ಜಿಪಂ: ಪ್ಲಾಸ್ಟಿಕ್ ಮುಕ್ತಗೊಳಿಸಲು ಶೇ.5 ಅನುದಾನ ಮೀಸಲು

Update: 2016-11-21 18:18 GMT

ಮಂಗಳೂರು, ನ.21: ಗ್ರಾಪಂ, ತಾಪಂ, ಜಿಪಂ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಮುಕ್ತ ಹಾಗೂ ಶುಚಿತ್ವ ಕಾಪಾಡಿಕೊಳ್ಳುವ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ತಲಾ ಶೇ.5ರಷ್ಟು ಅನುದಾನ ಮೀಸಲಿಡಬೇಕೆಂಬ ನಿರ್ಣಯವನ್ನು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಮಾದರಿ ಗ್ರಾಮ ಸಂವಾದ-ಸಂಕಲ್ಪ ಕಾರ್ಯಕ್ರಮದಲ್ಲಿ ಕೈಗೊಳ್ಳಲಾಯಿತು. ಸೋಮವಾರ ಜಿಪಂ ಸಭಾಂಗಣದಲ್ಲಿ ಅಪ್ನಾದೇಶ್ ಅಭಿಯಾನ, ಜನಶಿಕ್ಷಣ ಟ್ರಸ್ಟ್, ಗ್ರಾಮ ವಿಕಾಸ ಕೇಂದ್ರ ಸುಗ್ರಾಮ ಸಂಘ, ವಿಶ್ವವಿದ್ಯಾನಿಲಯ ಕಾಲೇಜು, ಪ್ರೆಸ್‌ಕ್ಲಬ್, ಚಿತ್ತಾರ ಬಳಗ, ಪ್ರಜ್ಞಾ ಹಾಗೂ ಪಂಚಾಯತ್‌ರಾಜ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಈ ಸಂಕಲ್ಪ ಮಾಡಲಾಯಿತು. ಪ್ರತಿ ಮನೆಯಲ್ಲಿ ಪ್ಲಾಸ್ಟಿಕ್ ಸಂಗ್ರಹಿಸುವುದು, ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಸುಡದಂತೆ ಎಚ್ಚರ ವಹಿಸುವುದು, ಸಂಗ್ರಹಿಸಿದ ಪ್ಲಾಸ್ಟಿಕ್‌ಗಳನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಜಿಪಂ ಕಾರ್ಯಪ್ರವೃತ್ತರಾಗುವುದು ಹಾಗೂ ಬ್ಯಾನರ್ ನಿಷೇಧ ಸೇರಿದಂತೆ 9 ಅಂಶಗಳ ನಿರ್ಣಯವನ್ನು ಈ ಸಂದರ್ಭ ಅಂಗೀಕರಿಸಲಾಯಿತು. ಜನಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಶೀನ ಶೆಟ್ಟಿ ಮಾತನಾಡಿ, ಪ್ಲಾಸ್ಟಿಕ್ ಸುಡುವುದು ಅಥವಾ ಪರಿಸರಕ್ಕೆ ಎಸೆಯುವುದು ಬಹಳ ವಿಷಕಾರಿ. ಈ ನಿಟ್ಟಿನಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದ್ದು, ಜಾಗೃತರಾಗಿರುವ ಸುಮಾರು 5,000 ಮನೆಗಳಲ್ಲಿ ಪ್ಲಾಸ್ಟಿಕ್ ಸುಡುವುದನ್ನು ನಿಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು. ತ್ಯಾಜ್ಯ ವಿಲೇವಾರಿ ಬಗ್ಗೆ ಸೂಕ್ತ ಸಲಹೆಗೆ ಸೂಚನೆ

