ರೈಲು ದುರಂತ:ಸಾವಿನ ಸಂಖ್ಯೆ 143ಕ್ಕೇರಿಕೆ

Update: 2016-11-21 12:11 GMT

ಪುಖರಾಯಾಂ,ನ.21: ಉತ್ತರ ಪ್ರದೇಶದ ಕಾನ್ಪುರ ಗ್ರಾಮೀಣ ಜಿಲ್ಲೆಯ ಪುಖರಾಯಾಂ ಸಮೀಪ ರವಿವಾರ ನಸುಕಿನಲ್ಲಿ ಇಂದೋರ-ಪಾಟ್ನಾ ಎಕ್ಸಪ್ರೆಸ್ ರೈಲಿನ 14 ಬೋಗಿಗಳು ಹಳಿ ತಪ್ಪಿ ಸಂಭವಿಸಿದ್ದ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 143ಕ್ಕೇರಿದೆ. ನಜ್ಜುಗುಜ್ಜಾಗಿದ್ದ ಬೋಗಿಗಳ ಅವಶೇಷಗಳಡಿ ಸಿಕ್ಕಿ ಹಾಕಿಕೊಂಡಿದ್ದವರ ರಕ್ಷಣೆಗಾಗಿ ರಾತ್ರಿಯಿಡೀ ನಡೆದ ಕಾರ್ಯಾಚರಣೆ ಇಂದು ಬೆಳಗಿನ ಜಾವ ಅಂತ್ಯಗೊಂಡಿತು.

ಹಳಿಗಳ ಮೇಲೆ ಉರುಳಿ ಬಿದ್ದಿದ್ದ ಎಲ್ಲ 14 ಬೋಗಿಗಳನ್ನು ತೆರವುಗೊಳಿಸಲಾಗಿದೆ. ಹಲವಾರು ಹತಾಶ ಜನರು ಇನ್ನೂ ನಾಪತ್ತೆಯಾಗಿರುವ ತಮ್ಮವರನ್ನು ಹುಡುಕಾಡಲು ಯಾವುದಾದರೂ ಸುಳಿವು ದೊರೆಯಬಹುದೇ ಎಂದು ಘಟನಾ ಸ್ಥಳದಲ್ಲಿ ರಾಶಿ ರಾಶಿಯಾಗಿ ಬಿದ್ದಿರುವ ಲಗೇಜ್ ಮತ್ತು ಇತರ ಸೊತ್ತುಗಳನ್ನು ತಡಕಾಡುತ್ತಿದ್ದರು.

 ‘‘ನನ್ನ ಸೋದರನಿಗಾಗಿ ಹುಡುಕಾಡುತ್ತಿದ್ದೇನೆ. ಅವನಿಗೇನಾಗಿದೆಯೋ ಗೊತ್ತಿಲ್ಲ. ಆತ ತನ್ನ ಆಸನವನ್ನು ಬದಲಿಸಿದ್ದಿರಬಹುದು. ಅವನಿಗಾಗಿ ಎಲ್ಲ ಕಡೆಗೆ ಹುಡುಕಾಡಿದ್ದೇವೆ, ಆದರೆ ಇನ್ನೂ ಪತ್ತೆಯಾಗಿಲ್ಲ ’’ ಎಂದು ರಮಾನಂದ ತಿವಾರಿ ಹೇಳಿದರು.

ತನ್ನ ಕುಟುಂಬದ ಮೂವರು ಸದಸ್ಯರ ಶವಗಳನ್ನು ನೋಡಿದ ನಿರ್ಮಲ್ ವರ್ಮಾ ಅವರ ದುಃಖ ಕಟ್ಟೆಯೊಡೆದಿತ್ತು. ‘ನಾನು ಹುಡುಕಾಡಿದ್ದವರೆಲ್ಲ ಸತ್ತು ಹೋಗಿದ್ದಾರೆ. ನನ್ನ ಸೋದರ, ನನ್ನ ದೊಡ್ಡತ್ತಿಗೆ, ಮಗಳು ಎಲ್ಲ ಸತ್ತಿದ್ದಾರೆ. ನನ್ನ ತಾಯಿಯನ್ನು ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗಿಲ್ಲ. ಆಕೆಯೂ ಇದೇ ರೀತಿ ಶವವಾಗಿ ಪತ್ತೆಯಾಗುತ್ತಾಳೋ ಎಂಬ ಭಯ ನನ್ನನ್ನು ಕಾಡುತ್ತಿದೆ ’’ ಎಂದು ವರ್ಮಾ ಕಣ್ಣೀರ ಕೋಡಿಯ ನಡುವೆಯೇ ಹೇಳಿದರು. ವರ್ಮಾರ ಕುಟುಂಬ ಬಂಧುಗಳ ಮದುವೆಗೆಂದು ಈ ನತದೃಷ್ಟ ರೈಲಿನಲ್ಲಿ ಪ್ರಯಾಣಿಸುತ್ತಿತ್ತು. ವರ್ಮಾ ಕೂಡ ಅವರೊಂದಿಗೇ ತೆರಳಬೇಕಿತ್ತು. ಆದರೆ ತಾನು ಕೆಲಸ ಮಾಡುತ್ತಿರುವ ಕಚೇರಿಯಲ್ಲಿ ತಕ್ಷಣಕ್ಕೆ ರಜೆ ಸಿಕ್ಕಿರಲಿಲ್ಲ. ಹೀಗಾಗಿ ನಂತರ ತನ್ನ ಕುಟುಂಬವನ್ನು ಸೇರಿಕೊಳ್ಳಲು ಅವರು ಉದ್ದೇಶಿಸಿದ್ದರು, ಆದರೆ ಈ ಸ್ಥಿತಿಯಲ್ಲಲ್ಲ...

