ಕೆನಡಾ ಟಿವಿಯಲ್ಲಿ ಪ್ರಪ್ರಥಮ ಹಿಜಾಬ್ ಧಾರಿಣಿ ನಿರೂಪಕಿಯಿಂದ ಸುದ್ದಿ ಕಾರ್ಯಕ್ರಮ
ಕೆನಡಾ, ನ.21 : ರವಿವಾರದಂದು ಕೆನಡಾದ ಟೊರಂಟೋದ ಸಿಟಿ ನ್ಯೂಸ್ ಟಿವಿ ಚಾನೆಲ್ ನಲ್ಲಿ ಪ್ರಪ್ರಥಮ ಬಾರಿಗೆ ಗಿನೆಲ್ಲಾ ಮಸ್ಸ ಎಂಬ ಹಿಜಾಬ್ ಧಾರಿಣಿ ನಿರೂಪಕಿ ಸುದ್ದಿ ಕಾರ್ಯಕ್ರಮವೊಂದನ್ನು ನೀಡಿ ಸುದ್ದಿಯಾಗಿದ್ದಾರೆ. ಈ ಬಗ್ಗೆ ಆಕೆ ಟ್ವೀಟ್ ಕೂಡ ಮಾಡಿದ್ದು ತನ್ನ ಪತ್ರಿಕೋದ್ಯಮ ವೃತ್ತಿಯಲ್ಲಿ ಇದೊಂದು ಮೈಲಿಗಲ್ಲು ಎಂದು ಹೇಳಿಕೊಂಡಿದ್ದಾಳೆ. ಈಕೆ ಕೆನಡಾದ ಮೊದಲ ಹಿಜಾಬ್ ಧಾರಿಣಿ ನಿರೂಪಕಿಯಾಗಿದ್ದಾರೆ. ಈ ಹಿಂದೆ ಜನವರಿ 2015 ರಲ್ಲಿ ಆಕೆ ಕೆನಡಾದ ಪ್ರಪ್ರಥಮ ಹಿಜಾಬ್ ಧಾರಿಣಿ ಟಿವಿ ವರದಿಗಾರ್ತಿಯಾಗಿದ್ದರು.
ಪನಾಮದಲ್ಲಿ ಹುಟ್ಟಿದ ಗಿನೆಲ್ಲಾ ಒಂದು ವರ್ಷದವಳಿರುವಾಗ ತಾಯಿಯೊಂದಿಗೆ ಕೆನಡಾಗೆ ಬಂದಿದ್ದಳು. ಟೊರಂಟೋದಲ್ಲಿ ಬೆಳೆದ ಆಕೆ ಚಿಕ್ಕವಳಿರುವಾಗಲೇ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದ್ದಳು.
ಮಾಧ್ಯಮರಂಗದಲ್ಲಿಯೇ ಮುಂದುವರಿಯುವುದು ನನ್ನ ಹೆಬ್ಬಯಕೆಯಾಗಿದ್ದು ಕ್ಯಾಮರಾ ಮುಂದೆ ಕಾಣಿಸಬೇಕೆಂಬುದೂ ನನ್ನ ಇಚ್ಛೆಯಾಗಿತ್ತು, ಎಂದು ಹೇಳಿದ ಗಿಸೆಲ್ಲಾ ಅದೇ ಸಮಯ ಹಿಜಾಬ್ ಧರಿಸಿ ವೃತ್ತಿಯಲ್ಲಿ ಮುಂದೆ ಸಾಗುವುದು ಸಾಧ್ಯವೇ ಎಂಬ ಬಗ್ಗೆಯೂ ತನಗೆ ಚಿಂತೆಯಿತ್ತು ಎಂದು ವಿವರಿಸಿದ್ದಾಳೆ.
ತನ್ನ ವೃತ್ತಿ ಜೀವನದ ಯಶಸ್ಸಿಗೆ ಹೆತ್ತವರು ಕಾರಣ ಎಂದು ಹೇಳುವ ಗಿಸೆಲ್ಲಾ ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ ಎಂದು ತನ್ನ ತಾಯಿ ಆಗಾಗ ಹೇಳುತ್ತಿದ್ದರು ಎಂದು ವಿವರಿಸುತ್ತಾಳೆ. ನಾನು ನನ್ನ ಗುರಿಯನ್ನು ಸಾಧಿಸುತ್ತೇನೆಂಬ ವಿಶ್ವಾಸ ನನಗಿಂತ ಮೊದಲು ನನ್ನ ಹೆತ್ತವರಿಗೆ ಇತ್ತು ಎಂದು ನಾನಂದುಕೊಳ್ಳುತ್ತೇನೆ, ಎನ್ನುತ್ತಾಳೆ ಆಕೆ.
ಕೆನಡಾ ಯಾವತ್ತೂ ವೈವಿಧ್ಯತೆ ಹಾಗೂ ಸಮಾನತೆಯನ್ನು ಉತ್ತೇಜಿಸುವ ದೇಶವಾಗಿ ಹೊರಹೊಮ್ಮಿದೆಯೆಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.