ವಿಟ್ಲದಲ್ಲೂ ನಕಲಿ ನೋಟು ಪತ್ತೆ!

Update: 2016-11-22 14:02 GMT

ಬಂಟ್ವಾಳ, ನ. 22: ಕೇಂದ್ರ ಸರಕಾರ 500, 1000 ರೂ. ಮುಖಬೆಲೆಯ ನೋಟು ರದ್ದುಪಡಿಸಿದ ಬಳಿಕ ದಿನನಿತ್ಯದ ಖರ್ಚಿನ ಹಣಕ್ಕಾಗಿ ಇಡೀ ದೇಶದಲ್ಲಿ ಬಡ ಜನರು ಬ್ಯಾಂಕ್, ಎಟಿಎಂ ಮುಂದೆ ಪರದಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಈ ನಡುವೆ ಕೇಂದ್ರ ಸರಕಾರ ಹೊರ ತಂದಿರುವ 2000 ರೂ. ಮುಖಬೆಲೆಯ ನೋಟಿನ ಕಲರ್ ಪ್ರಿಂಟ್ ತೆಗೆದು ಜನರನ್ನು ಮೋಸ ಮಾಡುತ್ತಿರುವ ಜಾಲ ಸಕ್ರಿಯವಾಗಿದೆ ಎಂದು ದೂರದ ಊರಿನಲ್ಲಿ ಕೇಳಿ ಬರುತ್ತಿದ್ದ ಆರೋಪ ಇದೀಗ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದಲ್ಲಿ ಸತ್ಯವಾಗಿದೆ.

ಪುಣಚ ಗ್ರಾಮದ ಎರ್ಮೆತೊಟ್ಟು ನಿವಾಸಿ, ಕೂಲಿ ಕಾರ್ಮಿಕ ಕೃಷ್ಣಪ್ಪಎಂಬವರು 2000 ರೂ.ನ ನಕಲಿ ನೋಟಿನಿಂದ ವಂಚನೆಗೊಳಗಾಗಿದ್ದಾರೆ. ಈ ಕುರಿತು ಅವರು ವಿಟ್ಲ ಪೊಲೀಸ್ ಠಾಣೆಗೆ ಖುದ್ದು ನೋಟಿನೊಂದಿಗೆ ತೆರಳಿ ದೂರು ದಾಖಲಿಸಿ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.

ಕೂಲಿ ಕಾರ್ಮಿಕನಾಗಿರುವ ಕೃಷ್ಣಪ್ಪ ಸೋಮವಾರ ವಿಟ್ಲದ ಫೈನಾನ್ಸ್‌ವೊಂದರಲ್ಲಿ ಚಿನ್ನ ಅಡವಿಟ್ಟು ಹಣ ತೆಗೆದಿದ್ದರು. ಫೈನಾನ್ಸ್ ಸಿಬ್ಬಂದಿ ಕೃಷ್ಣಪ್ಪರಿಗೆ 2000 ರೂ.ನ ಒಂದು ನೋಟು ನೀಡಿದ್ದರು. ಅದರ ಚಿಲ್ಲರೆಗಾಗಿ ಅವರು ವಿಟ್ಲ ಮತ್ತು ಪುಣಚದ ಪೆಟ್ರೋಲ್ ಬಂಕ್‌ಗೆ ತೆರಳಿದ್ದರೂ ಚಿಲ್ಲರೆ ಸಿಗಲಿಲ್ಲ. ಬಳಿಕ ಅವರು ಇತರ ವ್ಯಕ್ತಿಗಳ ಬಳಿ ಹಾಗೂ ವಿವಿಧ ಅಂಗಡಿಗಳಿಗೆ ಚಿಲ್ಲರೆಗಾಗಿ ಅಲೆದಾಡಿದ್ದಾರೆ. ಆದರೆ ಅವರಿಗೆ ಯಾರಿಂದಲೂ ಚಿಲ್ಲರೆ ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಕೊನೆಗೆ ಪುಣಚದ ಮದ್ಯದಂಗಡಿಯೊಂದಕ್ಕೆ ತೆರಳಿದ ಅವರು 2,000 ರೂ.ನ ನೋಟು ನೀಡಿ ಮದ್ಯ ಖರೀದಿಸಿ ಉಳಿದ ಚಿಲ್ಲರೆ ಹಣ ಪಡೆದು ಅಲ್ಲಿಂದ ವಾಪಸಾಗಿದ್ದರು.