ಚಂದ್ರಶೇಖರ್ ಪಾತೂರು ಮಾತನಾಡಿ, ಸ್ವಚ್ಛತೆಯ ಆಂದೋಲನದ ಅವಧಿಯಲ್ಲಿನ ಉತ್ಸಾಹ ನಿರಂತರವಾಗಿ ಮುಂದುವರಿ ಯುವುದಿಲ್ಲ. ಕಾನೂನು ಮೂಲಕ ಆಗುವು ದಕ್ಕಿಂತ ಈ ಕುರಿತು ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಿದಾಗ ಶುಚಿತ್ವ ಸಾಧಿಸಲು ಸಾಧ್ಯ ಎಂದರು. ಸಹೋದರಿ ನಿವೇದಿತಾ ಸಂಸ್ಥೆಯ ಶೃತಿ ಮಾತನಾಡಿ, ಮರುಬಳಕೆಯಾಗುವ ಪ್ಲಾಸ್ಟಿಕ್‌ಗಳು ಮಾತ್ರವೇ ಮಾರುಕಟ್ಟೆಯಲ್ಲಿ ಲಭ್ಯವಾಗುವಂತಾದಾಗ ಪ್ಲಾಸ್ಟಿಕ್‌ನಿಂದಾಗಿ ಪರಿಸರ ಹಾನಿಯನ್ನು ತಡೆಗಟ್ಟಲು ಸಾಧ್ಯ ಎಂದರು. ಜಿಪಂ ಸದಸ್ಯೆ ಮಮತಾ ಗಟ್ಟಿ ಮಾತನಾಡಿ, ಪ್ಲಾಸ್ಟಿಕ್ ಹಾಗೂ ಸ್ವಚ್ಛತೆಯ ಜಾಗೃತಿ ಮೂಡಿಸುವ ಸಲುವಾಗಿ ಸಂಬಂಧ ಪಟ್ಟ ಅಂಗಡಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಿಯಮ ಉಲ್ಲಂಘಿಸಿ ಕಾರ್ಯಾಚರಣೆ ಮಾಡುವ ಅಂಗಡಿಗಳ ಪರವಾನಿಗೆ ರದ್ದು ಮಾಡುವ ನಿಟ್ಟಿನಲ್ಲಿ ಗ್ರಾಪಂ ಪಿಡಿಒಗಳು ಮುಂದಾಗಬೇಕೆಂದು ಆಗ್ರಹಿಸಿದರು. ಪತ್ರಕರ್ತ ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಮಾತನಾಡಿ, ಪ್ಲಾಸ್ಟಿಕ್ ವಸ್ತುಗಳನ್ನು ಮನಸ್ಸಿಗೆ ಬಂದಂತೆ ಎಸೆಯುವವರ ಮೇಲೆ ನಿಗಾ ಇಡುವ ಸಲುವಾಗಿ ದಂಡ ವಿಧಿಸುವ ಅಸ್ತ್ರ ಬಳಸಿದಾಗ ಸ್ವಲ್ಪಮಟ್ಟಿನ ನಿಯಂತ್ರಣ ಸಾಧ್ಯ ಎಂದರು. ಈ ಕುರಿತು ಪ್ರತಿಕ್ರಿಯಿಸಿದ ಜಿಪಂ ಉಪಕಾರ್ಯದರ್ಶಿ ಎನ್.ಆರ್.ಉಮೇಶ್, ಸಭೆ ಸಮಾರಂಭ ನಡೆದಾಗ ಪ್ಲಾಸ್ಟಿಕ್ ಬ್ಯಾನರ್ ಅಳವಡಿಕೆಗೆ ಅವಕಾಶವಿಲ್ಲ. ಈ ಕುರಿತು ಈಗಾಗಲೇ ಗ್ರಾಪಂಗಳಿಗೆ ನಿರ್ದೇಶನ ನೀಡಲಾಗಿದೆ. ಒಂದು ವೇಳೆ ಕಾನೂನು ಮೀರಿ ಅಳವಡಿಕೆ ಆಗಿರುವುದು ಕಂಡು ಬಂದರೆ ಸಂಬಂಧಪಟ್ಟ ಗ್ರಾಪಂ ಪಿಡಿಒಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಾಂಸದ ಅಂಗಡಿ ಸೇರಿದಂತೆ ಇತರ ಅಂಗಡಿ ಮುಂಗಟ್ಟುಗಳಲ್ಲಿ ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡುವಂತೆ ಪಿಡಿಒಗಳು ಮಾಲಕರಿಗೆ ಸಲಹೆ ನೀಡಬೇಕು. ಸ್ವ-ಸಹಾಯ ಸಂಘ ಹಾಗೂ ಇತರ ಸಂಘ ಸಂಸ್ಥೆಗಳ ಮೂಲಕ ಪ್ಲಾಸ್ಟಿಕ್ ಜಾಗೃತಿ ಮೂಡಿಸಿ ಮನೆ ಮನೆಗೆ ಭೇಟಿ ನೀಡಿ ಪ್ಲಾಸ್ಟಿಕ್ ಸಂಗ್ರಹಿಸಬೇಕು. ಸಂಗ್ರಹಿಸಿದ ಪ್ಲಾಸ್ಟಿಕ್‌ಗಳನ್ನು ಒಂದು ಗೋದಾಮ ಮಾಡಿ ಸಂಗ್ರಹಿಸುವ ಕೆಲಸ ಮಾಡುವಂತಾಗಲಿ.

*ಮೀನಾಕ್ಷಿ ಶಾಂತಿಗೋಡು,

ದ.ಕ. ಜಿಪಂ ಅಧ್ಯಕ್ಷೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News