ಸೇವೆಯಲ್ಲೇ ಸಾರ್ಥಕ್ಯ ಕಾಣುವ ವೈದ್ಯ ಡಾ.ವಿಶ್ವನಾಥ್ ನಾಯಕ್
ಇವರು ಡಾ.ವಿಶ್ವನಾಥ್ ನಾಯಕ್ ಪಾಣೆಮಂಗಳೂರು.
ಇವರ ಬಗ್ಗೆ ಬರೆಯೋವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಆದರೂ ಅವರ ಬಗ್ಗೆ ಬರೆಯಬೇಕೆಂಬ ಆಸೆ. ಇದು ನನ್ನ ಸಣ್ಣ ಪ್ರಯತ್ನ ಅಷ್ಟೇ.
ಪಾಣೆಮಂಗಳೂರು, ಮೆಲ್ಕಾರ್, ಬೋಳಂಗಡಿ, ಕಲ್ಲಡ್ಕ, ಬಂಟ್ವಾಳ, ಬಿ.ಸಿ.ರೋಡ್ ಸೇರಿದಂತೆ ಹಲವಾರು ಕಡೆ ಇವರನ್ನು ತಿಳಿಯದೇ ಇರೋರು ತುಂಬಾ ಕಡಿಮೆ ಅಂತ ನನ್ನನಿಸಿಕೆ. ಅಷ್ಟೊಂದು ಚಿರಪರಿಚಿತ ಹೆಸರು. ಇವರು ಕ್ಲಿನಿಕ್ ನಡೆಸ್ತಿರೋದು ಪಾಣೆಮಂಗಳೂರಿನ ಹಳೆಪೇಟೆಯಲ್ಲಿ.
ವೃತ್ತಿಯಲ್ಲಿ ಓರ್ವ ವೈದ್ಯ ಡಾ. ವಿಶ್ವನಾಥ್ ರವರು. ಇವರ ಪತ್ನಿ ಡಾ. ಜಯಮಾಲ. ನಾ ತಿಳಿದ ಹಾಗೆ ಇವರ ಕುಟುಂಬದ ಹಿನ್ನೆಲೆ ಕೂಡ ವೈದ್ಯ ವೃತ್ತಿಯವರು. ಇವರ ವಿಶೇಷತೆ ಏನೆಂದು ತಿಳಿಯಬೇಕಾದರೆ ನಾನು ಬರೆಯೋದಕ್ಕಿಂತ ನೀವು ಇವರಲ್ಲಿ ಚಿಕಿತ್ಸೆ ಪಡೆದಾಗಲೇ ಹೆಚ್ಚು ತಿಳಿಯಬಹುದು. ಕಾರಣ ಇಷ್ಟೆ. ನೀವು ಒಂದು ಸಲ ಇವರಲ್ಲಿಗೆ ಬಂದು ಚಿಕಿತ್ಸೆ ಪಡೆದರೆ, ಮತ್ತೆ ನೀವು ಒಂದು ವರ್ಷ ಅಥವಾ ಎರಡು ವರ್ಷಗಳ ನಂತರ ಬಂದರೂ ನಿಮ್ಮನ್ನು ಗುರುತು ಹಿಡಿಯುವ ಶಕ್ತಿ. ಹೇಗೆಂದರೆ ನೀವು ಮೊದಲ ಬಾರಿಗೆ ಬಂದಾಗಲೇ ನಿಮ್ಮ ಬಯೋಡಾಟಾ ಕೇಳಿರ್ತಾರೆ. ಇವರ ಕ್ಲಿನಿಕಲ್ಲಿ ಕುಳಿತುಕೊಂಡರೆ ಸಮಯ ಹೋಗೋದೆ ತಿಳಿಯೋದಿಲ್ಲ. ನಿರರ್ಗಳವಾಗಿ ಸ್ಥಳೀಯ ಭಾಷೆಗಳಾದ ಬ್ಯಾರಿ, ತುಳು ಸಹಿತ ಇತರ ಭಾಷೆಯನ್ನು ಕರಗತ ಮಾಡಿಕೊಂಡಿರುವ ಡಾಕ್ಟರ್, ನಗಿಸುತ್ತಲೇ ರೋಗಿಗಳ ಮಾತೃ ಭಾಷೆಯಲ್ಲಿ ಆರೋಗ್ಯ ವಿಚಾರಿಸಿ, ನಗಿಸುತ್ತಲೇ ಕಳುಹಿಸಿಕೊಡ್ತಾರೆ. ಇವರ ಬಳಿಗೆ ತುಂಬಾ ಸಾರಿ ನಾನು ಹೋದದ್ದಿದೆ. ಇವರ ಚಿಕಿತ್ಸೆಯ ವೆಚ್ಚ ಹತ್ತು ರೂಪಾಯಿಯಿಂದ ಆರಂಭವಾಗುವುದು. ನಾ ತುಂಬಾ ಸಲ ಹೋಗಿದ್ದರೂ 100₹ ರೂ.ಗಿಂತ ಹೆಚ್ಚು ಪಡೆದಿದ್ದಿಲ್ಲ. ವೃತ್ತಿಜೀವನವನ್ನು ಸೇವೆಯಾಗಿ ಮಾಡಿಕೊಂಡಿರುವ ಇಂತಹ ವೈದ್ಯರು ನಮ್ಮ ನಡುವೆ ತುಂಬಾ ಕಡಿಮೆ ಅಂತ ನನ್ನನಿಸಿಕೆ. ನಮ್ಮ ಕುಟುಂಬದ ವೈದ್ಯರೂ ಹೌದು. ನನ್ನ ಮುತ್ತಜ್ಜ ಚೆಂಡಾಡಿ ಮುಹಮ್ಮದ್ ರವರು ಕೂಡ ಇವರ ಕುಟುಂಬಕ್ಕೆ ಹತ್ತಿರ ಇದ್ದ ವ್ಯಕ್ತಿ.
ಡಾಕ್ಟರ್ ವಿಶ್ವನಾಥ್ ರವರ ಈ ಸೇವೆಗೆ ಕಳೆದ ವರ್ಷ ದ.ಕ.ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹುಡುಕಿ ಕೊಂಡು ಬಂತು. ಈಗ ದಿಲ್ಲಿಯ ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ "ರಾಷ್ಟ್ರೀಯ ಗೌರವ್ ಅವಾರ್ಡ್" ಅನ್ನು ಪಡೆದಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇವರು ಇನ್ನಷ್ಟು ಸೇವೆ ನೀಡಲು ದೇವನು ಕರುಣಿಸಲಿ.
ಹಾಗೆಯೇ ಇವರ ಓರ್ವ ಮಗ ವಾಮನ್ ಕೂಡ ಮಂಗಳೂರಿನ ಎ.ಜೆ.ವೈದ್ಯಕೀಯ ಕಾಲೇಜಿನಲ್ಲಿ ಕಲಿಯುತ್ತಿದ್ದಾನೆ. ಮಗ ಕೂಡ ತಂದೆಯ ಹಾದಿಯಲ್ಲಿ ಮುಂದುವರಿಯಲಿ ಎಂದು ಹಾರೈಸುತ್ತೇನೆ.