×
Ad

ಎಲ್ಲರ ಬಿಎಂಡಬ್ಲ್ಯು ಗೆ ಒಂದು ಬೆಲೆ, ಅಂಬಾನಿಯ ಬಿಎಂಡಬ್ಲ್ಯುಗೆ ಬೇರೆಯೇ ಬೆಲೆ !

Update: 2016-11-21 15:56 IST

ಪ್ರಧಾನಿ ನರೇಂದ್ರ ಮೋದಿ ಮತ್ತು ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ ಅವರ ನಡುವಿನ ಸಮಾನ ಅಂಶಗಳು ಏನು ಎನ್ನುವುದರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಅವರಿಬ್ಬರೂ ಗುಜರಾತಿಗಳು ಎನ್ನುವುದರ ಜೊತೆಗೆ ಅವರಿಬ್ಬರೂ ಒಂದೇ ಬಗೆಯ ಕಾರುಗಳಲ್ಲಿ ತಿರುಗಾಡುತ್ತಾರೆ. ಹೌದು,ಮುಕೇಶ ಅಂಬಾನಿ ಬಳಸುವುದು ಗುಂಡು ನಿರೋಧಕ ರಕ್ಷಾಕವಚವಿರುವ ಬಿಎಂಡಬ್ಲು-7 ಸಿರೀಸ್ ಕಾರನ್ನು. ಇದೇ ಕಾರನ್ನು ಮೋದಿ ಬಳಸುತ್ತಾರೆ. ಈ ಕಾರಿನ ವೌಲ್ಯ ಬರೋಬ್ಬರಿ 10 ಕೋಟಿ ರೂ. ಅಂತಹ ವಿಶೇಷವೇನಿದೆ ಈ ಕಾರಿನಲ್ಲಿ ಎನ್ನುತ್ತೀರಾ? ಬನ್ನಿ...ನೋಡೋಣ

ಅಷ್ಟೇಕೆ ದುಬಾರಿ?

  ಬಿಎಂಡಬ್ಲು 7-ಸಿರೀಸ್ ಹೈ ಸೆಕ್ಯೂರಿಟಿ ಬಿಎಂಡಬ್ಲು ಸಲೂನ್ 760ಎಲ್‌ಐ ನ ಸುಧಾರಿತ ಮಾದರಿಯಾಗಿದೆ. ಅದು ಮಾಮೂಲು 7-ಸಿರೀಸ್‌ಗಿಂತ ಭಿನ್ನವಾಗಿ ಕಾಣದಂತಿರಲು ಅದನ್ನು ಅತ್ಯಂತ ಎಚ್ಚರಿಕೆಯಿಂದ ಪರಿಷ್ಕರಿಸಲಾಗಿದೆ.

 ಇದು ವಿಆರ್7 ಪ್ರಕ್ಷೇಪಕ ರಕ್ಷಣಾ ನಿಯಮಕ್ಕೆ ಸಂಪೂರ್ಣ ಅನುಗುಣವಾಗಿರುವ ವಿಶ್ವದ ಮೊದಲ ರಕ್ಷಾಕವಚ ಸಹಿತ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಇದರ ಬಾಗಿಲುಗಳ ಒಳಗೆ ಗುಂಡು ನಿರೋಧಕ ಪ್ಲೇಟ್‌ಗಳನ್ನು ಅಳವಡಿಸಲಾಗಿದ್ದು, ಪ್ರತಿಯೊಂದು ಕಿಟಕಿಯ ಗುಂಡು ನಿರೋಧಕ ಗಾಜು 65 ಎಂಎಂ ದಪ್ಪವಿದ್ದು, ಪ್ರತಿಯೊಂದೂ 150 ಕೆಜಿ ತೂಗುತ್ತವೆ.

