ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ದಾಖಲೆ

Update: 2016-11-22 13:16 GMT

ಪುತ್ತೂರು, ನ.22: ಇಲ್ಲಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕೋಲಾರದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಟ್ಟದ ಅಂತರ್‌ಕಾಲೇಜು ಅತ್ಲೆಟಿಕ್ ಸ್ಪರ್ಧೆಗಳಲ್ಲಿ ದಾಖಲೆಯ ಸಾಧನೆ ಮಾಡಿದ್ದಾರೆ.

ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಆದರ್ಶ್ ಎಸ್.ಪಿ. ಟ್ರಿಪಲ್ ಜಂಪ್‌ನಲ್ಲಿ 13.93 ಮೀಟರ್ ಜಿಗಿದು ಸ್ವರ್ಣಪದಕವನ್ನು ಗೆಲ್ಲುವುದರ ಜೊತೆಗೆ ನೂತನ ಕೂಟ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಲಾಂಗ್ ಜಂಪ್ ಸ್ಪರ್ಧೆಯಲ್ಲಿಯೂ ಅವರು ಚಿನ್ನದ ಪದಕ ಗಳಿಸಿಕೊಳ್ಳುವ ಮೂಲಕ ಹುಡುಗರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಶಿಪ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಕ್ರೀಡಾ ಕೂಟದ ಶ್ರೇಷ್ಟ ಅತ್ಲೀಟ್ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ ಕ್ರೀಡಾ ಕೂಟದಲ್ಲಿ ಒಟ್ಟು 125 ತಂಡಗಳು ಭಾಗವಹಿಸಿದ್ದು, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ತಂಡವು ಮೂರನೆ ಸ್ಥಾನ ಗಳಿಸಿಕೊಂಡಿದೆ.
  
ದ್ವಿತೀಯ ವರ್ಷದ ಮಾಹಿತಿ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿ ಕೆ.ಎ.ಕೃಷ್ಣಮೂರ್ತಿ, ಅವರು 1,500 ಮೀ. ಮತ್ತು 800 ಮೀ. ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದಿದ್ದಾರೆ. ಅಂತಿಮ ವರ್ಷದ ಎಂಬಿಎ ವಿದ್ಯಾರ್ಥಿ ವಿಶಾಲ್ ಆಚಾರ್ ಅವರು ಶಾಟ್‌ಪುಟ್ ಮತ್ತು ಡಿಸ್ಕಸ್ ಎಸೆತದಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಅಂತಿಮ ವರ್ಷದ ಮೆಕ್ಯಾನಿಕಲ್ ವಿಬಾಗದ ವಿದ್ಯಾರ್ಥಿ ದೀಪಕ್ ಕುಮಾರ್ ಅವರು 110ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.

ನಿಖಿಲ್ ಜಿ., ವಿನ್ಯಾಸ್ ಚೌಟ, ಆದರ್ಶ್ ಎಸ್. ಪಿ. ಮತ್ತು ಕೆ.ಎ. ಕೃಷ್ಣಮೂರ್ತಿ ಅವರ ತಂಡವು ಹುಡುಗರ ವಿಭಾಗದ 4*400 ಮೀ ರಿಲೇ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದೆ. ಮಹಿಳೆಯರ ವಿಬಾಗದಲ್ಲಿ ತೃತೀಯ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ಹರ್ಷಿತಾ ಎತ್ತರ ಜಿಗಿತ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಮತ್ತು ಚೈತ್ರಾ ಪಿ. 400 ಮೀ. ಹರ್ಡಲ್ಸ್‌ನಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಬಾರ್ತಿಕುಮೇರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News