ಕೇಂದ್ರವು ಯಾವ ಅಧಿಕಾರದಿಂದ 2000 ರೂ. ನೋಟಿನಲ್ಲಿ ದೇವನಾಗರಿ ಅಂಕಿಗಳನ್ನು ಬಳಸಿದೆ?
ಚೆನ್ನೈ,ನ.21: ಕೇಂದ್ರ ಸರಕಾರವು ಹೊಸ 2,000 ರೂ.ಕರೆನ್ಸಿ ನೋಟಿನಲ್ಲಿ ಮಾಮೂಲಿನ ಇಂಗ್ಲೀಷ್ ಅಂಕಿಗಳ ಜೊತೆಗೆ ಯಾವ ಅಧಿಕಾರದಿಂದ ದೇವನಾಗರಿ ಅಂಕಿಗಳನ್ನು ಬಳಸಿದೆ ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ಸೋಮವಾರ ಪ್ರಶ್ನಿಸಿದೆ.
ದೇವನಾಗರಿ ಅಂಕಿಗಳ ಬಳಕೆಯ ಕುರಿತು ವಿತ್ತ ಸಚಿವಾಲಯದಿಂದ ಉತ್ತರಕ್ಕಾಗಿ ಆಗ್ರಹಿಸಿರುವ ಮದುರೈ ನಿವಾಸಿ ಕೆಪಿಟಿ ಗಣೇಶನ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಮದ್ರಾಸ್ ಉಚ್ಚ ನ್ಯಾಯಾಲಯದ ಮದುರೈ ಪೀಠವು ಈ ಪ್ರಶ್ನೆಯನ್ನು ಮುಂದಿರಿಸಿದೆ. ದೇವನಾಗರಿ ಅಂಕಿಗಳ ಬಳಕೆಯು ಭಾರತೀಯ ಸಂವಿಧಾನಕ್ಕೆ ವಿರುದ್ಧ ವಾಗಿರುವುದರಿಂದ, ಹೊಸ 2,000 ರೂ.ಗಳನ್ನು ಅಸಿಂಧು ಎಂದು ಪರಿಗಣಿಸುವಂತೆ ಗಣೇಶನ್ ನ್ಯಾಯಾಲಯವನ್ನು ಕೋರಿದರು.
1963ರಲ್ಲಿ ಜಾರಿಗೆ ಬಂದಿರುವ ಅಧಿಕೃತ ಭಾಷೆಗಳ ಕಾಯ್ದೆಯು ದೇವನಾಗರಿ ಅಂಕಿಗಳ ಬಳಕೆಗೆ ಯಾವುದೇ ಅವಕಾಶವನ್ನು ಕಲ್ಪಿಸಿಲ್ಲ. ರಾಷ್ಟ್ರಪತಿಗಳೂ ಸಹ ದೇವನಾಗರಿಯ ಇಂತಹ ಬಳಕೆಗೆ ಅನುಮತಿ ನೀಡಿಲ್ಲ ಎಂದು ಗಣೇಶನ್ ಪರ ವಕೀಲರು ವಾದಿಸಿದರು.
ಅಲ್ಲದೇ ಕೇಂದ್ರವು ಸಂಸತ್ತಿನಲ್ಲಿ ಯಾವುದೇ ಕಾನೂನನ್ನು ಅಂಗೀಕರಿಸದೆ 2,000 ರೂ.ನೋಟುಗಳನ್ನು ಮುದ್ರಿಸಿದೆ. ಆದ್ದರಿಂದ ಅವುಗಳನ್ನು ಅಸಿಂಧು ಎಂದು ಘೋಷಿಸಬೇಕು ಎಂದು ಅವರು ಪ್ರತಿಪಾದಿಸಿದರು.