ವಾಹನವು ಯಾವುದೇ ಸೇನಾ ಅಸ್ತ್ರದ ಆಘಾತವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಗ್ರೆನೇಡ್ ಸ್ಫೋಟಗಳು ಇದರ ಲೆಕ್ಕಕ್ಕೇ ಇಲ್ಲ. 17 ಕಿಲೋಗ್ರಾಮ್‌ವರೆಗಿನ ಭಾರೀ ಸಾಮರ್ಥ್ಯದ ಟಿಎನ್‌ಟಿ ಸ್ಫೋಟಗಳಿಂದಲೂ ಕಾರಿನಲ್ಲಿದ್ದ ್ದವರಿಗೆ ಯಾವುದೇ ಅಪಾಯವುಂಟಾಗುವುದಿಲ್ಲ. ನೆಲಬಾಂಬುಗಳೂ ಈ ಕಾರಿಗೆ ಹಾನಿಯನ್ನುಂಟು ಮಾಡಲು ಸಾಧ್ಯವಿಲ್ಲ. ಎಕೆ-47ನಿಂದ ಗುಂಡುಗಳನ್ನು ಹಾರಿಸಿದರೂ ಕಾರಿನ ಬಾಡಿಯನ್ನು ಭೇದಿಸಲಾಗುವುದಿಲ್ಲ. ಇಂಧನ ಟ್ಯಾಂಕ್‌ನ್ನು ಸಹ ಸೆಲ್ಫ್ ಸೀಲಿಂಗ್ ಗುಂಡು ನಿರೋಧಕ ಪ್ಲೇಟ್‌ಗಳಿಂದ ತಯಾರಿಸಲಾಗಿದ್ದು ಎಂತಹುದೇ ವಿಷಮ ಸ್ಥಿತಿಯಲ್ಲಿಯೂ ಅದಕ್ಕೆ ಬೆಂಕಿ ಹತ್ತಿಕೊಳ್ಳುವುದಿಲ್ಲ.

ರಾಸಾಯನಿಕ ಅಸ್ತ್ರಗಳ ದಾಳಿಯನ್ನೂ ತಡೆದುಕೊಳ್ಳುವ ಕ್ಷಮತೆಯನ್ನು ಈ ಕಾರು ಹೊಂದಿದ್ದು,ತುರ್ತು ಸಂದರ್ಭಗಳಲ್ಲಿ ಬಳಕೆಗಾಗಿ ಕಾರಿನೊಳಗೆ ಆಕ್ಸಿಜನ್ ಸಿಲಿಂಡರ್ ಗಳನ್ನು ಅಳವಡಿಸಲಾಗಿದೆ. ಕ್ಯಾಬಿನ್ ಅಗ್ನಿ ನಿರೋಧಕವಾಗಿದ್ದು, ಸ್ವಯಂಚಾಲಿತ ಅಗ್ನಿಶಾಮಕ ವ್ಯವಸ್ಥೆಯನ್ನು ಹೊಂದಿದೆ. ಎರಡು ಪದರುಗಳ ಟೈರ್‌ಗಳು ಗುಂಡಿನ ದಾಳಿಗಳನ್ನು ತಡೆದುಕೊಳ್ಳಬಲ್ಲವು, ಒಂದು ವೇಳೆ ಟೈರ್‌ಗೆ ತೂತಾದರೂ ಕಾರು ಪ್ರತಿ ಗಂಟೆಗೆ 80 ಕಿ.ಮೀ.ವೇಗದಲ್ಲಿ ಚಲಿಸಬಲ್ಲದು.

ಕಾರಿನ ಶಕ್ತಿ ಯಾವುದು...?

