾಡಲು ಸಹಕಾರಿ. ವಿಶ್ವದಲ್ಲಿ 6,500 ಭಾಷೆಗಳಲಿದ್ದು, ಭಾರತದಲ್ಲೇ 1,652 ಭಾಷೆಗಳಿವೆ. ಭಾಷೆ ಬೆಳೆಯಲು ಆ ಪ್ರದೇಶದ ಧಾರ್ಮಿಕ ಪದ್ಧತಿ, ಕೃಷಿ ಚಟುವಟಿಕೆಗಳು ಕಾರಣವಾಗುತ್ತದೆ. ತುಳು ಭಾಷೆ ನಮ್ಮಲ್ಲಿನ ಸಂಸ್ಕೃತಿಯ ಪ್ರತೀಕವಾಗಿದ್ದು, ತುಳು ಭಾಷೆ ನಾಶವಾಗುತ್ತಿರುವ ಈ ಸಂದರ್ಭ ತುಳು ಸಮ್ಮೇಳನಗಳ ಮೂಲಕ ನಮಗೆ ಎಚ್ಚರಿಕೆಯ ಗಂಟೆಯಾಗಿದ್ದು, ನಮ್ಮ ಜವಾಬ್ದಾರಿಯನ್ನು ಮನವರಿಕೆ ಮಾಡುವ ಕೆಲಸವಾಗುತ್ತಿದೆ ಎಂದರು.

  ತುಳು ಭಾಷೆಯನ್ನು 8ನೆ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನಗಳು ನಡೆಯುತ್ತಿದ್ದು, ಕೇವಲ ಹೋರಾಟಗಳು ಮಾತ್ರ ಸಾಕಾಗುವುದಿಲ್ಲ. ಅದರ ಜೊತೆಗೆ ತುಳು ಭಾಷೆ ಮಾತನಾಡುವವರ ಸಂಖ್ಯೆ ಹೆಚ್ಚಾಗಬೇಕು. ತುಳುವಿನಲ್ಲಿ ಹೆಚ್ಚು ಹೆಚ್ಚು ಸಾಹಿತ್ಯಗಳು ಮೂಡಿ ಬರಬೇಕು. ಅದಕ್ಕಾಗಿ ನಮ್ಮ ಯುವ ಪೀಳಿಗೆಗೆ ತುಳುವಿನ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವಾಗಬೇಕು ಎಂದು ಡಾ. ಯಶೋವರ್ಮ ಹೇಳಿದರು.

ಕಾರ್ಯಕ್ರಮವನ್ನು ತಾಪಂ ಅಧ್ಯಕ್ಷೆ ದಿವ್ಯಜ್ಯೋತಿ ಉದ್ಘಾಟಿಸಿದರು.

ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಪಿಯೂಸ್ ಎಲ್.ರೊಡ್ರಿಗಸ್ ತೆನೆ ಕಟ್ಟುವ ಮೂಲಕ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕವಾಗಿ ಚಾಲನೆ ನೀಡಿದರು.

ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕುಶಾಲಪ್ಪಗೌಡ ಪೂವಾಜೆ, ಜಿಪಂ ಸದಸ್ಯೆ ಮಮತಾ ಎಂ. ಶೆಟ್ಟಿ, ತಾಪಂ ಸದಸ್ಯ ಪ್ರವೀಣ್ ಗೌಡ, ಕೊಯ್ಯೂರು ಗ್ರಾಪಂ ಅಧ್ಯಕ್ಷೆ ಶಶಿಕಲಾ, ವಿದ್ಯಾಂಗ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೋ, ಸಹಕಾರ ಸಂಘಗಳ ಉಪನಿರ್ದೇಶಕ ಬಿ.ಕೆ. ಸಲೀಂ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ತುಳು ಸಾಹಿತ್ಯ ಅಕಾಡಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ಸದಸ್ಯರಾದ ರೂಪಕಲಾ ಆಳ್ವ, ಜಯಶೀಲಾ ಮರೋಳಿ, ದಿವ್ಯಾ ಕೊಕ್ಕಡ, ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್, ಕಾರ್ಯಾಧ್ಯಕ್ಷ ಮುಹಮ್ಮದ್ ಹಾರೂನ್, ಸಂಚಾಲಕ ದಾಮೋದರ ಗೌಡ, ಪ್ರ.ಕಾರ್ಯದರ್ಶಿ ರಾಧಾಕೃಷ್ಣ ತಚ್ಚಮೆ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News