ಪತ್ರಕರ್ತ ಸಾಮಾಜಿಕ ಜಾಲತಾಣಗಳಲ್ಲೂ ಪರಿಣಿತನಾಗಿರಬೇಕಿದೆ: ನರೇಂದ್ರ ರೈ ದೇರ್ಲ

Update: 2016-11-20 18:43 GMT

ಪುತ್ತೂರು, ನ.20: ಜಗತ್ತಿನಲ್ಲಿ ಪತ್ರಕರ್ತರನ್ನು ಹೆಚ್ಚು ಜನ ನಂಬುತ್ತಾರೆ. ಹೀಗಾಗಿ ಪತ್ರಕರ್ತರು ಸಾಮಾಜಿಕ ಬಳಕೆದಾರರು. ಹೀಗಾಗಿ ಇಂದಿನ ವೇಗದ ಜಾಲತಾಣಗಳೂ ಹೆಚ್ಚು ಮಹತ್ವ ಪಡೆಯುತ್ತಿವೆ. ಇದಕ್ಕಾಗಿ ಪತ್ರಕರ್ತರು ಸಾಮಾಜಿಕ ಜಾಲತಾಣಗಳಲ್ಲೂ ಪರಿಣಿತನಾಗಿರಬೇಕಾಗುತ್ತದೆ ಎಂದು ಅಂಕಣಕಾರ, ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ ಹೇಳಿದರು.

ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಫಾರ್ಮರ್ ಫಸ್ಟ್ ಟ್ರಸ್ಟ್ ಹಾಗೂ ಅಡಿಕೆ ಪತ್ರಿಕೆ ವತಿಯಿಂದ ನಡೆದ ವಾಟ್ಸ್‌ಆ್ಯಪ್ ಕೃಷಿ ಪತ್ರಿಕೋದ್ಯಮ ಶಿಬಿರವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೃಷಿ ಉಳಿಯುವಿಕೆಗೆ ಕಲಿಯುವುದು, ಕಲಿಸುವುದು ಅಗತ್ಯವಾಗಿದೆ. ಇಂದು ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳು ಹೆಚ್ಚು ಮಹತ್ವ ಪಡೆಯುತ್ತಿವೆ. ಹೀಗಾಗಿ ಜಾಲತಾಣಗಳ ಬಗ್ಗೆ ಕೃಷಿಕರೂ ಅರಿವು ಹೊಂದಿರಬೇಕಾಗುತ್ತದೆ. ಹಿಂದೆ ಸಹವಾಸ ಶಿಕ್ಷಣ ಹೆಚ್ಚು ಮಹತ್ವ ಪಡೆಯುತ್ತಿತ್ತು. ಇದರಿಂದ ಅನುಭವ ಹರಿದು ಬರುತ್ತಿತ್ತು. ಆದರೆ ಇಂದು ಸಹವಾಸ ಶಿಕ್ಷಣವು ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿದೆ. ವೇಗದ ಜಗತ್ತಿನಲ್ಲಿ ಸಹವಾಸದ ಸಂಬಂಧವನ್ನು ಕೈಯಲ್ಲಿರುವ ಸಣ್ಣ ಉಪಕರಣ ಮೊಬೈಲ್ ಮೂಲಕ ಪಡೆದುಕೊಂಡು ಜಗತ್ತು ಮುಟ್ಟಲು ಸಾಧ್ಯವಿದೆ. ಅದರ ಜೊತೆಗೆ ಸಾಧ್ಯತೆಗಳ, ಮಿತಿಗಳ ಬಗ್ಗೆಯೂ ಯೋಚಿಸಬೇಕು ಎಂದರು.

 ಸಭಾಧ್ಯಕ್ಷತೆ ವಹಿಸಿದ್ದ ಫಾರ್ಮರ್ ಫಸ್ಟ್ ಟ್ರಸ್ಟ್ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಮಾತನಾಡಿ, ತಾಂತ್ರಿಕತೆಯನ್ನು ಉಪಯೋಗಪಡಿಸಿಕೊಳ್ಳಬೇಕು. ನಾಲೆಡ್ಜ್‌ಗೂ ಮಾಹಿತಿಗೂ ವ್ಯತ್ಯಾಸ ಇದೆ. ನಮಗೆ ಮಾಹಿತಿ ಮಾತ್ರ ಸಾಲದು ಜ್ಞಾನ ಸಂಪಾದನೆಯೂ ಅಗತ್ಯ. ಸಾಮಾಜಿಕ ಜಾಲತಾಣಗಳ, ತಂತ್ರಜ್ಞಾನಗಳ ಬಳಕೆ ಸೂಕ್ತ. ಆದರೆ ತಂತ್ರಜ್ಞ್ಞಾನವನ್ನು ಹದ್ದುಬಸ್ತಿನಲ್ಲಿಡುವ ಬುದ್ಧಿವಂತಿಕೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ಫಾರ್ಮರ್ ಫಸ್ಟ್ ಟ್ರಸ್ಟ್ ಕಾರ್ಯದರ್ಶಿ ಶಂಕರ್ ಸಾರಡ್ಕ, ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ, ಕೃಷಿಮಾಧ್ಯಮ ಕೇಂದ್ರದ ಶಿವರಾಂ ಪೈಲೂರು ಉಪಸ್ಥಿತರಿದ್ದರು.

 ಕಾರ್ಯಕ್ರಮದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಹಾಗೂ ಜಾಲತಾಣ, ಕಿರುತಂತ್ರಾಂಶಗಳ ಬಗ್ಗೆ ಡಾ. ಮೋಹನ್ ತಲಕಾಲುಕೊಪ್ಪ, ಸುಳಿವು ಹಾಗೂ ಲೇಖನ ತಯಾರಿ ಬಗ್ಗೆ ನಾ. ಕಾರಂತ ಪೆರಾಜೆ, ವಾಟ್ಸ್‌ಆ್ಯಪ್ ಕೃಷಿ ಪತ್ರಿಕೋದ್ಯಮದ ಮಿತಿಗಳು ಮತ್ತು ಜವಾಬ್ದಾರಿ ಬಗ್ಗೆ ಶ್ರೀಪಡ್ರೆ, ಮಾಧ್ಯಮಸ್ನೇಹಿ ಛಾಯಾಗ್ರಹಣದ ಬಗ್ಗೆ ಮಹೇಶ್ ಪುಚ್ಚಪ್ಪಾಡಿ ಮಾಹಿತಿ ನೀಡಿದರು. ಗೇರು ಸಂಶೋಧನಾ ಕೇಂದ್ರದ ತಾಂತ್ರಿಕ ಅಧಿಕಾರಿ ಪ್ರಕಾಶ್ ಭಟ್ ಕರ್ಕಿ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News