ಕಾರು ವಿ12 6.0ಲೀಟರ್ ಪೆಟ್ರೋಲ್ ಇಂಜಿನ್‌ನ್ನು ಹೊಂದಿದ್ದು, ಇದು 544 ಬಿಎಚ್‌ಪಿಯ ಗರಿಷ್ಠ ಶಕ್ತಿಯನ್ನು ಮತ್ತು 750 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. 8-ಸ್ಪೀಡ್ ಟ್ರಾನ್ಸ್‌ಮಿಷನ್ ಹೊಂದಿರುವ ಕಾರು ಕೇವಲ 6.2 ಸೆಕೆಂಡ್‌ಗಳಲ್ಲಿ ಪ್ರತಿ ಗಂಟೆಗೆ 100 ಕಿ.ಮೀ.ವೇಗವನ್ನು ಪಡೆದುಕೊಳ್ಳುತ್ತದೆ ಮತ್ತು ಗರಿಷ್ಠ ಪ್ರತಿ ಗಂಟೆಗೆ 210 ಕಿ.ಮೀ.ವೇಗದಲ್ಲಿ ಚಲಿಸುತ್ತದೆ. ಉಪಗ್ರಹದ ಮೂಲಕ ಈ ಕಾರಿನ ಜಾಡನ್ನು ಹಿಡಿಯ ಬಹುದಾಗಿದ್ದು, ತುರ್ತು ಸಂದರ್ಭಗಳಲ್ಲಿ ಕರೆ ಮಾಡಲು ಇಂಟರ್‌ಕಾಮ್ ವ್ಯವಸ್ಥೆಯನ್ನು ಹೊಂದಿದೆ.

 ಕಾರಿನ ಪರಿಷ್ಕರಣೆಗಳಿಗನುಗುಣವಾಗಿ ಅದರ ತೂಕವೂ ಗಮನೀಯ ಪ್ರಮಾಣದಲ್ಲಿ ಹೆಚ್ಚಿದೆ. ಕಾರಿನ ಅಗತ್ಯಗಳಿಗೆ ತಕ್ಕಂತೆ ಸಸ್ಪೆನ್ಷನ್ ಮತ್ತು ಬ್ರೇಕ್‌ಗಳನ್ನು ಬಿಎಂಡಬ್ಲು ಪರಿಷ್ಕರಿಸಿದೆ.

ತೆರಬೇಕಾದ ಬೆಲೆ...?

 ಈ ಕಾರು ಚಕ್ರಗಳ ಮೇಲೆ ಚಲಿಸುವ ಭದ್ರಕೋಟೆಯಾಗಿದೆ ಮತ್ತು ಇಂತಹ ವಾಹನಗಳ ಬೆಲೆ ಸಹಜವಾಗಿಯೇ ದುಬಾರಿಯಾಗಿರುತ್ತದೆ. ಬಿಎಂಡಬ್ಲು7-ಸಿರೀಸ್ ಹೈ ಸೆಕ್ಯೂರಿಟಿ ಕಾರಿನ ಶೋರೂಮ್ ಬೆಲೆ 8.7 ಕೋ.ರೂ.ಗಳು. ಈ ಹಣದಲ್ಲಿ ಅತ್ಯಂತ ಐಷಾರಾಮಿಯಾದ ಎರಡು ಲೊಂಬಾರ್ಗಿನಿಗಳನ್ನು ಖರೀದಿಸಬಹುದಾಗಿದೆ.

ಅಂದ ಹಾಗೆ ಈ ಕಾರಿನ ರಿಜಿಸ್ಟ್ರೇಷನ್ ವೆಚ್ಚವೇ 1.6 ಕೋ.ರೂ.ಆಗುತ್ತದೆ ಮತ್ತು ಇಷ್ಟು ಹಣದಲ್ಲಿ 20 ಹೊಂಡಾ ಸಿಟಿ ಅಥವಾ 50 ರೆನಾಲ್ಟ್ ಕ್ವಿಡ್ ಕಾರುಗಳನ್ನು ಖರೀದಿಸಬಹುದಾಗಿದೆ!

ಜೀವ ಅಷ್ಟೊಂದು ಅಗ್ಗವಲ್ಲ ಎನ್ನುವುದು ಕೆಲವರ ಹೇಳಕೆ ಮತ್ತು ಅಂಬಾನಿ ಖಂಡಿತವಾಗಿಯೂ ಈ ಮಾತಿಗೆ ಅರ್ಥ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News