ಮದ್ಯ ಖರೀದಿಸಿ ಮನೆಯತ್ತ ತೆರಳುತ್ತಿದ್ದ ವೇಳೆ ಬೈಕಿನಲ್ಲಿ ಅವರ ಬಳಿಗೆ ಬಂದ ಮದ್ಯದಂಗಡಿಯ ಇಬ್ಬರು ಸಿಬ್ಬಂದಿ ನೀವು ನೀಡಿರುವ 2000 ರೂ.ನ ನೋಟು ಕಲರ್ ಪ್ರಿಂಟ್‌ನ ನಕಲಿ ನೋಟಾಗಿದೆ ಎಂದು ಹೇಳಿ ನೋಟನ್ನು ಹಿಂತಿರುಗಿಸಿ ಮದ್ಯವನ್ನು ವಾಪಸ್ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆಯಿಂದ ಚಿಂತಾಗ್ರಾಂತರಾದ ಅವರು ಇಂದು ಫೈನಾನ್ಸ್‌ಗೆ ತೆರಳಿ ವಿಷಯ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಫೈನಾನ್ಸ್‌ರವರು ನಾವು 2000 ರೂ. ನೋಟನ್ನು ರಾಷ್ಟ್ರೀಕೃತ ಬ್ಯಾಂಕಿನಿಂದ ಪಡೆದಿದ್ದೇವೆ. ಅದರಿಂದ ಒಂದು ನೋಟು ನಿಮಗೆ ನೀಡಿದ್ದು ರಾಷ್ಟ್ರೀಕೃತ ಬ್ಯಾಂಕ್‌ನಿಂದಲೇ ನಕಲಿ ನೋಟು ಬಂದಿರಲು ಸಾಧ್ಯವಿಲ್ಲ ಎಂದು ಉತ್ತರ ನೀಡಿದ್ದಾರೆ ಎನ್ನಲಾಗಿದೆ.

ಬಳಿಕ ಅವರು ಊರಿನ ಪ್ರಮುಖರೊಂದಿಗೆ ವಿಟ್ಲ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ನೀಡಿ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ದೂರಿನ ಮೇರೆಗೆ ಎಸೈ ಪ್ರಕಾಶ್ ದೇವಾಡಿಗ ಕೂಡಲೇ ಫೈನಾನ್ಸ್‌ಗೆ ಭೇಟಿ ನೀಡಿ ಅಲ್ಲಿನ ಸಿಸಿ ಕ್ಯಾಮರಾವನ್ನು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಲರ್ ಪ್ರಿಂಟ್ ತೆಗೆದ 2000 ರೂ.ನ ನಕಲಿ ನೋಟು ನೀಡಿ ಮೋಸ ಮಾಡುತ್ತಿರುವ ಜಾಲವೊಂದು ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಕ್ರಿಯವಾಗಿದೆ ಎಂಬ ಆರೋಪ ಕೆಲವು ದಿನಗಳ ಹಿಂದೆ ಸಾರ್ವಜನಿಕರಿಂದ ಕೇಳಿ ಬಂದಿತ್ತು. ಈ ಬಗ್ಗೆ ಪೊಲೀಸರು ಕೂಡಾ ಒಂದೆರಡು ಕಡೆಗೆ ದಾಳಿ ಕಾರ್ಯಾಚರಣೆ ನಡೆಸಿದ್ದರು. ಅದರ ಬೆನ್ನಲ್ಲೇ ನಕಲಿ ನೋಟು ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News