ನೋಟು ರದ್ದತಿ: ಒಂದಾದ 10 ವಿಪಕ್ಷಗಳು
ಹೊಸದಿಲ್ಲಿ, ನ.21: ನೋಟು ರದ್ದತಿಯನ್ನು ಸಮಾನ ನೆಲೆಯಾಗಿಸಿಕೊಂಡಿರುವ 10 ವಿಪಕ್ಷಗಳು ಸಂಸತ್‌ನ ಒಳಗೆ ಹಾಗೂ ಹೊರಗೆ ಸರಕಾರದ ವಿರುದ್ಧ ಒಗ್ಗಟ್ಟಿನಲ್ಲಿ ದಾಳಿ ನಡೆಸಲು ಇಂದು ನಿರ್ಧರಿಸಿವೆ.
ಸರಕಾರದ ವಿರುದ್ಧ ದಾಳಿಯನ್ನು ಹೆಚ್ಚಿಸುವ ಗುರಿಯೊಂದಿಗೆ ಸಮಾನ ಕಾರ್ಯಯೋಜನೆಯೊಂದನ್ನು ರೂಪಿಸಲು ಇಂದು ಮುಂಜಾನೆ ಕಾಂಗ್ರೆಸ್, ಜೆಡಿಯು, ಬಿಎಸ್ಪಿ, ಸಿಪಿಐ, ಸಿಪಿಎಂ, ಎನ್‌ಸಿಪಿ, ಆರ್‌ಜೆಡಿ, ಜೆಎಂಎಂ ಹಾಗೂ ಡಿಎಂಕೆ ನಾಯಕರು ಸಭೆಯೊಂದನ್ನು ನಡೆಸಿದ್ದರು.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಭಾಗವಹಿಸಿದ್ದ ಈ ಸಭೆಯಲ್ಲಿ ಲೋಕಸಭೆಯಲ್ಲಿ ನಿಲುವಳಿ ಗೊತ್ತುವಳಿಯೊಂದಕ್ಕೆ ಹಾಗೂ ಮತವಿಭಜನೆಗೆ ಅವಕಾಶವಿರುವ ನಿಯಮದನ್ವಯ ಚರ್ಚೆಗೆ ಈ ಎಲ್ಲ ಪಕ್ಷಗಳು ಒತ್ತಡ ಮುಂದುವರಿಸಬೇಕೆಂದು ತೀರ್ಮಾನಿಸಲಾಯಿತು.
ಈ ಬೇಡಿಕೆಗಳಿಗಾಗಿಯೇ ಕಳೆದೆರಡು ದಿನದ ಸಂಸತ್ ಕಲಾಪ ಆಹುತಿಯಾಗಿದೆ.
ಚಳಿಗಾಲದ ಅಧಿವೇಶನದ ವೇಳೆ ಸಂಸತ್ ಸಮಾವೇಶಗೊಳ್ಳುವ ಮೊದಲು ಪ್ರತಿ ದಿನ ಬೆಳಗ್ಗೆ ಇದೇ ರೀತಿಯ ವ್ಯೆಹಾತ್ಮಕ ಸಭೆಗಳನ್ನು ನಡೆಸಲು ಈ ವಿಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ. ಈ 10 ಪಕ್ಷಗಳ ಸಂಸದರು ಬುಧವಾರ ಸಂಸತ್ ಸಂಕೀರ್ಣದ ಮಹಾತ್ಮಾಗಾಂಧಿ ಪ್ರತಿಮೆಯ ಬಳಿ ಧರಣಿಯೊಂದನ್ನು ನಡೆಸಲೂ ತೀರ್ಮಾನಿಸಿದ್ದಾರೆಂದು ಮೂಲಗಳು ತಿಳಿಸಿವೆ.
ವಿಪಕ್ಷಗಳನ್ನು ಒಟ್ಟಾಗಿಸಲು ತೃಣಮೂಲ ಕಾಂಗ್ರೆಸ್ ನಾಯಕತ್ವ ವಹಿಸಿರುವುದರಿಂದ ಪಕ್ಷದ ವರಿಷ್ಠ ಮಮತಾ ಬ್ಯಾನರ್ಜಿ, ಚಳವಳಿ ಕಾರ್ಯಕ್ರಮಕ್ಕಾಗಿ ನಾಳೆ ದಿಲ್ಲಿ ತಲುಪುವ ನಿರೀಕ್ಷೆಯಿದೆಯೆಂದು ಅವು ಹೇಳಿವೆ.
ರಾಹುಲ್ ಮಾತ್ರವಲ್ಲದೆ, ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಝಾದ್, ಟಿಎಂಸಿಯ ಸುದೀಪ್ ಬಂದೋಪಾಧ್ಯಾಯ, ಡೆರೆಕ್ ಒ’ಬ್ರಿಯಾನ್, ಜೆಡಿಯುನ ಶರದ್ ಯಾದವ್, ಬಿಎಸ್ಪಿಯ ಸತೀಶ್ ಮಿಶ್ರಾ, ಸಿಪಿಎಂನ ಸೀತಾರಾಮ್ ಯೆಚೂರಿ, ಸಿಪಿಎಯ ಡಿ. ರಾಜಾ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.
ನೋಟು ರದ್ದತಿಯ ಕುರಿತು ಪ್ರಧಾನಿ ಸಮಾವೇಶಗಳಲ್ಲಿ ಮಾತನಾಡುತ್ತಾರೆ. ಆದರೆ, ವಿಪಕ್ಷಗಳನ್ನುದ್ದೇಶಿಸಿ ಮಾತನಾಡುವುದಿಲ್ಲ. ನೋಟು ರದ್ದತಿ ಮಾಹಿತಿ ಕೆಲವು ಕಾರ್ಪೊರೇಟ್‌ಗಳಿಗೆ ಸೋರಿಕೆಯಾಗಿರುವ ಬಗ್ಗೆ ತನಿಖೆಗೆ ಜೆಪಿಸಿ ರಚನೆ ಹಾಗೂ ಬ್ಯಾಂಕ್ ಹಾಗೂ ಎಟಿಎಂಗಳ ಸರತಿ ಸಾಲುಗಳಲ್ಲಿ ಜನರ ಸಾವು ಇತ್ಯಾದಿಗಳ ಕುರಿತು ಚರ್ಚೆ ತಮ್ಮ ಬೇಡಿಕೆಯಾಗಿದೆಯೆಂದು ಸಿಪಿಎಂನ ಮುಹಮ್ಮದ್ ಸಲೀಂ ಹೇಳಿದ್ದಾರೆ.