 ಈವರೆಗೆ 143 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 110 ಜನರ ಗುರುತು ತಿಳಿದು ಬಂದಿದೆ ಎಂದು ಕಾನ್ಪುರ ವಲಯ ಐಜಿ ಝಕಿ ಅಹ್ಮದ್ ತಿಳಿಸಿದರು.

ರವಿವಾರ ರಾತ್ರಿಯವರೆಗೆ 120 ಶವಗಳನ್ನು ಹೊರತೆಗೆಯಲಾಗಿದ್ದು,ರಾತ್ರಿಯಿಡೀ ನಡೆದ ಕಾರ್ಯಾಚರಣೆ ಸಂದರ್ಭ ಉಳಿದ ಶವಗಳು ಪತ್ತೆಯಾಗಿವೆ.

ಮರಣೋತ್ತರ ಪರೀಕ್ಷೆಯ ಬಳಿಕ 105 ಮೃತದೇಹಗಳನ್ನು ಕುಟುಂಬಗಳಿಗೆ ಒಪ್ಪಿಸ ಲಾಗಿದೆ ಮತ್ತು ಅವುಗಳ ಸಾಗಾಟಕ್ಕೆ ಉಚಿತ ಆ್ಯಂಬುಲನ್ಸ್‌ಗಳನ್ನು ಒದಗಿಸಲಾಗಿದೆ ಎಂದು ಕಾನ್ಪುರದ ಮುಖ್ಯ ವೈದ್ಯಾಧಿಕಾರಿ ರಾಮಾಯಣ ಪ್ರಸಾದ್ ತಿಳಿಸಿದರು.

ಸೋಮವಾರ ಸಂಜೆಯವರೆಗೆ ಬಿಹಾರಕ್ಕೆ 24, ಮಧ್ಯಪ್ರದೇಶಕ್ಕೆ 25 ಮತ್ತು ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಿಗೆ 56 ಮೃತದೇಹಗಳನ್ನು ರವಾನಿಸಲಾಗಿದೆ.

202 ಗಾಯಾಳುಗಳ ಪೈಕಿ 83 ಜನರನ್ನು ಕಾನ್ಪುರ ಮತ್ತು ಆಸುಪಾಸಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಉಳಿದವರಿಗೆ ಚಿಕಿತ್ಸೆ ನೀಡಿ ಬಿಡುಗಡೆಗೊಳಿಸಲಾಗಿದೆ. ಆಸ್ಪತ್ರೆಗೆ ದಾಖಲಾಗಿರುವವರ ಪೈಕಿ 73 ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ಪ್ರಸಾದ್ ತಿಳಿಸಿದರು.

 ದುರಂತದ ದೃಶ್ಯಗಳ ನಡುವೆಯೇ ಹಲವಾರು ಹೃದಯವಂತರು ಸ್ವಯಂಸೇವಕರಾಗಿ ಮುಂದೆ ಬಂದು ದಿಗ್ಭ್ರಾಂತ ಪ್ರಯಾಣಿಕರಿಗೆ ಸಮಾಧಾನ ಹೇಳುವದರ ಜೊತೆಗೆ ರಕ್ಷಣಾ ಪಡೆಗಳಿಗೂ ನೆರವಾದರು. ಸ್ಥಳದಲ್ಲಿದ್ದವರಿಗೆ ಆಹಾರ-ನೀರು ಪೂರೈಸುವ ಜೊತೆಗೆ ಆಸ್ಪತ್ರೆಗಳಿಗೂ ತೆರಳಿ ಗಾಯಾಳುಗಳಿಗೆ ಧೈರ್ಯ ತುಂಬುತ್ತಿದ್ದರಲ್ಲದೆ, ಅವರ ಅಗತ್ಯಗಳನ್ನು ್ನಪೂರೈಸುತ್ತಿದ್ದರು.

ಹಲವರು ಎನ್‌ಜಿಒಗಳು,ಆರೆಸ್ಸೆಸ್,ಸಿಖ್ ಸಂಘಟನೆಗಳು,ಹಲವಾರು ರಾಜಕೀಯ ಪಕ್ಷಗಳ ಕಾರ್ಯಕರ್ತರೂ ತಡರಾತ್ರಿಯವರೆಗೂ ಸ್ಥಳದಲ್ಲಿದ್ದು, ಅವಶೇಷಗಳಡಿ ಸಿಕ್ಕಿಕೊಂಡಿದ್ದ ಬದುಕಿದ್ದವರನ್ನು ಹೊರತೆಗೆಯಲು ಶ್ರಮಿಸುತ್ತಿದ್ದ ರಕ್ಷಣಾ ಪಡೆಗಳಿಗೆ ಸಹಕಾರ ನೀಡಿದರು.

ಹಳಿಗಳಲ್ಲಿಯ ಬಿರುಕಿನಿಂದಾಗಿ ಈ ಅಪಘಾತ ಸಂಭವಿಸಿರಬಹುದೆಂದು ಮೇಲ್ನೋ ಟಕ್ಕೆ ಕಂಡುಬರುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉನ್ನತ ಮಟ್ಟದ ತನಿಖೆಗೆ ಆದೇಶಿಸಿರುವ ರೈಲ್ವೆ ಸಚಿವ ಸುರೇಶ ಪ್ರಭು ಅವರು ಇಂದು ಲೋಕಸಭೆಯಲ್ಲಿ ಸ್ವಯಂಪ್ರೇರಿತ ಹೇಳಿಕೆಯೊಂದನ್ನು ನೀಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News