ಸಾಧ್ಯವಿದ್ದರೆ ಯುನಿಫಾರ್ಮ್ ಸಿವಿಲ್ ಕ್ಲೋತ್ ಜಾರಿ ಮಾಡಿ : ಉಮರ್ ಶರೀಫ್

Update: 2016-11-22 15:12 GMT

ಮಂಗಳೂರು, ನ.22: ಕೇಂದ್ರ ಸರಕಾರ ಜಾರಿಗೆ ತರಲುದ್ದೇಶಿಸಿರುವ ಯುನಿಫಾರ್ಮ್ ಸಿವಿಲ್ ಕೋಡ್ (ಸಮಾನ ನಾಗರಿಕ ಸಂಹಿತೆ)ಗಿಂತ ಯುನಿಫಾರ್ಮ್ ಸಿವಿಲ್ ಕ್ಲೋತ್ ಜಾರಿಗೆ ತಂದು ಧರ್ಮದ ಹೆಸರಿನಲ್ಲಿ ಬಟ್ಟೆ ತೊಡದೆ ರಸ್ತೆಯಲ್ಲಿ ನಡೆದಾಡುವವರನ್ನು ಬಟ್ಟೆ ತೊಡಿಸುವ ಕೆಲಸ ಮಾಡಲಿ ಎಂದು ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್‌ನ ಉಮರ್ ಶರೀಫ್ ಮೋದಿ ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಮುಸ್ಲಿಂ ಸೆಂಟ್ರಲ್ ಕಮಿಟಿ ದ.ಕ. ಮತ್ತು ಉಡುಪಿ ಜಿಲ್ಲೆಯ ನೇತೃತ್ವದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳ ಆಶ್ರಯದಲ್ಲಿ ಇಂದು ನಗರದ ನೆಹರೂ ಮೈದಾನದಲ್ಲಿ ನಡೆದ ಬೃಹತ್ ‘ಶರೀಅತ್ ಸಂರಕ್ಷಣಾ ಸಮಾವೇಶ’ವನ್ನುದ್ದೇಶಿಸಿ ಮಾತನಾಡಿದರು.

ಧಾರ್ಮಿಕ ಆಚರಣೆಯ ಭಾಗವಾಗಿ ಶರೀರದಲ್ಲಿ ಯಾವುದೇ ಬಟ್ಟೆ ಗಳಿಲ್ಲದೆ ರಸ್ತೆಗಳಲ್ಲಿ ನಡೆದಾಡುತ್ತಾರೆ. ಅವರ ಹಿಂದೆ ಮಹಿಳೆಯರೂ ಇರುತ್ತಾರೆ. ಸಮಾಜದಲ್ಲಿ ಇಂದಿಗೂ ನಡೆಯುತ್ತಿರುವ ಈ ಧಾರ್ಮಿಕ ಆಚಾರಗಳ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ. ಇದು ಅವರ ಧಾರ್ಮಿಕ ಸ್ವಾತಂತ್ರ ಮತ್ತು ಧಾರ್ಮಿಕ ಹಕ್ಕಾಗಿದೆ. ಅದನ್ನು ಮುಸ್ಲಿಮರು ಪ್ರಶ್ನಿಸಲು ಹೋಗುವುದಿಲ್ಲ. ಸಮಾಜದಲ್ಲಿ ಧರ್ಮದ ಆಧಾರದಲ್ಲಿ ಹೀಗೊಂದು ಆಚರಣೆ ಇರುವಾಗ ಶರೀಅತ್ ವಿಚಾರದಲ್ಲಿ ನೀವು ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಹೊರಟಿರುವುದು ಎಷ್ಟು ಸರಿ. ಸಮಾನ ನಾಗರಿಕ ಸಂಹಿತೆಗಿಂತ ಸಮಾನ ನಾಗರಿಕ ಬಟ್ಟೆ ಸಂಹಿತೆ ಜಾರಿಗೊಳಿಸಿ ವಸ್ತ್ರ ಹೀನರನ್ನು ವಸ್ತ್ರ ತೊಡಿಸುವ ಕೆಲಸ ಮಾಡಿದರೆ ಅದು ಅರ್ಥಪೂರ್ಣವಾದೀತು ಎಂದು ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದರು.

‘ನನಗೆ ಮುಸ್ಲಿಂ ಮಹಿಳೆಯರ ಬಗ್ಗೆ ಚಿಂತೆ ಇದೆ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿಕೆ ನೀಡಿದ್ದಾರೆ. ಮೋದಿಯವರೇ... ನಿಮಗೆ ನಮ್ಮ ಹೆಣ್ಣು ಮಕ್ಕಳ ಬಗ್ಗೆ ಕನಿಕರ ಇದ್ದರೆ ನಮಗೆ ನಿಮ್ಮ ಹೆಂಡತಿಯ ಬಗ್ಗೆ ಕನಿಕರ ಹುಟ್ಟುತ್ತಿದೆ. ಮೋದಿಯವರು ಜಶೋಧಾ ಬೆನ್‌ರನ್ನು ವಿವಾಹವಾಗಿದ್ದಾರೆಂಬುದನ್ನು ನಾವು ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಅವರಿಂದ ತಿಳಿದುಕೊಳ್ಳಬೇಕಾಯಿತು. ಪತ್ನಿಗೆ ಸ್ಥಾನಮಾನ ನೀಡದ ನೀವು ಮೊದಲು ನಿಮ್ಮ ಮನೆಯನ್ನು ಸರಿಪಡಿಸಿಕೊಳ್ಳಿ ಎಂದು ಪ್ರಧಾನಿ ಮೋದಿಯವರಿಗೆ ಸಲಹೆ ನೀಡಿದರು.

ಮುಸ್ಲಿಂ ಸಮುದಾಯದ ಒಗ್ಗಟ್ಟಿಗಾಗಿ ನಾವು ಹಲವು ವರ್ಷಗಳಿಂದ ಪ್ರಯತ್ನಿಸಿದ್ದರೂ ಸಫಲವಾಗಿಲ್ಲ. ಆದರೆ, ಕೇಂದ್ರದಲ್ಲಿ ಆಡಳಿತ ಹಿಡಿದ ಬಿಜೆಪಿ ಸರಕಾರ ಶರೀಅತ್ ವಿಷಯದಲ್ಲಿ ಕೈ ಹಾಕುವ ಮೂಲಕ ಮುಸ್ಲಿಂ ಸಮುದಾಯವನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದಾರೆ. ಅದಕ್ಕೆ ಇಂದು ನೆಹರೂ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನರೇ ಸಾಕ್ಷಿ ಎಂದರು.

ಸಮಾನ ನಾಗರಿಕ ಸಂಹಿತೆ ಜಾರಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಇಂತಹ ಸೂಕ್ಷ್ಮ ವಿಷಯವನ್ನು ಆರೆಸ್ಸೆಸ್ ಮುಖಂಡ ಗೋಳ್ವಾಲ್ಕರ್ ಅವರೇ ಒಂದು ಮ್ಯಾಗಝಿನ್‌ಗೆ ನೀಡಿದ ಸಂದರ್ಶದಲ್ಲಿ ಹೇಳಿದ್ದರು. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿಯವರು ಈ ವಿಷಯಕ್ಕೆ ಕೈ ಹಾಕುವ ಮೂಲಕ ಮುಸ್ಲಿಂ ಸಮುದಾಯದ ವಿಭಜನೆಗೆ ಪ್ರಯತ್ನಿಸಿದ್ದಾರೆ ಎಂದು ಉಮರ್ ಶರೀಫ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News