ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನಿಂದ ಮಹಿಳಾ ವಿಭಾಗ ರಚನೆ
ಕೊಲ್ಕತಾ, ನವೆಂಬರ್ 21: ಮುಸ್ಲಿಂ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳಲ್ಲಿ ಪರಿಶೀಲಿಸಲು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮಹಿಳಾ ವಿಭಾಗ ರಚಿಸಲು ತೀರ್ಮಾನಿಸಿದೆ ಎಂದು ವರದಿಯಾಗಿದೆ. ಕೊಲ್ಕತಾದಲ್ಲಿ ನಡೆದ ಮೂರು ದಿವಸಗಳ ಮಂಡಳಿಯ 25ನೇ ವಾರ್ಷಿಕ ಸಮ್ಮೇಳನದಲ್ಲಿ ಈ ಕುರಿತು ತೀರ್ಮಾನಿಸಲಾಗಿದೆ ಎಂದು ಕಾರ್ಯದರ್ಶಿ ಝಫರ್‌ಯಾಬ್ ಜೀಲಾನಿ ತಿಳಿಸಿದ್ದಾರೆ. ತಲಾಕ್, ಕುಟುಂಬ ಸಮಸ್ಯೆಗಳು, ಶಿಕ್ಷಣ ಮುಂತಾದ ವಿಷಯಗಳನ್ನು ಮಹಿಳಾ ವಿಭಾಗ ನಿರ್ವಹಿಸಲಿದೆ. ಮುಸ್ಲಿಂ ಮಹಿಳೆಯರಿಗೆ ಸಹಾಯ ಒದಗಿಸುವುದಕ್ಕಾಗಿ ಉರ್ದು ಮತ್ತು ಇಂಗ್ಲಿಷ್ ಸಹಿತ ಎಂಟು ಪ್ರಾದೇಶಿಕ ಭಾಷೆಗಳಲ್ಲಿ ಟೋಲ್‌ಫ್ರೀ ನಂಬರ್‌ಗಳನ್ನು ಕೂಡಾ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಕುಟುಂಬ ಸಮಸ್ಯೆಗಳ ಸಹಿತ ಸಹಾಯ ಸಲಹೆ ಸೂಚನೆಗಳನ್ನು ನೀಡಲು ಟೋಲ್ ಫ್ರೀ ನಂಬರ್‌ಗಳು ಕಾರ್ಯ ನಿರ್ವಹಿಸಲಿವೆ.
ಸಮಾನ ಸಿವಿಲ್ ಕೋಡ್ ತರುವ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ವಿಫಲಗೊಳಿಸಲಾಗುವುದೆಂದು ಸಮ್ಮೇಳನದಲ್ಲಿ ನಿರ್ಧರಿಸಲಾಗಿದೆ. ಸಮಾನ ಸಿವಿಲ್ ಕೋಡ್, ತ್ರಿವಳಿತಲಾಖ್ ಮುಂತಾದ ವಿಷಯಗಳು ಉತ್ತರಪ್ರದೇಶ ಚುನಾವಣೆಗೆ ಮುಂಚಿತವಾಗಿ ಸಾಮುದಾಯಿಕ ಧ್ರವೀಕರಣವುಂಟುಮಾಡಲು ಸರಕಾರ ಬಳಸಿಕೊಂಡಿದೆ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಕಮಾಲ್ ಫಾರೂಕಿ ಹೇಳಿದ್ದಾರೆ. ಕೇಂದ್ರ ಸರಕಾರದೊಂದಿಗೆ ಈ ವಿಷಯದಲ್ಲಿ ಚರ್ಚೆ ನಡೆಸಲು ಮಂಡಳಿ ಸಿದ್ಧವಿದೆ. ಆದರೆ ಸರಕಾರದಿಂದ ಇದಕ್ಕೆ ಪೂರಕವಾದ ಪ್ರತಿಕ್ರಿಯೆ ನಮಗೆ ಲಭಿಸಿಲ್ಲ ಎಂದು ಅವರು ಹೇಳಿದ್ದಾರೆ.
ತ್ರಿವಳಿತಲಾಖ್ ವಿರುದ್ಧ ಕ್ರಮವನ್ನು ಪ್ರತಿಭಟಿಸಿ ಮಂಡಳಿ ಆರಂಭಿಸಿದ ಸಹಿಸಂಗ್ರ ಅಭಿಯಾನ ಮುಂದುವರಿಯಲಿದೆ. ಈವರೆಗೆ ಹತ್ತು ಕೋಟಿ ಮಹಿಳೆಯರು ತ್ರಿವಳಿತಲಾಖ್ ನ್ನು ಬೆಂಬಲಿಸಿ ಸಹಿಹಾಕಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಹಾಗೂ ಸ್ವಾಗತ ಸಮಿತಿಯ ಚೇರ್‌ಮೆನ್ ಸುಲ್ತಾನ್ ಅಹ್ಮದ್ ತಿಳಿಸಿದ್ದಾರೆ. ಮುಸ್ಲಿಂ ಮಹಿಳೆಯರನ್ನು ದಮನಿಸಲಾಗುತ್ತಿದೆ ಎಂಬ ಪ್ರಚಾರ ನಡೆಸಲು ಸರಕಾರ ಪ್ರಯತ್ನಿಸುತ್ತಿದೆಎಂದು ಮಂಡಳಿಯ ಮಹಿಳಾ ಸದಸ್ಯೆಯಾದ ಅಸ್ಮಾ ಸಹ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಸ್ಲಿಮ್ ಯುವಕರ ವಿರುದ್ಧ ನಡೆಸಲಾಗುತ್ತಿರುವ ದೌರ್ಜನ್ಯವೂ ಮಂಡಳಿಯ ಸಮ್ಮೇಳನದಲ್ಲಿ ಚರ್ಚಿಸಲ್ಪಟ್ಟಿದೆ ಎಂದು ವರದಿ ತಿಳಿಸಿದೆ.